ಕೈ-ತೆನೆ ಶಾಸಕರ ವಿರುದ್ಧ ಸಿಡಿದೆದ್ದ ಕಾರ್ಯಕರ್ತರು: ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ

Update: 2019-07-07 14:14 GMT
ರಾಜೀನಾಮೆ ನೀಡಿದ ಶಾಸಕರು (ಫೈಲ್ ಚಿತ್ರ)

ಬೆಂಗಳೂರು, ಜು.7: ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಮೈತ್ರಿ ಸರಕಾರ ಅಸ್ಥಿರಗೊಳಿಸಲು ಮುಂದಾಗಿರುವ ಶಾಸಕರ ವಿರುದ್ಧ, ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೆಡಿಎಸ್ ಶಾಸಕರಾದ ವಿಶ್ವನಾಥ್, ಗೋಪಾಲಯ್ಯ, ಕಾಂಗ್ರೆಸ್ ಶಾಸಕರಾದ ರಮೇಶ್ ಜಾರಕಿಹೊಳಿ, ಬಿ.ಸಿ.ಪಾಟೀಲ್ ಸೇರಿದಂತೆ ಪ್ರಮುಖ ಶಾಸಕರ ವಿರುದ್ಧ ಆಕ್ರೋಶ ಭುಗಿಲೆದ್ದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಕಟು ನಿಂದನೆ ವ್ಯಕ್ತವಾಗಿದೆ. 

ಹಲವರು ಕೆಟ್ಟದ್ದಾಗಿ ಪ್ರತಿಕ್ರಿಯಿಸಿದ್ದು, ಕೆಲವರು ವಿಶ್ವನಾಥ್ ಸೇರಿದಂತೆ ರಾಜೀನಾಮೆ ಸಲ್ಲಿಸಿರುವ ಶಾಸಕರ ಭಾವಚಿತ್ರಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಎಂಬ ಸಂದೇಶದ ಪೋಸ್ಟ್ ಹಾಕಿದ್ದಾರೆ.

ಬೆಂಗಳೂರು ಸೇರಿದಂತೆ ವಿವಿಧೆಡೆ ಹಾಕಲಾಗಿದ್ದ ಜೆಡಿಎಸ್ ಕಟೌಟ್‌ಗಳಲ್ಲಿ ಎಚ್.ವಿಶ್ವನಾಥ್ ಹಾಗೂ ಅವರ ಪುತ್ರ ಅಮಿತ್ ದೇವರಹಟ್ಟಿ ಭಾವಚಿತ್ರಗಳನ್ನು ಕತ್ತರಿಸಿ ಹಾಕುತ್ತಿರುವ ವಿಡಿಯೊ ತುಣುಕುಗಳು ಈ ಭಾಗದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಆಡಿಯೊ ವೈರಲ್: ಜೆಡಿಎಸ್‌ನ ಐಟಿ ಸೆಲ್‌ನ ಕಾರ್ಯಕರ್ತ ಎನ್ನಲಾದ ಸತೀಶ್‌ ಗೌಡ ಎಂಬುವವರು, ವಿಶ್ವನಾಥ್ ಆಪ್ತ ಸಹಾಯಕ ನಟರಾಜು ಅವರಿಗೆ ಮೊಬೈಲ್ ಕರೆ ಮಾಡಿ ರಾಜೀನಾಮೆ ನೀಡಿದ ಅವರು ಹುಣಸೂರಿಗೆ ವಾಪಸ್ಸು ಬರುತ್ತಾರಾ ಪ್ರಶ್ನಿಸಿ, ಸಂಭಾಷಣೆ ಮಾಡಿರುವ ಆಡಿಯೊ ವೈರಲ್‌ ಆಗಿದೆ ಎಂದು ವರದಿಯಾಗಿದೆ.

ಬಿಗಿ ಪೊಲೀಸ್ ಬಂದೋಬಸ್ತ್..!

ರಾಜಧಾನಿ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿ ಸೇರಿದಂತೆ ಹಲವು ಕಡೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News