ರಾಜ್ಯದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ: ರಾಷ್ಟ್ರಪತಿ ಆಡಳಿತ ಸಾಧ್ಯತೆ

Update: 2019-07-06 14:27 GMT

ಬೆಂಗಳೂರು, ಜು. 6: ಕ್ಷಿಪ್ರ ರಾಜಕೀಯ ಬೆಳವಣಿಗೆಯೊಂದರಲ್ಲಿ ರಾಜ್ಯದ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಒಟ್ಟು 12 ಮಂದಿ ಶಾಸಕರು ದಿಢೀರ್ ರಾಜೀನಾಮೆ ನೀಡಿದ್ದು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರದ ಭವಿಷ್ಯ ಡೋಲಾಯಮಾನ ಸ್ಥಿತಿಯಲ್ಲಿದೆ.

‘ಮೈತ್ರಿ ಸರಕಾರದ ನಿರ್ಲಕ್ಷ ಧೋರಣೆ ಖಂಡಿಸಿ, ಸ್ವ ಇಚ್ಛೆಯಿಂದ ಹದಿನಾಲ್ಕು ಮಂದಿ ಶಾಸಕರು ಒಟ್ಟಿಗೆ ಈ ಸರಕಾರದ ಮೇಲೆ ವಿಶ್ವಾಸವಿಲ್ಲವೆಂದು ರಾಜೀನಾಮೆ ನೀಡಿದ್ದೇವೆ’ ಎಂದು ಹೇಳಲಾಗುತ್ತಿದೆ. ಆದರೆ, ಶಾಸಕರ ದಿಢೀರ್ ರಾಜೀನಾಮೆ ಹಿಂದೆ ‘ಆಪರೇಷನ್ ಕಮಲ’ದ ವಾಸನೆ ಇದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಶನಿವಾರ ಮಧ್ಯಾಹ್ನ 12:30ರ ಸುಮಾರಿಗೆ ನಗರದ ಖಾಸಗಿ ಹೊಟೇಲ್‌ನಿಂದ ರಾಜ್ಯದ ಶಕ್ತಿಕೇಂದ್ರ ವಿಧಾನಸೌಧಕ್ಕೆ ಹುಣಸೂರು ಕ್ಷೇತ್ರದ ಜೆಡಿಎಸ್ ಶಾಸಕ ಎಚ್.ವಿಶ್ವನಾಥ್ ನೇತೃತ್ವದಲ್ಲಿ ಆಗಮಿಸಿದ ಶಾಸಕರು, ಸ್ಪೀಕರ್ ರಮೇಶ್‌ಕುಮಾರ್ ಅವರ ಅನುಪಸ್ಥಿತಿಯಲ್ಲಿ ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಅವರಿಗೆ ರಾಜೀನಾಮೆ ಪತ್ರಗಳನ್ನು ಸಲ್ಲಿಸಿದರು.

ರಾಜೀನಾಮೆ ನೀಡಿದ ಶಾಸಕರು: ಜೆಡಿಎಸ್‌ನ ಎಚ್.ವಿಶ್ವನಾಥ್ (ಹುಣಸೂರು), ಕೆ.ಗೋಪಾಲಯ್ಯ(ಮಹಾಲಕ್ಷ್ಮಿ ಲೇಔಟ್), ಕೆ.ನಾರಾಯಣಗೌಡ (ಕೆ.ಆರ್.ಪೇಟೆ), ಕಾಂಗ್ರೆಸ್ ನ ರಮೇಶ್ ಜಾರಕಿಹೊಳಿ (ಗೋಕಾಕ್), ಮಹೇಶ್ ಕುಮಟಳ್ಳಿ (ಅಥಣಿ), ರಾಮಲಿಂಗಾರೆಡ್ಡಿ (ಬಿಟಿಎಂ ಲೇಔಟ್), ಬೈರತಿ ಬಸವರಾಜು (ಕೆ.ಆರ್.ಪುರ), ಎಸ್.ಟಿ.ಸೋಮಶೇಖರ್(ಯಶವಂತಪುರ), ಮುನಿರತ್ನ (ರಾಜ ರಾಜೇಶ್ವರಿನಗರ), ಪ್ರತಾಪ್‌ಗೌಡ ಪಾಟೀಲ್(ಮಸ್ಕಿ), ಶಿವರಾಂ ಹೆಬ್ಬಾರ್ (ಯಲ್ಲಾಪುರ), ಬಿ.ಸಿ.ಪಾಟೀಲ್(ಹೀರೆಕೆರೂರು) ತಮ್ಮ ಶಾಸಕ ಸ್ಥಾನಕ್ಕೆ ಇಂದು ರಾಜೀನಾಮೆ ಸಲ್ಲಿಸಿದ್ದರು. ಈಗಾಗಲೇ ಆನಂದ್ ಸಿಂಗ್ (ವಿಜಯನಗರ) ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಒಟ್ಟಾರೆ 13 ಮಂದಿ ಶಾಸಕರು ರಾಜೀನಾಮೆ ನೀಡಿದಂತಾಗಿದೆ.

ಶಾಸಕರು ರಾಜೀನಾಮೆ ನೀಡಿದ ಬಳಿಕ ರಾಜಭವನಕ್ಕೆ ತೆರಳಿ ರಾಜ್ಯಪಾಲ ವಜುಭಾಯಿ ವಾಲಾ ಅವರ ಮುಂದೆ ಶಕ್ತಿ ಪ್ರದರ್ಶನ ನಡೆಸಿದರು. ಅಲ್ಲದೆ, ಶಾಸಕರ ನಿರ್ಲಕ್ಷ್ಯ ಧೋರಣೆ ಹಾಗೂ ಮೈತ್ರಿ ಸರಕಾರದ ಮೇಲೆ ನಮಗೆ ಯಾವುದೇ ವಿಶ್ವಾಸವಿಲ್ಲ ಎಂದು ಮನವರಿಕೆ ಮಾಡಿಕೊಟ್ಟರು. ಆ ಬಳಿಕ ಎಲ್ಲ ಶಾಸಕರು ಒಟ್ಟಿಗೆ ಮಿನಿಬಸ್ ಮೂಲಕ ನಗರದ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ವಿಶೇಷ ವಿಮಾನದ ಮೂಲಕ ಮುಂಬೈಗೆ ತೆರಳಿದ್ದಾರೆಂದು ಗೊತ್ತಾಗಿದೆ.

ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಚಿವ ಕೆ.ಜೆ.ಜಾರ್ಜ್, ಶಾಸಕರು ವಿಶೇಷ ವಿಮಾನದ ಮೂಲಕ ಪ್ರಯಾಣ ಬೆಳೆಸುವ ಮುನ್ನ ಅವರ ಮನವೊಲಿಸುವ ಅಂತಿಮ ಹಂತದ ಪ್ರಯತ್ನ ನಡೆಸಿದರು. ಆದರೆ, ಸಚಿವರ ಮನವಿಗೆ ಶಾಸಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಡಿಕೆಶಿ ರಂಗ ಪ್ರವೇಶ: ಶಾಸಕರ ರಾಜೀನಾಮೆ ಹಿನ್ನೆಲೆಯಲ್ಲಿ ದಿಢೀರ್ ರಂಗ ಪ್ರವೇಶಿಸಿದ ಸಚಿವ ಡಿ.ಕೆ.ಶಿವಕುಮಾರ್ ಸ್ಪೀಕರ್ ಕಚೇರಿಗೆ ಆಗಮಿಸಿದರು. ಈ ವೇಳೆ ರಾಜೀನಾಮೆ ನೀಡಲು ಕುಳಿತಿದ್ದ ಶಾಸಕರಾದ ಬೈರತಿ ಬಸವರಾಜು, ಮುನಿರತ್ನ, ಸೋಮಶೇಖರ್ ಹಾಗೂ ರಾಮಲಿಂಗಾರೆಡ್ಡಿ ಮನವೊಲಿಕೆಗೆ ಪ್ರಯತ್ನ ನಡೆಸಿದರು.

ಈ ವೇಳೆ ಶಾಸಕ ಮುನಿರತ್ನ ಕೈಯಲ್ಲಿದ್ದ ರಾಜೀನಾಮೆ ಪತ್ರವನ್ನು ಪಡೆದ ಶಿವಕುಮಾರ್, ಅದನ್ನು ಹರಿದು ಹಾಕಿದ ಪ್ರಸಂಗವೂ ನಡೆಯಿತು. ಈ ವೇಳೆ ಶಿವಕುಮಾರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಈಗ ನಮಗೆ ಸಚಿವ ಸ್ಥಾನದ ಆಮಿಷವೊಡುತ್ತಿದ್ದೀರಾ? ನಾವು ಸರಕಾರದ ಭಾಗವಾಗಿದ್ದಾಗ ನಿಮ್ಮ ಕಣ್ಣಿಗೆ ಕಾಣಿಸಲಿಲ್ಲವೇ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ವಿಧಾನಸೌಧದಿಂದ ತಮ್ಮ ಕಾರಿನಲ್ಲಿ ಮೂರು ಮಂದಿ ಶಾಸಕರನ್ನು ಕೂರಿಸಿಕೊಂಡು ಹೊರಗೆ ಹೋದ ಶಿವಕುಮಾರ್, ಅತೃಪ್ತ ಶಾಸಕರ ಮನವೊಲಿಸುವ ಪ್ರಯತ್ನವನ್ನು ಮಾಡಿದರು. ಆದರೆ, ಯಾವುದೇ ಕಾರಣಕ್ಕೂ ತಮ್ಮ ನಿರ್ಧಾರದಿಂದ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಶಾಸಕರು ಅವರಿಗೆ ತಿಳಿಸಿದ್ದಾರೆ ಎಂದು ಹೇಳಲಾಗಿದೆ.

ಸಿದ್ದರಾಮಯ್ಯ ನಿವಾಸದಲ್ಲಿ ಸಭೆ: ಶಾಸಕರ ರಾಜೀನಾಮೆಯಿಂದಾಗಿ ಕಂಗೆಟ್ಟಿರುವ ಕಾಂಗ್ರೆಸ್ ನಾಯಕರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಅವರ ನಿವಾಸದಲ್ಲಿ ಮುಂದೆ ಅನುಸರಿಸಬೇಕಾದ ಕ್ರಮ ಕುರಿತು ಚರ್ಚೆ ನಡೆಸಿದರು. ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಡಿಸಿಎಂ ಪರಮೇಶ್ವರ್, ಸಚಿವರಾದ ಶಿವಕುಮಾರ್, ಜಾರ್ಜ್, ಝಮೀರ್ ಅಹ್ಮದ್, ಸಂಸದ ಡಿ.ಕೆ.ಸುರೇಶ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸೇರಿದಂತೆ ಇನ್ನಿತರು ಈ ರಾಜಕೀಯ ಬಿಕ್ಕಟ್ಟನ್ನು ಎದುರಿಸುವ ಕುರಿತು ಸಭೆ ನಡೆಸಿದರು.

ಸಂಖ್ಯಾಬಲ: ನಾಮ ನಿರ್ದೇಶಿತ ಸದಸ್ಯರೊಬ್ಬರು ಸೇರಿ 225 ಮಂದಿ ಸದಸ್ಯ ಬಲದ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರ ಅಲ್ಪಮತಕ್ಕೆ ಕುಸಿದಿದ್ದು, ರಾಜಕೀಯ ಬಿಕ್ಕಟ್ಟು ಸೃಷ್ಟಿಯಾದಂತಾಗಿದೆ. ಕಾಂಗ್ರೆಸ್-79, ಜೆಡಿಎಸ್-37, ಬಿಎಸ್ಪಿ-1, ಪಕ್ಷೇತರ-2 ಹಾಗೂ ಬಿಜೆಪಿ-105 ಶಾಸಕರ ಬಲ ಹೊಂದಿದೆ.

ಕಾಂಗ್ರೆಸ್ ನ 10(ಆನಂದ್‌ಸಿಂಗ್ ಸೇರಿ) ಮತ್ತು ಜೆಡಿಎಸ್‌ನ 3 ಮಂದಿ ಸೇರಿದಂತೆ 13 ಮಂದಿ ಶಾಸಕರ ರಾಜೀನಾಮೆ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ ಮೈತ್ರಿ ಸರಕಾರದ ಶಾಸಕರ ಬಲ ಪಕ್ಷೇತರ, ಬಿಎಸ್ಪಿ ಸೇರಿ ಒಟ್ಟು 106ಕ್ಕೆ ಕುಸಿದಿದ್ದು, ವಿಪಕ್ಷ ಬಿಜೆಪಿಯ ಶಾಸಕರ ಸಂಖ್ಯಾಬಲ 105ರಷ್ಟಿದೆ.

ಮತ್ತಷ್ಟು ಶಾಸಕರ ರಾಜೀನಾಮೆ ಸಾಧ್ಯತೆ: ಸುಬ್ಬಾರೆಡ್ಡಿ(ಬಾಗೇಪಲ್ಲಿ), ನಿಸರ್ಗ ನಾರಾಯಣಸ್ವಾಮಿ (ದೇವನಹಳ್ಳಿ), ಸೌಮ್ಯಾರೆಡ್ಡಿ(ಜಯನಗರ) ಸೇರಿದಂತೆ ಇನ್ನೂ ಆರೇಳು ಮಂದಿ ನಾಳೆ(ಜು.7) ಶಾಸಕ ಸ್ಥಾನಕ್ಕೆ ರಾಜೀನಾಮೆ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ದಿಢೀರ್ ರಾಜಕೀಯ ಬೆಳವಣಿಗೆಳ ಹಿನ್ನೆಲೆಯಲ್ಲಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವರಾದ ಡಿ.ಕೆ. ಶಿವಕುಮಾರ್, ಕೆ.ಜೆ.ಜಾರ್ಜ್ ಸೇರಿದಂತೆ ಮೈತ್ರಿ ಮುಖಂಡರು ಹಲವು ಸುತ್ತಿನ ಸಭೆ ನಡೆಸಿ ಶಾಸಕರ ಮನವೊಲಿಕೆಗೆ ಹರಸಾಹಸಪಟ್ಟರು.

ವಿದೇಶ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ನಾಳೆ ರಾತ್ರಿ ಎಂಟು ಗಂಟೆ ಸುಮಾರಿಗೆ ರಾಜ್ಯಕ್ಕೆ ಆಗಮಿಸಲಿದ್ದಾರೆ. ಮೈತ್ರಿ ಸರಕಾರ ಅಲ್ಪಮತಕ್ಕೆ ಕುಸಿದು ಬೀಳುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಸರಕಾರ ಉಳಿಸಿಕೊಳ್ಳಲು ರಣತಂತ್ರ ರೂಪಿಸಲು ಮುಖಂಡರು ಮುಂದಾಗಿದ್ದಾರೆ.

ರಾಷ್ಟ್ರಪತಿ ಆಡಳಿತ ಸಾಧ್ಯತೆ

ಶಾಸಕರ ದಿಢೀರ್ ರಾಜೀನಾಮೆ ಹಿನ್ನೆಲೆಯಲ್ಲಿ ಮೈತ್ರಿ ಸರಕಾರ ಅಲ್ಪಮತಕ್ಕೆ ಕುಸಿದು ಬೀಳುವ ಸಾಧ್ಯತೆಯಿದೆ. ಹೀಗಾಗಿ ವಿಪಕ್ಷ ಬಿಜೆಪಿ, ಸರಕಾರ ರಚನೆಗೆ ಕಸರತ್ತು ನಡೆಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಒಂದು ವೇಳೆ ಬಿಜೆಪಿಗೆ ಸರಕಾರ ರಚನೆ ಸಾಧ್ಯವಾಗದಿದ್ದರೆ ರಾಜ್ಯಪಾಲರ ಮೂಲಕ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸ್ಸು ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಶಾಸಕರಿಗೆ 40 ಕೋಟಿ ರೂ.ಆಮಿಷ ?

‘ಮೈತ್ರಿ ಸರಕಾರ ರಚನೆಯಾದ ದಿನದಿಂದ ಸರಕಾರ ಅಸ್ಥಿರಕ್ಕೆ ತೆರೆ ಮರೆಯಲ್ಲೆ ಕಸರತ್ತು ನಡೆಸಿ ವಿಫಲವಾಗಿದ್ದ ವಿಪಕ್ಷ ಬಿಜೆಪಿ ಇದೀಗ ಶಾಸಕರ ರಾಜೀನಾಮೆಗೆ ತಲಾ 40 ಕೋಟಿ ರೂ.ಗಳಷ್ಟು ಆಮಿಷವೊಡ್ಡಿದೆ ಎಂದು ಹೇಳಲಾಗುತ್ತಿದೆ. ಎಚ್.ವಿಶ್ವನಾಥ್ ನೇತೃತ್ವದಲ್ಲೆ ಸಿದ್ದರಾಮಯ್ಯರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಶಾಸಕರನ್ನು ಸೆಳೆದಿರುವುದು ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News