ಕೇಂದ್ರ ಬಜೆಟ್ ಬೆನ್ನಲ್ಲೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

Update: 2019-07-06 17:43 GMT

ಹೊಸದಿಲ್ಲಿ,ಜು.6: ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ತನ್ನ 2019-20ನೇ ಸಾಲಿನ ಮುಂಗಡಪತ್ರದಲ್ಲಿ ಹಣಕಾಸು ಕ್ರೋಢೀಕರಣಕ್ಕೆ ಇಂಧನಗಳ ಮೇಲಿನ ತೆರಿಗೆಯನ್ನು ಹೆಚ್ಚಿಸಿದ ಪರಿಣಾಮ ಶನಿವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಪ್ರತಿ ಲೀ.ಗೆ ಅನುಕ್ರಮವಾಗಿ ಕನಿಷ್ಠ 2.40 ರೂ. ಮತ್ತು 2.36 ರೂ.ಏರಿಕೆಯಾಗಿದೆ.

 ದಿಲ್ಲಿ,ಮುಂಬೈ,ಕೋಲ್ಕತಾ ಮತ್ತು ಚೆನ್ನೈ ಮಹಾನಗರಗಳಲ್ಲಿ ಪೆಟ್ರೋಲ್ ಬೆಲೆಗಳಲ್ಲಿ ಪ್ರತಿ ಲೀಟರ್‌ಗೆ ಅನುಕ್ರಮವಾಗಿ

 2.45 ರೂ.(72.96ರೂ.),2.42 ರೂ.(78.57 ರೂ.),2.40 ರೂ.(75.15)ಮತ್ತು 2.57(75.76 ರೂ.) ರೂ.ಗಳಷ್ಟು ಏರಿಕೆಯಾಗಿದೆ. ಡೀಸೆಲ್ ಪ್ರತಿ ಲೀ.ಗೆ ದಿಲ್ಲಿಯಲ್ಲಿ 2.36 ರೂ.(66.69 ರೂ.) ಮತ್ತು ಮುಂಬೈನಲ್ಲಿ 2.50 ರೂ.(69.60 ರೂ.)ಏರಿಕೆಯಾಗಿದೆ.

ಸ್ಥಳೀಯ ಮಾರಾಟ ತೆರಿಗೆ ಅಥವಾ ವ್ಯಾಟ್‌ನ್ನು ಅವಲಂಬಿಸಿ ಇಂಧನ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿವೆ.

 ಸೀತಾರಾಮನ್ ಅವರು ವಾರ್ಷಿಕವಾಗಿ 24,000-28,000 ಕೋ.ರೂ.ಗಳನ್ನು ಸಂಗ್ರಹಿಸಲು ಶುಕ್ರವಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ ಹಾಗೂ ರಸ್ತೆ ಮತ್ತು ಮೂಲಸೌಕರ್ಯ ಮೇಲ್ತೆರಿಗೆಯನ್ನು ಪ್ರತಿ ಲೀ.ಗೆ ತಲಾ ಎರಡು ರೂ.ಗಳಷ್ಟು ಹೆಚ್ಚಿಸಿದ್ದರು.

ತೆರಿಗೆ ಹೆಚ್ಚಳಕ್ಕೆ ಮುನ್ನ ಪೆಟ್ರೋಲ್ ಮೇಲಿನ ಒಟ್ಟು ಅಬಕಾರಿ ಸುಂಕ ಪ್ರತಿ ಲೀ.ಗೆ 17.98 ರೂ. ಮತ್ತು 13.83 ರೂ.ಇದ್ದರೆ ಅದೀಗ ಕ್ರಮವಾಗಿ 19.98 ರೂ. ಮತ್ತು 15.83 ರೂ.ಗೆ ಏರಿಕೆಯಾಗಿದೆ.

2014ರಲ್ಲಿ ಮೋದಿ ಸರಕಾರವು ಅಧಿಕಾರಕ್ಕೆ ಬಂದ ನಂತರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕೇವಲ ಎರಡು ಬಾರಿ ಕಡಿತಗೊಳಿಸಿದ್ದರೆ,10 ಸಲ(ಶುಕ್ರವಾರದ್ದು ಸೇರಿದಂತೆ) ಹೆಚ್ಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News