ಸ್ಪೀಕರ್ ಕಚೇರಿಗೆ ರಾಜೀನಾಮೆ ನೀಡಲು ಆಗಮಿಸಿದ ಅತೃಪ್ತ ಶಾಸಕರು

Update: 2019-07-06 08:06 GMT

ಬೆಂಗಳೂರು, ಜು.6: ರಾಜ್ಯದ ಜೆಡಿಎಸ್ -ಕಾಂಗ್ರೆಸ್   ಮೈತ್ರಿ ಸರಕಾರದ ಅತೃಪ್ತ  ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಕೈಗೊಂಡು ವಿಧಾನಸಭೆಯ ಸ್ಪೀಕರ್ ಕಚೇರಿಗೆ ಇಂದು ಮಧ್ಯಾಹ್ನ  ಆಗಮಿಸಿದ್ದಾರೆ.

 ಅತೃಪ್ತ ಶಾಸಕರಾದ   ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ, ಬಿ ಸಿ ಪಾಟೀಲ್(ಹಿರೇಕೆರೂರು), ಪ್ರತಾಪ್ ಗೌಡ ಪಾಟೀಲ್, ಶಿವರಾಂ ಹೆಬ್ಬಾರ್(ಯಲ್ಲಾಪುರ), ಮಹೇಶ್ ಕುಮಟಳ್ಳಿ, ಗೋಪಾಲಯ್ಯ, ನಾರಾಯಣಗೌಡ,ಎಚ್. ವಿಶ್ವನಾಥ್ (ಹುಣಸೂರು) ಅವರು  ಸ್ಪೀಕರ್ ನ್ನು  ಕಾಯುತ್ತಿದ್ದಾರೆ. 

ಸ್ಪೀಕರ್ ರಮೇಶ್ ಕುಮಾರ್ ವಿಧಾನಸೌಧದಿಂದ ನೇರವಾಗಿ ಜಯದೇವ್ ಆಸ್ಪತ್ರೆಗೆ ತೆರಳಿದ್ದಾರೆ.ಸೋದರ ಸಂಬಂಧಿ ಜಯದೇವ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಹಿನ್ನೆಲೆಯಲ್ಲಿ ಅವರ ಆರೋಗ್ಯ ವಿಚಾರಿಸಲು ರಮೇಶ್ ಕುಮಾರ್ ಆಸ್ಪತ್ರೆಗೆ ತೆರಳಿದ್ದಾರೆ.

ಬಿ.ನಾಗೇಂದ್ರ, ರಾಮಲಿಂಗಾ ರೆಡ್ಡಿ, ಸೌಮ್ಯ ರೆಡ್ಡಿ,  ಜಿ.ಎನ್.ಗಣೇಶ್, ಭೈರತಿ ಬಸವರಾಜ್, ಮುನಿರತ್ನ, ಎಸ್.ಎನ್.ಸುಬ್ಬಾ ರೆಡ್ಡಿ  ಇಂದೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಇನ್ನೂ ಹಲವು ಶಾಸಕರು ಇವರ ಜೊತೆ ಸೇರ್ಪಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ನಡುವೆ ಸೋಮಶೇಖರ್ ತಾನು ಪಕ್ಷದ ಪರ ಬಂದಿದ್ದೇನೆ ಎಂದು ಹೇಳಿದ್ದಾರೆ.

15 ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.ಇದರೊಂದಿಗೆ  ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಅಮೆರಿಕದಿಂದ ವಾಪಸ್ ಬರುವ ಮುನ್ನವೇ ಮೈತ್ರಿ ಸರಕಾರಕ್ಕೆ ಕಂಟಕ ಎದುರಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News