ಚಿಕ್ಕಮಗಳೂರಿನಲ್ಲಿ ಬಿಡುವು ನೀಡಿದ ಮಳೆ: ಅಲ್ಲಲ್ಲಿ ಭೂ ಕುಸಿತ, ನದಿಗಳ ನೀರಿನ ಹರಿವಿನಲ್ಲಿ ಇಳಿಕೆ

Update: 2019-07-07 13:05 GMT

ಚಿಕ್ಕಮಗಳೂರು, ಜು.7: ಕಳೆದೊಂದು ವಾರದಿಂದ ಸುರಿಯುತ್ತಿದ್ದ ಧಾರಾಕಾರ ಮಳೆ ರವಿವಾರ ಜಿಲ್ಲಾದ್ಯಂತ ಕ್ಷೀಣಿಸಿದ್ದು, ರವಿವಾರ ಬೆಳಗ್ಗೆಯಿಂದ ಸಂಜೆವರೆಗೆ ಜಿಲ್ಲೆಯ ಮಲೆನಾಡು ಸೇರಿದಂತೆ ಬಯಲುಸೀಮೆ ಪ್ರದೇಶಗಳಲ್ಲಿ ಬಿಸಿಲು ಹಾಗೂ ಮೋಡ ಕವಿದ ವಾತಾವರಣವಿತ್ತು.

ಜಿಲ್ಲೆಯ ಮಲೆನಾಡು ಭಾಗದ ತಾಲೂಕುಗಳಾದ ಮೂಡಿಗೆರೆ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ವ್ಯಾಪ್ತಿಯಲ್ಲಿ ಕಳೆದೊಂದುವಾರದಿಂದ ಮಳೆಯ ಆರ್ಭಟ ಜೋರಾಗಿದ್ದು, ಶನಿವಾರ ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿತ್ತು. ಆದರೆ ಶನಿವಾರ ರಾತ್ರಿಯಿಂದಲೇ ಮಳೆ ಕ್ಷೀಣಿಸಿದ್ದು, ರವಿವಾರ ಹಗಲಿಡೀ ಬಿಸಿಲಿನೊಂದಿಗೆ ಮೋಡಗಳ ಕಣ್ಣಾಮುಚ್ಚಾಲೆಯಾಟ ಮುಂದುವರಿದಿತ್ತು.

ಭಾರೀ ಮಳೆಯಿಂದಾಗಿ ಮಲೆನಾಡಿನ ಜೀವನದಿಗಳಾದ ಹೇಮಾವತಿ, ತುಂಗಾ, ಭದ್ರಾ ನದಿಗಳು ಶನಿವಾರ ತುಂಬಿಹರಿಯುತ್ತಿದ್ದು, ರವಿವಾರ ಜಿಲ್ಲಾದ್ಯಂತ ಮಳೆಯ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಈ ನದಿಗಳಲ್ಲಿನ ನೀರಿನ ಹರಿವಿನ ತೀವ್ರತೆಯೂ ಕಡಿಮೆಯಾಗಿದೆ. ಜಿಲ್ಲೆಯ ಕಳಸ ತಾಲೂಕಿನಾದ್ಯಂತ ಶನಿವಾರ ಆರ್ಭಟಿಸಿದ್ದ ಮಳೆ ರವಿವಾರ ಕಡಿಮೆಯಾಗಿದೆ. ಇದರಿಂದಾಗಿ ಭದ್ರಾ ನದಿಯಲ್ಲಿ ನೀರಿನ ಮಟ್ಟ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿದೆ. ಶನಿವಾರ ಬಿರುಸುಗೊಂಡಿದ್ದ ಮಳೆಯಿಂದಾಗಿ ಭದ್ರಾ ನದಿಯು ಅಪಾಯ ಮಟ್ಟದಲ್ಲಿ ಹರಿಯುತ್ತಿತ್ತು. ತುಂಬಿ ಹರಿಯುತ್ತಿದ್ದ ನದಿಗಳ ನೀರಿನ ಮಟ್ಟ ಕಡಿಮೆಯಾಗುತ್ತಿದ್ದಂತೆ ಅಲ್ಲಲ್ಲಿ ಭೂಕುಸಿತದಂತಹ ಘಟನೆಗಳು ರವಿವಾರ ವರದಿಯಾಗಿವೆ. 

ಕಳಸ-ಕುದುರೆಮುಖ ರಾಜ್ಯ ಹೆದ್ದಾರಿಯಲ್ಲಿರುವ ಕಾರಗದ್ದೆ ಗ್ರಾಮದ ಸಮೀಪ ಗುಡ್ಡ ಜರಿದು ಬಿದ್ದಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಗುಡ್ಡ ಜರಿದು ಬಿದ್ದ ಪರಿಣಾಮ ಭಾರೀ ಗಾತ್ರದ ಕಲ್ಲುಗಳು ರಸ್ತೆಯನ್ನು ಆವರಿಸಿವೆ. ರವಿವಾರ ಸಂಜೆಯಾದರೂ ಈ ಕಲ್ಲುಗಳ ತೆರವು ಮಾಡಿಲ್ಲ ಎಂದು ವಾಹನ ಸವಾರರು ದೂರಿದ್ದಾರೆ. ಇನ್ನು ಕಳಸ-ಮಂಗಳೂರು ರಸ್ತೆಯುದ್ದಕ್ಕೂ ಅಲ್ಲಲ್ಲಿ ಮರಗಳು ಬಿದ್ದು ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. 

ಕಳಸ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾರ್ಲೆ ಗ್ರಾಮದಲ್ಲಿರುವ ಸಣ್ಣ ನದಿಯೊಂದು ತುಂಬಿಹರಿಯುತ್ತಿದ್ದು, ಹಳ್ಳ ದಾಟಲಾಗದ ಇಲ್ಲಿನ ನೂರಾರು ನಿವಾಸಿಗಳು, ಶಾಲಾ ಕಾಲೇಜು ಮಕ್ಕಳು ಶಿಥಿಲಗೊಂಡ ಸೇತುವೆಯಲ್ಲಿ ಪ್ರಾಣ ಭಯದಿಂದ ತಿರುಗಾಡುವಂತಾಗಿದೆ. ಅದೇ ಗ್ರಾಮದಲ್ಲಿ ಹಳ್ಳವೊಂದರಲ್ಲಿ ನೀರು ತುಂಬಿ ಹರಿಯುತ್ತಿದ್ದು, ಸೇತುವೆ ಇಲ್ಲದ ಪರಿಣಾಮ ಗ್ರಾಮದಲ್ಲಿರುವ ಹತ್ತಾರು ಮನೆಗಳು ಕಳಸ ಪಟ್ಟಣದ ಸಂಪರ್ಕ ಕಡಿತಗೊಂಡಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕಳಸ ಸಮೀಪದ ಜಾವಳಿ ಗ್ರಾಮದಲ್ಲಿ ಶನಿವಾರ ಸಂಜೆ ಭಾರೀ ಗಾತ್ರದ ಮರವೊಂದು ರಸ್ತೆಗುರುಳಿ ಬಿದ್ದ ಪರಿಣಾಮ 5 ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಸ್ಥಳೀಯರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಮರವನ್ನು ತೆರವುಗೊಳಿಸಿದರು.

ಶೃಂಗೇರಿ, ಕೊಪ್ಪ, ನರಸಿಂಹರಾಜಪುರ, ಮೂಡಿಗೆರೆ ತಾಲೂಕು ವ್ಯಾಪ್ತಿಯಲ್ಲೂ ರವಿವಾರ ಮಳೆ ಕ್ಷೀಣಿಸಿದ್ದು, ಆಗಾಗ್ಗೆ ತುಂತುರು ಮಳೆಯಾಗಿದೆ. ಇನ್ನು ಚಿಕ್ಕಮಗಳೂರು ತಾಲೂಕು ವ್ಯಾಪ್ತಿಯಲ್ಲಿ ರವಿವಾರ ಅಲ್ಲಲ್ಲಿ ತುಂತುರು ಮಳೆಯಾಗಿದ್ದರೆ, ಕಡೂರು, ತರೀಕೆರೆ ತಾಲೂಕುಗಳ ವ್ಯಾಪ್ತಿಯಲ್ಲಿ ಮೋಡಕವಿದ ವಾತಾವರಣ ಎಂದಿನಂತೆ ಮುಂದುವರಿದಿತ್ತು. ಮಲೆನಾಡಿನಲ್ಲಿ ಕಳೆದೊಂದು ವಾರದಿಂದ ಸುರಿದ ಧಾರಾಕಾರ ಮಳೆ ರವಿವಾರ ಬಿಡುವು ನೀಡಿರುವುದರಿಂದ ಭತ್ತದ ಗದ್ದೆಗಳು, ಕಾಫಿ, ಅಡಿಕೆ ತೋಟಗಳಲ್ಲಿ ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News