5 ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ: ಮಾಜಿ ಸಿಎಂ ಸಿದ್ದರಾಮಯ್ಯ

Update: 2019-07-07 16:06 GMT

ಬೆಂಗಳೂರು, ಜು.7: ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ಸಿಎಂ ಕುಮಾರಸ್ವಾಮಿ ಆ ಸ್ಥಾನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಸಿಎಂ ಸ್ಥಾನದ ಪೈಪೋಟಿ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಮುಖ್ಯಮಂತ್ರಿ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್ ಪಕ್ಷದಿಂದ ಆಯ್ಕೆ ಮಾಡುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ‘ಸಿಎಂ ಸ್ಥಾನ ಖಾಲಿ ಇಲ್ಲ. ಕುಮಾರಸ್ವಾಮಿ ಇದ್ದಾರೆ. ಅಲ್ಲದೆ, ರಾಮಲಿಂಗಾ ರೆಡ್ಡಿಗೆ ಸಂಪುಟ ವಿಸ್ತರಣೆ ವೇಳೆ ಮಂತ್ರಿ ಮಾಡುವುದಾಗಿ ತಿಳಿಸಿದ್ದೆ. ಆದರೆ ಈಗ ಅವರಿಗೆ ಏನಾಯಿತೋ ಎಂದರು.

ರಾಜೀನಾಮೆ ನೀಡಿರುವವರ ಪೈಕಿ 5 ಮಂದಿ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ಬಿಜೆಪಿಯವರು ಅಧಿಕಾರದ ಆಸೆಯಿಂದ ಕಾಂಗ್ರೆಸ್-ಜೆಡಿಎಸ್ ಶಾಸಕರಿಗೆ ಹಣ ಹಾಗೂ ಅಧಿಕಾರದ ಆಸೆ ತೋರಿಸಿ ಸೆಳೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ನಾನು ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಯಾವ ಶಾಸಕರೂ ಪಕ್ಷ ಬಿಡದಂತೆ ಸೂಚನೆ ನೀಡಿದ್ದೆ. ಆದರೂ ಕೆಲವರು ಹೋಗಿದ್ದಾರೆ. ಅವರ ಮನವೊಲಿಸುವ ಕರೆತರುವ ಪ್ರಯತ್ನ ನಡೆದಿದೆ ಎಂದು ಹೇಳಿದರು.

ನನಗೆ ಆಪ್ತರು ಎಂಬುದೇನಿಲ್ಲ. ಕಾಂಗ್ರೆಸ್‌ನ ಎಲ್ಲ ಶಾಸಕರು ನನಗೆ ಆತ್ಮೀಯರೇ. ಅದೇ ರೀತಿ ಬಿಜೆಪಿಯಲ್ಲೂ ನನಗೆ ಆತ್ಮೀಯರಿದ್ದಾರೆ. ಈಗಾಗಲೇ ಮುಂಬೈನಲ್ಲಿರುವ ಶಾಸಕರ ಜೊತೆ ಮಾತನಾಡಿದ್ದೇನೆ. ನಮ್ಮ ಪ್ರಯತ್ನವನ್ನು ನಾವು ಮುಂದುವರೆಸಿದ್ದೇವೆ. ಶೀಘ್ರವೇ ಎಲ್ಲವೂ ಒಂದು ಹಂತಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅತೃಪ್ತ ಶಾಸಕರ ಮನವೊಲಿಸುವ ಪ್ರಯತ್ನವನ್ನು ಮಾಡುತ್ತಾ ಇದ್ದೇವೆ. ಅಲ್ಲದೆ ರಾಜೀನಾಮೆ ನೀಡಿರುವ ಶಾಸಕರಿಂದ ಸರಕಾರಕ್ಕೆ ಏನೂ ನಷ್ಟವಿಲ್ಲ. ಸರಕಾರ ಭದ್ರವಾಗಿದೆ. ನಾನು ಮತ್ತೆ ಸಿಎಂ ಆದರೆ ರಾಜೀನಾಮೆ ವಾಪಸ್ಸು ತೆಗೆದುಕೊಳ್ಳುವ ಬಗ್ಗೆ ನನ್ನ ಬಳಿ ಯಾವ ಶಾಸಕನೂ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News