ಡಾ.ಜಿ.ಮಾದೇಗೌಡ ಪ್ರಶಸ್ತಿಗೆ ನ್ಯಾ.ನಾಗಮೋಹನದಾಸ್, ಕುಮಾರಸ್ವಾಮಿ ಆಯ್ಕೆ

Update: 2019-07-08 12:56 GMT

ಮಂಡ್ಯ, ಜು.8: ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಮತ್ತು ಸಾವಯವ ಕೃಷಿಕ ಬಿ.ಜೆ.ಕುಮಾರಸ್ವಾಮಿ ಅವರನ್ನು ಕ್ರಮವಾಗಿ ಡಾ.ಜಿ.ಮಾದೇಗೌಡ ಸಮಾಜ ಸೇವಾ ಹಾಗೂ ಸಾವಯವ ಕೃಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜಿ.ಮಾದೇಗೌಡ ಪ್ರತಿಷ್ಠಾನದ ಅಧ್ಯಕ್ಷ ಬಿ.ಬಸವರಾಜು, ಪ್ರಶಸ್ತಿ ತಲಾ 25 ಸಾವಿರ ರೂ. ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ ಎಂದರು.

ನಗರದ ರೈತಸಭಾಂಗಣದಲ್ಲಿ ಜು.10 ರಂದು ಸಂಜೆ 5.30ಕ್ಕೆ ನಡೆಯುವ ಸಮಾರಂಭದಲ್ಲಿ ಖ್ಯಾತ ಸಾಹಿತಿ ಡಾ.ದೊಡ್ಡರಂಗೇಗೌಡ ಪ್ರಶಸ್ತಿ ಪ್ರದಾನ ಮಾಡಲಿದ್ದು, ಮಾಜಿ ಸಂಸದ ಡಾ.ಜಿ.ಮಾದೇಗೌಡ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕು ಹೆಬ್ಬಣ್ಣಿ ಗ್ರಾಮದಲ್ಲಿ ಜನಿಸಿದ ನಾಗಮೋಹನದಾಸ್, ಶಾಲಾ ದಿನಗಳಲ್ಲೇ ಪ್ರಜಾಸತ್ತಾತ್ಮಕ ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದರು. ನಿವೃತ್ತಿಯ ನಂತರವೂ ಹೋರಾಟ ಮುಂದುವರಿಸಿದ್ದಾರೆ.

ಸರಕಾರದ ಹಲವು ಆಯೋಗಗಳ ಅಧ್ಯಕ್ಷರಾಗಿ, ವರಮಾನ ತೆರಿಗೆ ಇಲಾಖೆ ಹಾಗೂ ಸಾರ್ವಜನಿಕ ಸಂಸ್ಥೆಗಳ ಕಾನೂನು ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಅನೇಕ ಕೃತಿಗಳನ್ನು ಬರೆದಿದ್ದಾರೆ. ಶ್ರೀಸಾಮಾನ್ಯರಲ್ಲಿ ಸಂವಿಧಾನ ಮತ್ತು ಕಾನೂನಿನ ಬಗ್ಗೆ ಅರಿವು ಮೂಡಿಸಿದ್ದಾರೆ.

ತುಮಕೂರು ಜಿಲ್ಲೆ ಬಳ್ಳೇಕೆರೆ ಗ್ರಾಮದ ಬಿ.ಜೆ.ಕುಮಾರಸ್ವಾಮಿ ಇಚಿಜನಿಯರ್ ಪದವೀಧರರಾದರೂ ಸಾವಯವ ಕೃಷಿಯಲ್ಲಿ ಬದುಕು ರೂಪಿಸಿಕೊಂಡವರು. ತಮ್ಮ 9 ಎಕರೆ ಜತೆಗೆ ಸಂಬಂಧಿಕರ 6 ಎಕರೆ ಜಮೀನಿನಲ್ಲಿ ತೆಂಗು, ಅಡಿಕೆ, ಗೋಧಿ, ರಾಗಿ, ಮೆಣಸು, ಮಾವು, ಪರಂಗಿ ಮೊದಲಾದ ಬೆಳೆಗಳನ್ನು ರಾಸಾಯನಿಕ ಬಳಸದೆ ಬೆಳೆಯುತ್ತಿದ್ದಾರೆ.

ರಕ್ತದಾನ ಶಿಬಿರ: ಮಾದೇಗೌಡರ ಹುಟ್ಟುಹಬ್ಬದ ಅಂಗವಾಗಿ ಜು.10ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 3ರವರೆಗೆ ಕೆ.ಎಂ.ದೊಡ್ಡಿಯ ಭಾರತೀ ಕಾಲೇಜು ಆವರಣದಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ. ಸಾರ್ವಜನಿಕರು ರಕ್ತದಾನ ಮಾಡಬೇಕು ಎಂದು ಅವರು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News