ನೆಕ್ಲೇಸ್ ದರೋಡೆಗೆ ಮಾಲಕನನ್ನು ಕೊಲೆಗೈದಿದ್ದ 6 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Update: 2019-07-07 18:42 GMT

ಬೆಂಗಳೂರು, ಜು.7: ತಾವು ಮಾಡಿಕೊಂಡಿದ್ದ ಸಾಲ ತೀರಿಸಲು 18 ಕೋಟಿ ರೂ. ಮೌಲ್ಯದ ಪುರಾತನ ವಜ್ರ ಖಚಿತ ನೆಕ್ಲೇಸ್ ದರೋಡೆ ಮಾಡಲು, ಅದರ ಮಾಲಕನನ್ನು ಕೊಲೆಗೈದ ಆರು ಅಪರಾಧಿಗಳಿಗೆ ನಗರದ 57ನೆ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಜೈಲು ಶಿಕ್ಷೆ ವಿಧಿಸಿದೆ.

ರಾಜ್ಯದಲ್ಲಿ 2014ರಲ್ಲಿ ಸಂಚಲನ ಸೃಷ್ಟಿಸಿದ್ದ ಪ್ರಕರಣವಿದು. ವಜ್ರದ ನೆಕ್ಲೇಸ್ ಮಾಲಕರಾಗಿದ್ದ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಉದಯ್‌ರಾಜ್ ಸಿಂಗ್ ಅವರನ್ನು ಅಭಿಷೇಕ್, ಕಿರಣ್, ಸತೀಶ್, ದಿಲೀಪ್‌ಕುಮಾರ್, ಶ್ರೀಧರ್ ಮತ್ತು ಅಮಿತ್‌ಕುಮಾರ್ ಕೊಲೆಗೈದಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಲಯ ಈ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ನೀಡಿ ಆದೇಶಿಸಿದೆ.

ಇನ್ನು ಪ್ರಕರಣದ ಎರಡನೆ ಆರೋಪಿ ಮಧುಸೂದನ್ ವಿರುದ್ಧದ ಆರೋಪಗಳ ಕುರಿತು ಪ್ರತ್ಯೇಕವಾಗಿ ವಿಚಾರಣೆ ನಡೆಸಲು ನ್ಯಾಯಾಲಯ ನಿರ್ಧರಿಸಿದೆ.

ಮೈಸೂರಿನ ಮಧುಸೂದನ್ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಕಂಪೆನಿಯೊಂದನ್ನು ತೆರೆದಿದ್ದ. ಆ ಕಂಪೆನಿಯಿಂದಾಗಿ ಕೋಟ್ಯಂತರ ರೂ.ಸಾಲದ ಸುಳಿಯಲ್ಲಿ ಸಿಲುಕಿದ್ದ. ಆತನಿಗೆ ಉದಯ್‌ರಾಜ್ ಸಿಂಗ್ ಬಳಿ ವಜ್ರ ಖಚಿತ ಚಿನ್ನದ ನೆಕ್ಲೇಸ್ ಇರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಆ ನೆಕ್ಲೇಸ್‌ ದೋಚಿ ಮುಂಬೈನಲ್ಲಿ ಮಾರಾಟ ಮಾಡಿದರೆ, ಅದರಿಂದ ಬಂದ ಹಣದಿಂದ ಸಾಲ ತೀರಿಸಿ ಜೀವನದಲ್ಲಿ ಸೆಟ್ಲ್ ಆಗಬಹುದು ಎಂದು ಮಧು ಯೋಚಿಸಿದ್ದ.

ಆ ಬಗ್ಗೆ ಸ್ನೇಹಿತರಾದ ಅಭಿಷೇಕ್, ಕಿರಣ್, ಸತೀಶ್, ದಿಲೀಪ್‌ಕುಮಾರ್, ಶ್ರೀಧರ್ ಮತ್ತು ಅಮಿತ್‌ಕುಮಾರ್‌ಗೆ ತಿಳಿಸಿದ್ದ. ಅದಕ್ಕೆ ಎಲ್ಲರೂ ಒಪ್ಪಿದ್ದು, ಅದರಂತೆ ಉದಯ್ ರಾಜ್‌ಸಿಂಗ್ ರಿಂದ ನೆಕ್ಲೇಸ್ ದೋಚಿ, ಸಿಂಗ್ ಅವರ ಕೈಕಾಲು ಕಟ್ಟಿ, ಬಾಯಿ ಹಿಡಿದುಕೊಂಡು ಸರ್ಜಿಕಲ್ ಬ್ಲೇಡ್‌ನಿಂದ ಕತ್ತು ಕೊಯ್ದಿದ್ದರು.

ಘಟನೆ ನೋಡಿದ್ದ ಉದಯ್ ಸಿಂಗ್ ಪತ್ನಿ ಸುಶೀಲಾ ಜೋರಾಗಿ ಕಿರುಚಾಡಿದ್ದರು. ಅವರಿಗೂ ಅಪರಾಧಿಗಳು ಚಾಕುವಿನಿಂದ ಚುಚ್ಚಿದ್ದರು. ಸುಶೀಲಾರ ಚೀರಾಟ ಕೇಳಿ ಪಕ್ಕದ ಮನೆಯವರು ನೀಡಿದ್ದ ಮಾಹಿತಿ ಮೇರೆಗೆ ಆಡುಗೋಡಿ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ, ಅಭಿಷೇಕ್, ಮಧುಸೂದನ್ ಹಾಗೂ ಕಿರಣ್‌ನನ್ನು ಬಂಧಿಸಿದ್ದರು. ಮರುದಿನ ಸತೀಶ್, ದಿಲೀಪ್‌ಕುಮಾರ್, ಶ್ರೀಧರ್ ಹಾಗೂ ಅಮಿತ್‌ಕುಮಾರ್‌ನನ್ನು ಬಂಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News