‘ತೆರಿಗೆ ಕಳ್ಳರು ಪರಾರಿಯಾಗಲು ಬಿಟ್ಟು ತೆರಿಗೆ ಪಾವತಿಸುವವರನ್ನು ಅವಮಾನಿಸುತ್ತಿದ್ದೀರಿ, ನಾಚಿಕೆಗೇಡು!’

Update: 2019-07-08 14:12 GMT

ಹೊಸದಿಲ್ಲಿ, ಜು.8: ಇತ್ತೀಚೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟಿನಲ್ಲಿ ಭಾಗಶಃ ಪರಿಷ್ಕರಿಸಲ್ಪಟ್ಟ ಐಟಿ ಸ್ಲ್ಯಾಬ್ ಗಳ ಕುರಿತಂತೆ ಶ್ರೀಮಂತರನ್ನು ವ್ಯಂಗ್ಯವಾಡಿ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಅವರು ಟ್ವೀಟ್ ಮಾಡಿದ್ದು, ಇನ್ಫೋಸಿಸ್ ಮಾಜಿ ನಿರ್ದೇಶಕ ಹಾಗೂ ಸದ್ಯ ಆರಿನ್ ಕ್ಯಾಪಿಟಲ್ ಸ್ಥಾಪಕರೂ ಆಗಿರುವ ಬಿಜೆಪಿಯ ಕಟ್ಟಾ ಬೆಂಬಲಿಗ ಮೋಹನ್‍ದಾಸ್ ಪೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.

2 ಕೋಟಿ ರೂ.ಗಳಿಂದ 5 ಕೋಟಿ ರೂ.ವರೆಗೆ ಹಾಗೂ  5 ಕೋಟಿ ರೂ.ಗಿಂತ ಹೆಚ್ಚಿನ ಆದಾಯವಿರುವವರು ಪಾವತಿಸಬೇಕಾದ ಆದಾಯ ತೆರಿಗೆ ದರವನ್ನು ಪರಿಷ್ಕರಿಸಿರುವುದಕ್ಕೆ ಪ್ರತಿಕ್ರಿಯಿಸಿದ್ದ ಬಾಬುಲ್ ಸುಪ್ರಿಯೋ, ಈ  ಅತ್ಯಂತ  ಶ್ರೀಮಂತ ಜನರನ್ನು ಸಮಾಜ ಸೇವೆ ಅಥವಾ ಸಮಾಜಕ್ಕೆ ಧನಸಹಾಯ ನೀಡಲು ಸಮಯವಿಲ್ಲದವರು ಎಂದು ಹೇಳಿದ್ದು ಈ ಬಗ್ಗೆ ಪೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಪ್ರಿಯೋ ಟ್ವೀಟ್ ಸಂಪೂರ್ಣ ಅಸಂಬದ್ಧ ಎಂದು ಹೇಳಿದ ಪೈ, “ಸಾಕಷ್ಟು ಹಣ ಗಳಿಸುವವರು ಸಮಾಜ ಸೇವಾ ಕಾರ್ಯಗಳಿಗೂ ಧನಸಹಾಯ ಮಾಡುತ್ತಾರೆ” ಎಂದರಲ್ಲದೆ, “ಪ್ರಾಮಾಣಿಕವಾಗಿ ತಮ್ಮ ತೆರಿಗೆ ಪಾವತಿಸುವವರನ್ನು ಸುಪ್ರಿಯೋ ಹೇಳಿಕೆ ಅವಮಾನಿಸಿದೆ” ಎಂದೂ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ಇದು ಸಂಪೂರ್ಣ ಅಸಂಬದ್ಧ. ಹೆಚ್ಚು ಸಂಪಾದಿಸುವವರು ದಾನಕ್ಕೂ ಹೆಚ್ಚು ಹಣ ವ್ಯಯಿಸುತ್ತಾರೆ. ತೆರಿಗೆ ಕಳ್ಳರನ್ನು ಹೋಗಲು ಬಿಟ್ಟು ಸಂಪೂರ್ಣ ತೆರಿಗೆ ಪಾವತಿಸುವ ಪ್ರಾಮಾಣಿಕ ತೆರಿಗೆ ಪಾವತಿದಾರರನ್ನು ನೀವು ಅವಮಾನಿಸುತ್ತಿದ್ದೀರಿ. ಪ್ರಾಮಾಣಿಕ ಜನರನ್ನು ಅಪಹಾಸ್ಯ ಮಾಡಲು ಇದು ದಾರಿಯೇ? ನಾಚಿಕೆಗೇಡು” ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News