ಕ್ಷೇತ್ರದ ಜನತೆಯ ಕ್ಷಮೆ ಕೋರಿದ ಶಾಸಕ ಬಿ.ಸಿ.ಪಾಟೀಲ್

Update: 2019-07-07 13:09 GMT

ಬೆಂಗಳೂರು, ಜು. 7: ಹಾವೇರಿ ಜಿಲ್ಲೆಯ ಹಿರೇಕೆರೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಸಿ.ಪಾಟೀಲ್ ತನ್ನ ರಾಜೀನಾಮೆಗೆ ಕ್ಷೇತ್ರದ ಮತದಾರರು ಮತ್ತು ಕಾರ್ಯಕರ್ತರಲ್ಲಿ ಕ್ಷಮೆ ಕೋರಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಕ್ಷಮೆಯಾಚಿಸಿದ್ದು, ಸಚಿವ ಸ್ಥಾನ ನೀಡದೇ ಪಕ್ಷ ತಾಲೂಕಿಗೆ ಅನ್ಯಾಯ ಮಾಡಿದೆ. ನಿಮ್ಮ ಸಲಹೆ-ಸೂಚನೆ ಪಡೆದು ಮುಂದಿನ ನಿರ್ಧಾರ ತೆಗೆದುಕೊಳ್ಳತ್ತೇನೆ. ಆದರೆ, ರಾಜೀನಾಮೆ ಹಿಂಪಡೆಯುವ ಪ್ರಶ್ನೆಯೆ ಇಲ್ಲ ಎಂದು ಬಿ.ಸಿ.ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.

‘ಆತ್ಮೀಯ ಬಂಧುಗಳೇ ರಾಜಕೀಯ ಗೊತ್ತಿಲ್ಲದ ನನಗೆ ಆಕಸ್ಮಿಕವಾಗಿ ರಾಜಕಾರಣಕ್ಕೆ ಬಂದಾಗ ಮೂರು ಬಾರಿ ನನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡಿದ್ದೀರಿ. ಇದುವರೆಗೂ ನಾನು ನನ್ನ ಕೈಲಾದ ಅಭಿವೃದ್ಧಿ ಕೆಲಸವನ್ನು ಮಾಡಿ ತಾಲೂಕು ಅಭಿವೃದ್ಧಿಯ ಕಡೆಗೆ ದಾಪುಗಾಲಿಟ್ಟಿದೆ. ಈಗ ತಮ್ಮೆಲ್ಲರಿಗೂ ಗೊತ್ತಿರುವ ಹಾಗೆ ತಾಲೂಕಿಗೆ ಸಾಕಷ್ಟು ಅನ್ಯಾಯವನ್ನು ಮಾಡಿ ಕಾಂಗ್ರೆಸ್ ಬೇರೆಯವರಿಗೆ ಮಂತ್ರಿ ಪದವಿಯನ್ನು ಕೊಟ್ಟು ತಾಲೂಕಿಗೆ ದೊಡ್ಡ ದ್ರೋಹ ಮಾಡಿದೆ. ಇದರಿಂದಾಗಿ ಸರ್ವತೋಮುಖ ಅಭಿವೃದ್ಧಿಗೆ ಕುಂಠಿತವಾಗುತ್ತದೆ. ಅಲ್ಲದೆ, ತಾಲೂಕಿನ ಮುಂದಿನ ಬೃಹತ್ ಭವಿಷ್ಯವನ್ನು ನೆನೆದು ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗಾಗಿ ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ.

ತಮ್ಮ ಕ್ಷಮೆ ಇರಲಿ, ಮುಂದಿನ ದಿನಗಳಲ್ಲಿ ತಮ್ಮ ಸಲಹೆ-ಸೂಚನೆಗಳನ್ನು ಪಡೆದು ಮುಂದಿನ ನಿರ್ಧಾರವನ್ನು ಕೈಗೊಳ್ಳುತ್ತೇನೆ. ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಯೇ ನನ್ನ ಗುರಿಯಾಗಿದ್ದು, ಸದಾ ನಿಮ್ಮ ಆಶೀರ್ವಾದ ಬೇಕೆಂದು ಕೇಳಿ ಮತ್ತೊಮ್ಮೆ ತಮ್ಮಲ್ಲಿ ಕ್ಷಮೆಯನ್ನು ಕೇಳಿ ತಮ್ಮ ಆಶೀರ್ವಾದವನ್ನು ಬೇಡುತ್ತಿದ್ದೇನೆ’ ಎಂದು ಬಿ.ಸಿ.ಪಾಟೀಲ್ ಕ್ಷೇತ್ರದ ಕಾರ್ಯಕರ್ತರಿಗೆ ಸಂದೇಶ ರವಾನಿಸಿದ್ದಾರೆ.

‘ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಯಾವುದೇ ಕಾರಣಕ್ಕೂ ರಾಜೀನಾಮೆ ಹಿಂಪಡೆಯುವುದಿಲ್ಲ. ಮುಂದೆ ಏನಾಗಬೇಕು, ಎನು ಮಾಡಬೇಕು ಅನ್ನೋ ಚರ್ಚೆ ಇನ್ನೂ ಆಗಿಲ್ಲ. ಮುಂದೆ ಏನಾಗುತ್ತೆ ಕಾದುನೋಡಬೇಕು. ಸದ್ಯ ಮುಂಬೈನಲ್ಲಿದ್ದು, ಬಿಜೆಪಿಗೆ ಹೋಗುವ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ’

-ಬಿ.ಸಿ.ಪಾಟೀಲ್, ಹೀರೆಕೆರೂರು ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News