ನಾಲೆಗಳಿಗೆ ನೀರು ಬಿಡುಗಡೆಗೆ ಒತ್ತಾಯಿಸಿ ರಸ್ತೆ ತಡೆ

Update: 2019-07-08 12:24 GMT

ಮಂಡ್ಯ, ಜು.8: ಬೆಳೆಗಳಿಗೆ ಹಾಗೂ ಜನ ಜಾನುವಾರುಗಳಿಗೆ ಕುಡಿಯಲು ಕೆಆರ್‍ಎಸ್ ಜಲಾಶಯದಿಂದ ನೀರು ಬಿಡುಗಡೆ ಮಾಡಲು ಒತ್ತಾಯಿಸಿ ತಾಲೂಕಿನ ಹೊಳಲು ಗ್ರಾಮದಲ್ಲಿ ಸೋಮವಾರ ರೈತಸಂಘದ ಕಾರ್ಯಕರ್ತರು ರಸ್ತೆ ತಡೆ ನಡೆಸಿದರು.

ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ್ದ ರೈತರು ಮಾರ್ಗದ ವಾಹನಗಳ ಸಂಚಾರಕ್ಕೆ ತಡೆಯೊಡ್ಡಿ ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕಬ್ಬು, ಹಿಪ್ಪು ನೇರಳೆ ಮುಂತಾದ ಬೆಳೆಗಳು ನೀರಿಲ್ಲದೆ ಒಣಗಿ ಹೋಗುತ್ತಿವೆ. ಜನ ಜಾನುವಾರುಗಳ ಕುಡಿಯುವ ನೀರಿಗೂ ಪರದಾಡುವಂತಾಗಿದೆ. ಆದರೆ, ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಅವರು ಕಿಡಿಕಾರಿದರು.

ವಾರಗಳ ಕಾಲ ಧರಣಿ ನಡೆಸಿ ಜಲಾಶಯಕ್ಕೆ ಮುತ್ತಿಗೆ ಹಾಕಿದರೂ ಸರಕಾರ ಕಿವಿಗೊಡಲಿಲ್ಲ. ನಂತರ, ಜಿಲ್ಲೆಯಾದ್ಯಂತ ರಸ್ತೆತಡೆ ಚಳವಳಿ ನಡೆಸಿ ಎಚ್ಚರಿಸಿದರೂ ಕ್ರಮವಹಿಸುತ್ತಿಲ್ಲ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಜಲಾಶಯದಲ್ಲಿ 70 ಅಡಿ ನೀರಿದ್ದಾಗಲೂ ಬೆಳೆಗಳಿಗೆ ನೀರು ಹರಿಸಲಾಗಿದೆ. ಕಾವೇರಿ ನದಿ ನೀರು ಪ್ರಾಧಿಕಾರಕ್ಕೆ ಮಾತ್ರ ನೀರು ಬಿಡುವ ಅಧಿಕಾರವಿದೆ ಎಂದು ರಾಜ್ಯ ಸರಕಾರ ಜವಾಬ್ಧಾರಿಯಿಂದ ಜಾರಿಗೊಳ್ಳುತ್ತಿದೆ ಎಂದು ಅವರು ದೂರಿದರು.

ಕಳೆದ ಕೆಲವು ದಿನದಿಂದ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಾಗಿದೆ. ಪ್ರಸ್ತುತ 83 ಅಡಿ ಸಮೀಪಿಸಿದೆ. ಆದ್ದರಿಂದ ನಾಲೆಗಳಿಗೆ ನೀರು ಹರಿಸಬೇಕು. ಈಗಾಗಲೇ ಸಂಪೂರ್ಣ ಒಣಗಿರುವ ಬೆಳೆಗಳಿಗೆ ವೈಜ್ಞಾನಿಕ ಪರಿಹಾರ ಕೊಡಬೇಕು ಎಂದು ಅವರು ಒತ್ತಾಯಿಸಿದರು.

ಬಳ್ಳಾರಿಗೌಡ, ರೇಣುಕುಮಾರ್, ಚೇತನ್, ದುಮ್ಮಣ್ಣ, ಯಶ್, ರಾಜ, ಜಟ್ಟಿಕುಮಾರ್, ಪಟೇಲ್ ರಾಮು, ಪ್ರಕಾಶ್, ರಾಜಶೇಖರ್, ನಾರಾಯಣಿ, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News