ಪಕ್ಷಕ್ಕಾಗಿ ಅಧಿಕಾರ ತ್ಯಾಗ ಮಾಡಲು ಸಿದ್ಧ: ಡಿ.ಕೆ.ಶಿವಕುಮಾರ್

Update: 2019-07-07 12:59 GMT

ಬೆಂಗಳೂರು, ಜು.7: ಪಾಪ ಬಿಜೆಪಿಯವರಿಗೆ ಏನೂ ಗೊತ್ತಿಲ್ಲ. ಕಣ್ಣ್ಮುಚ್ಚಿ ಹಾಲು ಕುಡಿಯುತ್ತಿರೋದು ಯಾರಿಗೂ ಗೊತ್ತಿಲ್ಲ ಎಂಬ ರೀತಿಯಲ್ಲಿ ವರ್ತನೆ ಮಾಡುತ್ತಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಇಂದಿಲ್ಲಿ ವ್ಯಂಗ್ಯವಾಡಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಒಂದೂವರೆ ವರ್ಷಗಳಿಂದಲೂ ಪಕ್ಷದಲ್ಲಿ ಸಭೆಗಳು ನಡೆಯುತ್ತಿವೆ. ಇಂದು ಸಹ ಸಭೆ ಕರೆಯಲಾಗಿದೆ, ಸದ್ಯದಲ್ಲಿ ಎಲ್ಲವೂ ನಿರಾಳವಾಗಲಿದೆ. ಸಮಸ್ಯೆಗೆ ಹೇಗೆ ಪರಿಹಾರ ಕಂಡುಕೊಳ್ಳುತ್ತೇವೆ ಎಂಬುದನ್ನು ಹೇಳಲಾರೆ ಎಂದರು.

ಬಿಜೆಪಿಯವರು ಮಾತ್ರ ಅತೃಪ್ತರ ಶಾಸಕರ ರಾಜೀನಾಮೆಗೆ ನಮಗೆ ಸಂಬಂಧವಿಲ್ಲವೆಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಬಿಜೆಪಿ ಮುಖಂಡರು ಎಲ್ಲಿ ಯಾರನ್ನು ಭೇಟಿಯಾಗಿ ಸಭೆ ನಡೆಸುತ್ತಿದ್ದಾರೆ ಎಲ್ಲ ವಿಷಯಗಳು ನಮಗೆ ಗೊತ್ತಿದೆ ಎಂದು ಶಿವಕುಮಾರ್ ತಿರುಗೇಟು ನೀಡಿದರು.

ಜೆಡಿಎಸ್‌ನವರೇ ಮುಂದಿನ ಐದು ವರ್ಷಗಳ ಕಾಲ ಮೈತ್ರಿ ಸರಕಾರದ ಮುಖ್ಯಮಂತ್ರಿ ಎಂಬುದಾಗಿ ಒಪ್ಪಂದವನ್ನು ಮಾಡಿಕೊಂಡಿದ್ದೇವೆ. ಹಾಗಾಗಿ ಮುಖ್ಯಮಂತ್ರಿ ಬೆನ್ನಿಗೆ ಚೂರಿ ಹಾಕುವ ವ್ಯಕ್ತಿ ನಾನಲ್ಲ. ಪಕ್ಷಕ್ಕಾಗಿ ಅಧಿಕಾರ ತ್ಯಾಗ ಮಾಡಲು ನಾನು ಸಿದ್ಧನಿದ್ದೇನೆ ಎಂದು ಅವರು ಹೇಳಿದರು.

ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಮಾಡುವುದು ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಚಾರ. ಅತೃಪ್ತ ಶಾಸಕರಿಗೆ ಸಚಿವರನ್ನಾಗಿ ಮಾಡುತ್ತೇವೆ ಎಂದು ಬಿಜೆಪಿ ಆಮಿಷವೊಡ್ಡಿದೆ ಎಂದು ಅವರು ದೂರಿದರು.

ರಾಜ್ಯದಲ್ಲಿ ಪಕ್ಷ ಹಾಗೂ ಸರಕಾರ ಉಳಿಯಬೇಕು ಎಂಬ ಉದ್ದೇಶದಿಂದ ನಾನು ಕೆಲಸ ಮಾಡುತ್ತಿದ್ದೇನೆ. ಎಲ್ಲ ಶಾಸಕರು ಚುನಾವಣೆಗೆ ಹೋಗುವುದು ಬೇಡ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಚುನಾವಣೆ ಬಂದರೆ ಅದಕ್ಕೆ ನಾವು ಹೆದರುವುದಿಲ್ಲ ಎಂದು ಶಿವಕುಮಾರ್ ಹೇಳಿದರು.

ಬಿಜೆಪಿಯ ಕೆಲ ಶಾಸಕ ಮಿತ್ರರು ನನ್ನನ್ನು ಸಂಪರ್ಕಿಸಿ ಮಧ್ಯಂತರ ಚುನಾವಣೆ ಎದುರಾಗದಂತೆ ನೋಡಿಕೊಳ್ಳಿ ಎಂದು ಮನವಿ ಮಾಡುತ್ತಿದ್ದಾರೆ. ಆದರೆ, ಕೇಂದ್ರದ ಬಿಜೆಪಿ ನಾಯಕರು ಹೊಸದಾಗಿ ಚುನಾವಣೆ ಎದುರಾಗುವಂತೆ ತಂತ್ರಗಳನ್ನು ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News