ಮಲೆನಾಡಿನಲ್ಲಿ ಧಾರಾಕಾರ ಮಳೆ: ತುಂಬಿ ಹರಿಯುತ್ತಿರುವ ನದಿಗಳು

Update: 2019-07-06 13:28 GMT

ಚಿಕ್ಕಮಗಳೂರು, ಜು.6: ಕಳೆದೊಂದು ವಾರದಿಂದ ಜಿಲ್ಲೆಯ ಮಲೆನಾಡು ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಭಾರೀ ಮಳೆಯಿಂದಾಗಿ ಮಲೆನಾಡಿನ ಜೀವನದಿಗಳಾದ ತುಂಗಾ, ಭದ್ರಾ ಹಾಗೂ ಹೇಮಾವತಿ ನದಿಗಳಲ್ಲಿ ನೀರಿನ ಹರಿವು ಹೆಚ್ಚಿದೆ. ಭಾರೀ ಮಳೆಯಿಂದಾಗಿ ಮಲೆನಾಡು ಭಾಘದ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಕೆಲ ತಾಲೂಕುಗಳ ವ್ಯಾಪ್ತಿಯಲ್ಲಿ ಶಾಲಾ ಮಕ್ಕಳಿಗೆ ಶನಿವಾರ ರಜೆ ಘೋಷಿಸಲಾಗಿದೆ. ಆದರೆ ಜಿಲ್ಲೆಯ ಬಯಲು ಸೀಮೆ ಪ್ರದೇಶಗಳ ವ್ಯಾಪ್ತಿಯಲ್ಲಿ ಆಗಾಗ್ಗೆ ಸಾಧಾರಣ ಮಳೆಯಾಗುತ್ತಿದ್ದು, ಬರ ಪರಿಸ್ಥಿತಿ ಮುಂದುವರೆದಿದೆ.

ಜಿಲ್ಲೆಗೆ ಮುಂಗಾರು ಮಳೆ ಈ ಬಾರಿ ತಡವಾಗಿ ಆಗಮಿಸಿದ್ದರೂ ಸದ್ಯ ಮಲೆನಾಡು ಭಾಗದಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಮಲೆನಾಡು ಭಾಗದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಜಿಲ್ಲೆಯ ಮಲೆನಾಡು ಭಾಗದ ತಾಲೂಕುಗಳಾದ ಮೂಡಿಗೆರೆ, ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ಹಾಗೂ ಚಿಕ್ಕಮಗಳೂರಿನ ಕೆಲ ಭಾಗಗಳಲ್ಲಿ ಕಳೆದೊಂದು ವಾರದಿಂದ ಧಾರಾಕಾರ ಮಳೆಯಾಗುತ್ತಿದೆ. ಮಳೆಯ ನಡುವೆ ಆಗಾಗ್ಗೆ ಬಿಡುವು ದೊರೆಯುತ್ತಿರುವುದರಿಂದ ಕಾಫಿ, ಅಡಿಕೆ ತೋಟಗಳಲ್ಲಿ ಕೃಷಿ ಚಟುವಟಿಕೆ ಭರದಿಂದ ಸಾಗಿದೆ. ಭಾರೀ ಮಳೆಯಿಂದಾಗಿ ಭತ್ತದ ಗದ್ದೆಗಳಲ್ಲಿ ಸಾಕಷ್ಟು ನೀರು ನಿಂತಿರುವುದರಿಂದ ಭತ್ತದ ಗದ್ದೆಗಳ ಹೂಟೆ ಕೆಲಸವೂ ಭರದಿಂದ ಸಾಗಿದೆ.

ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಬಣಕಲ್, ಮೂಡಿಗೆರೆ, ಜನ್ನಾಪುರ, ಕಿರುಗುಂದ, ಜಾವಳಿ, ಕಳಸ, ಭಾಗದಲ್ಲಿ ಕಳೆದ ಎರಡು ದಿನಗಳಿಂದ ವ್ಯಾಪಕ ಮಳೆಯಾಗಿದ್ದು, ನಿರಂತರ ಮಳೆಯಿಂದಾಗಿ ಈ ಭಾಗದಲ್ಲಿ ಜನಜೀವನ ಕೊಂಚ ಅಸ್ತವ್ಯಸ್ತವಾಗಿದೆ. ತಾಲೂಕಿನ ಕಳಸ, ಕುದುರೆಮುಖ ಭಾಗದಲ್ಲಿ ನಿರಂತರ ಮಳೆಯಾಗುತ್ತಿರುವ ಪರಿಣಾಮ ಇಲ್ಲಿ ಹರಿಯುವ ಭದ್ರಾ ನದಿಯಲ್ಲಿ ದಿನೇ ದಿನೇ ನೀರಿನ ಮಟ್ಟವೂ ಏರುತ್ತಿದೆ. ಮಳೆ ಹೀಗೆಯೇ ಮುಂದುವರಿದಲ್ಲಿ ಕಳಸ-ಹೊರನಾಡು ಸಂಪರ್ಕದ ಹೆಬ್ಬಾಳೆ ಸೇತುವೆ ಇನ್ನೆರಡು ದಿನಗಳಲ್ಲಿ ಮುಳುಗಡೆಯಾಗುವ ಸಂಭವ ಇದೆ ಎಂದು ಸ್ಥಳೀಯರು ಪತ್ರಿಕೆಗೆ ತಿಳಿಸಿದ್ದಾರೆ. ತಾಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಶನಿವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು.

ಶೃಂಗೇರಿ ತಾಲೂಕಿನಲ್ಲಿ ಕಳೆದೊಂದು ವಾರದ ಹಿಂದೆ ಆಗಾಗ್ಗೆ ಸಾಧಾರಣ ಮಳೆಯಾಗುತ್ತಿತ್ತು. ಸದ್ಯ ಮಳೆ ರಭಸ ಪಡೆದುಕೊಂಡಿದ್ದು, ಮೂರು ದಿನಗಳಿಂದ ತಾಲೂಕಿನಾದ್ಯಂತ ಧಾರಾಕಾರ ಮಳೆಯಾಗುತ್ತಿದೆ. ತಾಲೂಕಿನ ಕಿಗ್ಗಾ, ನೆಮ್ಮಾರ್, ಕೆರೆಕಟ್ಟೆ ಮತ್ತಿತರ ಕಡೆಗಳಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಈ ಭಾಗದಲ್ಲಿ ಹರಿಯುವ ತುಂಗಾ ನದಿಯಲ್ಲೂ ನೀರಿನ ಪ್ರಮಾಣದಲ್ಲಿ ದಿನೇ ದಿನೇ ಏರಿಕೆಯಾಗುತ್ತಿದೆ. ಉತ್ತಮ ಮಳೆಯಿಂದಾಗಿ ತಾಲೂಕಿನಾದ್ಯಂತ ಅಡಿಕೆ, ಕಾಫಿ, ಭತ್ತದ ಕೃಷಿ ಚಟುವಟಿಕೆಗಳೂ ಗರಿಗೆದರಿವೆ. ಕಿಗ್ಗಾ ಹೋಬಳಿ ವ್ಯಾಪ್ತಿಯಲ್ಲಿ ಶುಕ್ರವಾರ 76 ಮಿಮೀ ಮಳೆಯಾಗಿದ್ದರೇ, ಶೃಂಗೇರಿಯಲ್ಲಿ 36 ಮಿಮೀ ಮಳೆಯಾಗಿದೆ.

ಇನ್ನು ಕೊಪ್ಪ, ನರಸಿಂಹರಾಜಪುರ ತಾಲೂಕುಗಳ ವ್ಯಾಪ್ತಿಯಲ್ಲೂ ಧಾರಾಕಾರ ಮಳೆಯಾಗುತ್ತಿದ್ದು, ಕೊಪ್ಪ ತಾಲೂಕಿನ ಜಯಪುರ, ಹೇರೂರು, ಬಸರಿಕಟ್ಟೆ, ಮೇಗುಂದ, ಬಿ.ಜಿ.ಕಟ್ಟೆ, ಅಗಳಗಂಡಿ, ಎತ್ತಿನಟ್ಟಿ ಹಾಗೂ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು, ಮಾಗುಂಡಿ, ಎನ್.ಆರ್.ಪುರ ಸೇರಿದಂತೆ ವಿವಿಧೆಡೆ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ತಾಲೂಕುಗಳ ವ್ಯಾಪ್ತಿಯಲ್ಲಿನ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಚಿಕ್ಕಮಗಳೂರು ತಾಲೂಕು ವ್ಯಾಪ್ತಿಯ ಆಲ್ದೂರು, ಮಲ್ಲಂದೂರು, ಶಿರವಾಸೆ, ವಸ್ತಾರೆ, ಆಣೂರು, ಜೋಳ್‍ದಾಳ್ ಗ್ರಾಮಗಳಲ್ಲಿ ಆಗಾಗ್ಗೆ ಧಾರಾಕಾರ ಮಳೆಯಾಗುತ್ತಿದೆ. ಚಿಕ್ಕಮಗಳೂರು ನಗರದ ವ್ಯಾಪ್ತಿಯಲ್ಲೂ ಮಳೆ ಪ್ರಮಾಣ ಕ್ಷೀಣಿಸಿದೆ.

ಜಿಲ್ಲೆಯ ಬಯಲುಸೀಮೆ ಪ್ರದೇಶಗಳಾದ ಚಿಕ್ಕಮಗಳೂರು ತಾಲೂಕಿನ ಲಕ್ಯಾ ಹೋಬಳಿ, ಕಡೂರು ತಾಲೂಕು ಹಾಗೂ ತರೀಕೆರೆ ತಾಲೂಕುಗಳ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗದಿದ್ದರೂ ಆಗಾಗ್ಗೆ ಸಾಧಾರಣ ಮಳೆಯಾಗುತ್ತಿದೆ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿರುವುದು ಈ ಭಾಗದ ರೈತರನ್ನು ಕಂಗೆಡಿಸಿದೆ. ತರೀಕೆರೆ ತಾಲೂಕಿನ ಕೆಲವೆಡೆ ಸಾಧಾರಣ ಮಳೆಯಾಗುತ್ತಿದ್ದರೆ, ಕಡೂರು ತಾಲೂಕಿನಾದ್ಯಂತ ಮೋಡ ಕವಿದ ವಾತಾವರಣವಿದ್ದು, ಅಲ್ಲಲ್ಲಿ ಸಾಧಾರಣ ಮಳೆಯಾದ ಬಗ್ಗೆ ವರದಿಯಾಗಿದೆ. ಈ ಭಾಗದಲ್ಲಿ ನಿರೀಕ್ಷಿತ ಮಳೆಯಾಗದ ಹಿನ್ನೆಲೆಯಲ್ಲಿ ಕೃಷಿ ಚಟವಟಿಕೆಗಳಿಗೆ ಭಾರೀ ಹಿನ್ನಡೆಯಾಗಿದೆ.

ಒಟ್ಟಾರೆ ಕಾಫಿನಾಡಿನಲ್ಲಿ ಕಳೆದ ಬಾರಿ ಭಾರೀ ಮಳೆಯಿಂದಾಗಿ ಅತೀವೃಷ್ಟಿ ಉಂಟಾಗಿದ್ದು, ಈ ಬಾರಿ ಮಳೆಯ ಪ್ರಮಾಣ ಕಡಿಮೆಯಾಗಿದ್ದರೂ ಜಿಲ್ಲೆಯ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದರೆ, ಬಯಲುಸೀಮೆ ಭಾಗದಲ್ಲಿ ಮಾತ್ರ ಮಳೆಯ ಕಣ್ಣಾಮುಚ್ಚಾಲೆ ಆಟ ಈ ಬಾರಿಯೂ ಮುಂದುವರಿದಿದೆ. ಮಲೆನಾಡು ವ್ಯಾಪ್ತಿಯಲ್ಲಿ ಕಳೆದೊಂದು ವಾರದಿಂದ ಧಾರಾಕಾರ ಮಳೆಯಾಗಿದ್ದರೂ ಯಾವುದೇ ಆಸ್ತಿಪಾಸ್ತಿ ನಷ್ಟ ಅಥವಾ ಜನಜಾನುವಾರುಗಳ ಪ್ರಾಣ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಆದರೆ ಮಲೆನಾಡು ಭಾಗದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆಯಾಟ ಪ್ರತಿದಿನ ನಡೆಯುತ್ತಿದೆ. ಮಲೆನಾಡು ವ್ಯಾಪ್ತಿಯಲ್ಲಿ ಶನಿವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಧಾರಾಕಾರ ಮಳೆಯಾಗಿದ್ದು, ಸಂಜೆ ವೇಳೆ ಮಳೆ ಕೊಂಚ ಬಿಡುವು ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News