ಬೆಝೊಸ್ ದಂಪತಿಯ ವಿಚ್ಛೇದನವನ್ನು ಅಂತಿಮಗೊಳಿಸಿದ ನ್ಯಾಯಾಲಯ: ಮೆಕೆಂಝೀಗೆ 2.62 ಲಕ್ಷ ಕೋಟಿ ಪಾವತಿ

Update: 2019-07-06 16:50 GMT

ವಾಶಿಂಗ್ಟನ್, ಜು. 6: ಅಮೆಝಾನ್ ಡಾಟ್ ಕಾಮ್ ಸ್ಥಾಪಕ ಜೆಫ್ ಬೆಝೊಸ್ ಮತ್ತು ಅವರೊಂದಿಗೆ 25 ವರ್ಷ ಬದುಕಿದ ಪತ್ನಿ ಮೆಕೆಂಝೀ ಬೆಝೊಸ್ ಅವರ ವಿವಾಹ ವಿಚ್ಛೇದನವನ್ನು ಸಿಯಾಟಲ್ ವಲಯ ನ್ಯಾಯಾಧೀಶರೊಬ್ಬರು ಶುಕ್ರವಾರ ಅಂತಿಮಗೊಳಿಸಿದ್ದಾರೆ. ಇದರ ಅನ್ವಯ ಮೆಕೆಂಝೀ ಬೆಝೊಸ್ 38.3 ಬಿಲಿಯ ಡಾಲರ್ (ಸುಮಾರು 2.62 ಲಕ್ಷ ಕೋಟಿ ರೂಪಾಯಿ) ಮೌಲ್ಯದ ಅಮೆಝಾನ್ ಶೇರು ಪಡೆಯಲಿದ್ದಾರೆ ಎಂದು ‘ಬ್ಲೂಮ್‌ಬರ್ಗ್’ ವರದಿ ಮಾಡಿದೆ.

ತಾವು ವಿಚ್ಛೇದನಗೊಳ್ಳುತ್ತಿರುವುದಾಗಿ ಜನವರಿಯಲ್ಲಿ ನೀಡಿದ ಜಂಟಿ ಟ್ವಿಟರ್ ಹೇಳಿಕೆಯಲ್ಲಿ ಬೆಝೊಸ್ ದಂಪತಿ ಘೋಷಿಸಿರುವುದನ್ನು ಸ್ಮರಿಸಬಹುದಾಗಿದೆ.

ವಿಚ್ಛೇದನವನ್ನು ಅಂತಿಮಗೊಳಿಸಿದ ತಿಂಗಳುಗಳ ಬಳಿಕ, ಮೆಕೆಂಝೀ ಬೆಝೊಸ್ ‘ಗಿವಿಂಗ್ ಪ್ಲೆಜ್’ಗೆ ಸಹಿ ಹಾಕಿದ್ದಾರೆ. ಗಿವಿಂಗ್ ಪ್ಲೆಜ್ ಎಂದರೆ ತಮ್ಮ ಸಂಪತ್ತಿನ ಹೆಚ್ಚಿನ ಭಾಗವನ್ನು ಪರೋಪಕಾರಿ ಕಾರ್ಯಗಳಿಗೆ ದೇಣಿಗೆ ನೀಡುವುದಾಗಿ ಘೋಷಿಸುವ ಕರಾರಿಗೆ ಸಹಿ ಹಾಕುವುದು).

 ಜೆಫ್ ಬೆಝೊಸ್ 114.8 ಬಿಲಿಯ ಡಾಲರ್ (ಸುಮಾರು 7.85 ಲಕ್ಷ ಕೋಟಿ ರೂಪಾಯಿ) ಮೌಲ್ಯದ 12 ಶೇಕಡ ಶೇರುಗಳನ್ನು ಉಳಿಸಿಕೊಳ್ಳುತ್ತಾರೆ ಹಾಗೂ ಆಗಲೂ ಜಗತ್ತಿನ ಅತಿ ಸಿರಿವಂತ ವ್ಯಕ್ತಿಯಾಗಿಯೇ ಉಳಿಯುತ್ತಾರೆ ಎಂದು ಬ್ಲೂಮ್‌ಬರ್ಗ್ ಹೇಳಿದೆ.

ತನ್ನ ಶೇರುಗಳ ಮತದಾನ ಅಧಿಕಾರವನ್ನು ಜೆಫ್‌ಗೆ ನೀಡುವುದಾಗಿ ಮೆಕೆಂಝೀ ಹೇಳಿದ್ದಾರೆ.

ಮೆಕೆಂಝೀಯ ಅರ್ಧ ಸಂಪತ್ತು ಸಾಮಾಜಿಕ ಕಾರ್ಯಗಳಿಗೆ

ಮೇ ತಿಂಗಳಲ್ಲಿ ‘ಗಿವಿಂಗ್ ಪ್ಲೆಜ್’ಗೆ ಸಹಿ ಹಾಕಿರುವ ಮೆಕೆಂಝೀ ಬೆಝೊಸ್, ತನ್ನ ಸಂಪತ್ತಿನ ಅರ್ಧದಷ್ಟನ್ನು ಸಾಮಾಜಿಕ ಕಾರ್ಯಗಳಿಗೆ ನೀಡುವುದಾಗಿ ಘೋಷಿಸಿದ್ದಾರೆ.

‘ಗಿವಿಂಗ್ ಪ್ಲೆಜ್’ ಅಭಿಯಾನವನ್ನು ಅಮೆರಿಕದ ಬಿಲಿಯಾಧೀಶ ವಾರನ್ ಬಫೆಟ್ ಮತ್ತು ಮೈಕ್ರೊಸಾಫ್ಟ್ ಕಾರ್ಪ್ ಸಹ ಸ್ಥಾಪಕ ಬಿಲ್ ಗೇಟ್ಸ್ 2010ರಲ್ಲಿ ಆರಂಭಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News