ಕುತೂಹಲ ಘಟ್ಟ ತಲುಪಿದ ‘ಮೈತ್ರಿ ಭವಿಷ್ಯ’: ಅಲ್ಪಮತಕ್ಕೆ ಕುಸಿಯುವ ಭೀತಿಯಲ್ಲಿ ಸರಕಾರ

Update: 2019-07-08 14:05 GMT

ಬೆಂಗಳೂರು, ಜು. 8: ಅತೃಪ್ತ ಶಾಸಕರ ರಾಜೀನಾಮೆ ಮಧ್ಯೆ ಪಕ್ಷೇತರ ಶಾಸಕರಾದ ಎಚ್.ನಾಗೇಶ್ ಹಾಗೂ ಆರ್.ಶಂಕರ್ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂಪಡೆಯುತ್ತಿರುವುದಾಗಿ ರಾಜ್ಯಪಾಲರಿಗೆ ಪತ್ರ ನೀಡಿದ್ದು, ಮೈತ್ರಿ ಸರಕಾರ ಅಲ್ಪಮತಕ್ಕೆ ಕುಸಿಯುವ ಭೀತಿಯಲ್ಲಿದೆ.

ಸೋಮವಾರ ಬೆಳಗ್ಗೆ ಡಿಸಿಎಂ ಡಾ.ಜಿ.ಪರಮೇಶ್ವರ್ ನಿವಾಸದಲ್ಲಿ ಏರ್ಪಡಿಸಿದ್ದ ಉಪಾಹಾರ ಕೂಟದಲ್ಲಿ ಪಾಲ್ಗೊಂಡಿದ್ದ ಪಕ್ಷೇತರ ಶಾಸಕ ಆರ್.ಶಂಕರ್ ಕೂಡ ಸಂಜೆ ರಾಜ್ಯಪಾಲರಿಗೆ ರಾಜೀನಾಮೆ ನೀಡಿ ಮುಂಬೈಗೆ ಪ್ರಯಾಣ ಬೆಳೆಸಿದ್ದು ಮೈತ್ರಿ ಸರಕಾರದ ಬುಡ ಅಲುಗಾಡುವ ಸ್ಥಿತಿಗೆ ಬಂದು ನಿಂತಿದೆ.

ಈ ನಡುವೆ ಮೈತ್ರಿ ಸರಕಾರ ಉಳಿಸಿಕೊಳ್ಳಲು ಸಿಎಂ ಕುಮಾರಸ್ವಾಮಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಸಚಿವರು ಹಾಗೂ ಮುಖಂಡರು ಹಲವು ಸುತ್ತಿನ ಸಭೆ ನಡೆಸಿದ್ದಾರೆ. ಆದರೆ, ಕ್ಷಣ ಕ್ಷಣಕ್ಕೂ ಮೈತ್ರಿ ಸರಕಾರದ ಬಲ ಕುಸಿಯುತ್ತಿದೆ. ಮತ್ತೊಂದೆಡೆ ಬಿಜೆಪಿ ವಲಯದಲ್ಲಿ ನೂತನ ಸರಕಾರ ರಚನೆ ಚಟುವಟಿಕೆ ಗರಿಗೆದರಿದೆ.

ಸ್ಪೀಕರ್ ನಡೆಯತ್ತ ಚಿತ್ತ: ಕಾಂಗ್ರೆಸ್-ಜೆಡಿಎಸ್‌ನ 12 ಮಂದಿ ಶಾಸಕರ ರಾಜೀನಾಮೆ ಸಂಬಂಧ ವಿಧಾನಸಭೆ ಸ್ಪೀಕರ್ ಕೆ.ಆರ್.ರಮೇಶ್‌ ಕುಮಾರ್ ನಾಳೆ (ಜು.9) ಬೆಳಗ್ಗೆ ಯಾವ ತೀರ್ಮಾನ ಕೈಗೊಳ್ಳಲಿದ್ದಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.

ಈ ಮಧ್ಯೆ ನಾಳೆ(ಜು.9) ಬೆಳಗ್ಗೆ 9:30ರ ಸುಮಾರಿಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದ ಮೂರನೆ ಮಹಡಿಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದು, ಎಲ್ಲ ಶಾಸಕರ ಕಡ್ಡಾಯ ಹಾಜರಿಗೆ ಸೂಚನೆ ನೀಡಲಾಗಿದೆ.

ಇದರ ಜೊತೆಗೆ ‘ಪಕ್ಷಾಂತರ ನಿಷೇಧ ಕಾಯ್ದೆ’ ಅಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವವರ ಅನರ್ಹತೆಗೊಳಿಸುವ ಸಂಬಂಧ ಕಾನೂನು ತಜ್ಞರೊಂದಿಗೆ ಕಾಂಗ್ರೆಸ್ ಸಮಾಲೋಚನೆ ನಡೆಸಿದ್ದಾರೆ. ಹೀಗಾಗಿ ಒಂದು ಕಡೆ ಮೈತ್ರಿ ಸರಕಾರ ಮತ್ತೊಂದು ಕಡೆ ರಾಜೀನಾಮೆ ನೀಡಿರುವ ಶಾಸಕರ ಭವಿಷ್ಯವೇನೆಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.

ಹನ್ನೆರಡು ಮಂದಿ ಮೈತ್ರಿ ಶಾಸಕರ ರಾಜೀನಾಮೆ ಮಧ್ಯೆ ಅತೃಪ್ತ ಶಾಸಕರಿಗೆ ಸಚಿವ ಸ್ಥಾನದ ಭರವಸೆ ನೀಡಿದ್ದು, ‘ಬಿಜೆಪಿ ಆಮಿಷಕ್ಕೆ ಬಲಿಯಾಗಬೇಡಿ, ನಿಮ್ಮನ್ನೆಲ್ಲ ಸಚಿವರನ್ನಾಗಿ ಮಾಡಲು ಸಿದ್ಧ ಮುಂಬೈನಿಂದ ಹಿಂದಿರುಗಿ ಬನ್ನಿ’ ಎಂದು ಆಹ್ವಾನ ನೀಡಲಾಗಿದೆ. ಅಲ್ಲದೆ, ಕಾಂಗ್ರೆಸ್ ಪಕ್ಷದ 21 ಮತ್ತು ಜೆಡಿಎಸ್ 9 ಮಂದಿ ಸಚಿವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.

ಏನೇ ಆಗಲಿ ಸರಕಾರವನ್ನು ಉಳಿಸಿಕೊಳ್ಳಲೇಬೇಕು ಎಂದು ಮೈತ್ರಿ ಮುಖಂಡರು ಪಣತೊಟ್ಟಿದ್ದರೆ, ಅತ್ತ ಬಿಜೆಪಿ ಮುಖಂಡರು ಮೈತ್ರಿ ಸರಕಾರ ಉರುಳಿಸಲು ತೆರೆ ಮರೆಯಲ್ಲಿ ಕಸರತ್ತು ನಡೆಸಿದ್ದು, ರಾಜ್ಯ ರಾಜಕೀಯ ಬೆಳವಣಿಗೆಗಳು ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿವೆ.

ಕಾಂಗ್ರೆಸ್ ಪಕ್ಷದ 9 ಹಾಗೂ ಜೆಡಿಎಸ್‌ನ 3, ಬೆಂಬಲವಾಗಿದ್ದ ಇಬ್ಬರು ಪಕ್ಷೇತರ ಸದಸ್ಯರು ಸೇರಿದಂತೆ ಒಟ್ಟು 14 ಮಂದಿ ಮೈತ್ರಿ ಸರಕಾರದಿಂದ ದೂರ ಉಳಿದಿದ್ದಾರೆ. ಹೀಗಾಗಿ ಬಿಎಸ್ಪಿ ಶಾಸಕ ಎನ್.ಮಹೇಶ್ ಸೇರಿ ಮೈತ್ರಿ ಸರಕಾರಕ್ಕೆ 106, ವಿಪಕ್ಷ ಬಿಜೆಪಿ 105 ಸಂಖ್ಯಾಬಲವಿದೆ.

ಕ್ಷಣ ಕ್ಷಣದ ಬೆಳವಣಿಗೆಗಳ ನಡುವೆಯೆ ಸಚಿವ ಡಿ.ಕೆ.ಶಿವಕುಮಾರ್ ಹೊಸದಿಲ್ಲಿಗೆ ತೆರಳಿರುವುದು ಕುತೂಹಲ ಕೆರಳಿಸಿದೆ. ಮುಂಬೈನಲ್ಲಿ ಅತೃಪ್ತ ಶಾಸಕರು ತಂಗಿರುವ ಹೊಟೇಲ್ ಎದುರು ಮಹಾರಾಷ್ಟ್ರ ಕಾಂಗ್ರೆಸ್ ಕಾರ್ಯಕರ್ತರು ಪ್ರದರ್ಶನ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News