Breaking News: ಐಟಿ, ಈ.ಡಿ.ಯನ್ನು ಮುಂದಿಟ್ಟು ಬಿಜೆಪಿ ನಾಯಕರು ಶಾಸಕರನ್ನು ಹೆದರಿಸುತ್ತಿದ್ದಾರೆ: ಸಿದ್ದರಾಮಯ್ಯ

Update: 2019-07-08 13:46 GMT

ಬೆಂಗಳೂರು, ಜು.8: ಆದಾಯ ತೆರಿಗೆ ಇಲಾಖೆ(ಐಟಿ) ಹಾಗೂ ಜಾರಿ ನಿರ್ದೇಶನಾಲಯ(ಈಡಿ)ವನ್ನು ಬಳಸಿಕೊಂಡು, ಹಣದ ಆಮಿಷವೊಡ್ಡಿ ನಮ್ಮ ಶಾಸಕರನ್ನು ಸೆಳೆಯಲು ಬಿಜೆಪಿ ಪ್ರಯತ್ನ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಸೋಮವಾರ ಸದಾಶಿವನಗರದಲ್ಲಿರುವ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ನಿವಾಸದಲ್ಲಿ ಕಾಂಗ್ರೆಸ್ ಸಚಿವರಿಗಾಗಿ ಆಯೋಜಿಸಿದ್ದ ಉಪಾಹಾರ ಕೂಟದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಮೂಲಕ ಕುದುರೆ ವ್ಯಾಪಾರ ನಡೆಸುತ್ತಿದ್ದಾರೆ ಎಂದು ದೂರಿದರು.

ಬಿಜೆಪಿ ಪ್ರಜಾಪ್ರಭುತ್ವ ಹಾಗೂ ಸಂಸದೀಯ ವ್ಯವಸ್ಥೆಯಲ್ಲಿ ನಂಬಿಕೆಯಿಲ್ಲ. ಕಳೆದ ಚುನಾವಣೆಯಲ್ಲಿ ಅವರಿಗೆ ಜನಾದೇಶ ಸಿಕ್ಕಿಲ್ಲ. ಆದರೂ ಸಹ ಅಸಂವಿಧಾನಿಕ ಮಾರ್ಗದ ಮೂಲಕ ಶಾಸಕರನ್ನು ತಮ್ಮತ್ತ ಸೆಳೆದುಕೊಂಡು ಸರಕಾರ ರಚಿಸುವ ವಿಫಲ ಯತ್ನಕ್ಕೆ ಕೈ ಹಾಕಿದೆ. ಇದು ಸಹ ಹಿಂದಿನಂತೆ ಯಶಸ್ವಿಯಾಗುವುದಿಲ್ಲ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರ ಸರಕಾರವನ್ನು ಬಳಸಿಕೊಂಡು ಸಮ್ಮಿಶ್ರ ಸರಕಾರವನ್ನು ಕಳೆದ ಒಂದು ವರ್ಷದಿಂದ ನಿರಂತರವಾಗಿ ಅಸ್ಥಿರಗೊಳಿಸಲು ಬಿಜೆಪಿಯವರು ಪ್ರಯತ್ನಿಸುತ್ತಿದ್ದಾರೆ. ಬರೀ ರಾಜ್ಯ ಅಲ್ಲ ರಾಷ್ಟ್ರದ ಬಿಜೆಪಿಯ ಕುಮ್ಮಕ್ಕಿನಿಂದ ಈ ಪ್ರಯತ್ನಗಳು ನಡೆಯುತ್ತಿದೆ ಎಂದು ಅವರು ಆರೋಪ ಮಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಏನು ಬೇಕಾದರೂ ಮಾಡಿಕೊಳ್ಳಲಿ. ಈ ರೀತಿ ಶಾಸಕರಿಗೆ ಒತ್ತಡ ಹೇರಿ, ರಾಜೀನಾಮೆ ಕೊಡಿಸುವುದು ಸರಿಯಲ್ಲ. ಬಿಜೆಪಿ ಇಂತಹ ನೀಚ ರಾಜಕಾರಣಕ್ಕೆ ಕೈ ಹಾಕಿರುವುದು ಅಕ್ಷಮ್ಯ. ನಮಗೆ ಎಷ್ಟೆ ಕಷ್ಟವಾದರೂ ಈ ಸರಕಾರವನ್ನು ಉಳಿಸಿಕೊಳ್ಳುತ್ತವೆ. ನಾವು ಯಾವುದೇ ರೀತಿಯ ತ್ಯಾಗ ಮಾಡುವುದಕ್ಕೆ ಬದ್ಧರಾಗಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಕೆಲವು ಶಾಸಕರ ರಾಜೀನಾಮೆಯಿಂದ ಉಂಟಾಗಿರುವ ಬಿಕ್ಕಟ್ಟನ್ನು ಪರಿಹರಿಸಲು ಕಾಂಗ್ರೆಸ್ ಪಕ್ಷದ ಉಪ ಮುಖ್ಯಮಂತ್ರಿ ಸೇರಿದಂತೆ 21 ಸಚಿವರು ಸ್ವಯಂ ಪ್ರೇರಿತರಾಗಿ ರಾಜೀನಾಮೆ ನೀಡಿದ್ದಾರೆ. ಇಂದಿನ ಸಭೆಗೆ ಹಾಜರಾಗದ ಸಚಿವರು ಕೂಡ ರಾಜೀನಾಮೆಗೆ ಒಪ್ಪಿಕೊಂಡಿದ್ದಾರೆ ಎಂದು ಅವರು ತಿಳಿಸಿದರು. ಮಂತ್ರಿ ಸ್ಥಾನದಿಂದ ವಂಚಿತರಾದ ಕಾರಣಕ್ಕೆ ರಾಜೀನಾಮೆ ನೀಡುತ್ತಿರುವ ಶಾಸಕರು, ಬಿಜೆಪಿಯ ಆಮಿಷಗಳಿಗೆ ಬಲಿಯಾಗದೆ ರಾಜೀನಾಮೆಯನ್ನು ವಾಪಸ್ಸು ಪಡೆಯಬೇಕು. ಅವರ ಸಮಸ್ಯೆಗಳನ್ನು ಆಲಿಸಿ ತಕ್ಷಣ ಪರಿಹಾರ ಮಾಡುತ್ತೇವೆ ಎಂದು ಪಕ್ಷದ ಪರವಾಗಿ ನಾನು ಮನವಿ ಮಾಡುತ್ತಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.

ಇದು ಸಮ್ಮಿಶ್ರ ಸರಕಾರವಾಗಿರುವ ಕಾರಣದಿಂದ ಎಲ್ಲರನ್ನೂ ಸಚಿವರನ್ನಾಗಿ ಮಾಡಲು ಸಾಧ್ಯವಿಲ್ಲ. ನಾವು ಈಗಾಗಲೇ ಮಂತ್ರಿಮಂಡಲ ಪುನರ್ ರಚನೆ ನಿರ್ಧಾರಕ್ಕೆ ಬಂದಿದ್ದೇವೆ. ಯಾರಿಗೆ ಸಚಿವ ಸ್ಥಾನ ಬೇಕೋ ಅವರಿಗೆ ಸಚಿವ ಸ್ಥಾನ ನೀಡಲಾಗುವುದು ಎಂದು ಅವರು ಹೇಳಿದರು.

ನಮ್ಮ ಪಕ್ಷದಲ್ಲಿ ಮಂತ್ರಿ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಸಹಜವಾಗಿ ಕೆಲವರಿಗೆ ಬೇಸರವಿದೆ. ಅದನ್ನು ಸರಿಪಡಿಸುವುದಕ್ಕಾಗಿ ನಮ್ಮ ಮಂತ್ರಿಗಳೆಲ್ಲರೂ ಸ್ವಯಂ ಪ್ರೇರಣೆಯಿಂದ ರಾಜೀನಾಮೆ ನೀಡಿದ್ದು, ಪಕ್ಷದ ಭವಿಷ್ಯ ಮುಖ್ಯವೇ ಹೊರತು, ವೈಯಕ್ತಿಕ ಸ್ಥಾನಮಾನ ಮುಖ್ಯವಲ್ಲ ಎಂಬ ಒಕ್ಕೊರಲ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಅವರು ಸಿದ್ದರಾಮಯ್ಯ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News