ರಾಜ್ಯಪಾಲರಿಂದ ಕುದುರೆ ವ್ಯಾಪಾರಕ್ಕೆ ಕುಮ್ಮಕ್ಕು: ಡಿಸಿಎಂ ಪರಮೇಶ್ವರ್ ಗಂಭೀರ ಆರೋಪ

Update: 2019-07-08 15:07 GMT

ಬೆಂಗಳೂರು, ಜು. 8: ರಾಜ್ಯಪಾಲ ವಜೂಬಾಯಿ ವಾಲಾ ಅವರು ಶಾಸಕರ ಕುದುರೆ ವ್ಯಾಪಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಇಂದಿಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವೈಯಕ್ತಿಕ ಕಾರಣಕ್ಕೆ ರಾಜೀನಾಮೆ ನೀಡಿರುವ ಶಾಸಕರೊಂದಿಗೆ ರಾಜ್ಯಪಾಲರು ಅನಗತ್ಯ ಚರ್ಚೆ ನಡೆಸಿದ್ದಾರೆ. ಅಲ್ಲದೆ, ನಗರ ಪೊಲೀಸ್ ಆಯುಕ್ತರು ಹಾಗೂ ಶಾಸಕರನ್ನು ಕೂರಿಸಿಕೊಂಡು ಸಮಾಲೋಚನೆ ನಡೆಸಿರುವುದನ್ನು ನೋಡಿದರೆ ಸರಕಾರ ಅಸ್ಥಿರಕ್ಕೆ ರಾಜ್ಯಪಾಲರು ಪ್ರಯತ್ನ ನಡೆಸಿರುವುದು ಸ್ಪಷ್ಟ ಎಂದು ದೂರಿದರು.

ಬೆಂಗಳೂರು ನಗರದ ಶಾಸಕರೊಂದಿಗೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಭೆ ನಡೆಸಿದ್ದು, ಕಳೆದ ಸಾಲಿಗಿಂತ ಹೆಚ್ಚಿನ ಅನುದಾನ ಈ ಬಾರಿ ನೀಡಲಾಗಿದೆ. ಆದರೂ, ಕೆಲ ಶಾಸಕರು ರಾಜೀನಾಮೆ ನೀಡಿದ್ದಾರೆಂದು ಟೀಕಿಸಿದ ಅವರು, ನಾನು ಹೊರಗಿನ ವ್ಯಕ್ತಿ ಎಂಬ ಆರೋಪದಲ್ಲಿ ಹುರುಳಿಲ್ಲ ಎಂದು ಅಲ್ಲಗಳೆದರು.

1971ರಲ್ಲಿ ನಾನು ಬೆಂಗಳೂರಿಗೆ ಬಂದಿದ್ದು ನಗರದ ಪ್ರತಿ ಗಲ್ಲಿಯೂ ನನಗೆ ಗೊತ್ತು. ಅಭಿವೃದ್ಧಿ ವಿಚಾರದಲ್ಲಿ ನಾನು ಯಾವುದೇ ರೀತಿಯ ತಾರತಮ್ಯ ಮಾಡಿಲ್ಲ. ನನ್ನ ವಿರುದ್ಧ ಕೆಲವರು ಆರೋಪ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಪರಮೇಶ್ವರ್ ಇದೇ ವೇಳೆ ತಿಳಿಸಿದರು.

‘ನನ್ನ ಬೆಂಬಲವೇನಿದ್ದರೂ ಮೈತ್ರಿ ಸರಕಾರಕ್ಕೆ. ನಾನು ಬಿಜೆಪಿಗೆ ಬೆಂಬಲ ನೀಡುವ ಪ್ರಶ್ನೆಯೇ ಉದ್ಬವಿಸುವುದಿಲ್ಲ. ಜು.12ರಿಂದ ಆರಂಭಗೊಳ್ಳಲಿರುವ ಅಧಿವೇಶನದಲ್ಲಿ ನಾನು ಕೇಳಿದ ಪ್ರಶ್ನೆಗಳ ಬಗ್ಗೆ ಚರ್ಚಿಸಲು ನಾನು ವಿಧಾನಸೌಧದಲ್ಲಿನ ಸ್ಪೀಕರ್ ಕಚೇರಿಗೆ ಆಗಮಿಸಿದ್ದೇನೆ’

-ಎನ್.ಮಹೇಶ್, ಬಿಎಸ್ಪಿ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News