ಲೋಕಸಭೆಯಲ್ಲಿ ಯುಎಪಿಎ ತಿದ್ದುಪಡಿ ಮಸೂದೆ ಮಂಡನೆ

Update: 2019-07-08 18:10 GMT

ಹೊಸದಿಲ್ಲಿ, ಜು.8: ಶಂಕಿತ ವ್ಯಕ್ತಿಗೆ ಉಗ್ರರ ಜೊತೆ ಸಂಪರ್ಕವಿದ್ದರೆ ಅಂತಹ ವ್ಯಕ್ತಿಯನ್ನು 'ಉಗ್ರ' ಎಂದು ಘೋಷಿಸಲು ಅನುಕೂಲವಾಗುವಂತೆ ಮಸೂದೆಯೊಂದನ್ನು ಸೋಮವಾರ ಲೋಕಸಭೆಯಲ್ಲಿ ಮಂಡಿಸಲಾಗಿದೆ. ಈ ತಿದ್ದುಪಡಿ ಮಸೂದೆ ಭಯಾನಕವಾಗಿ ಪರಿಣಮಿಸಲಿದೆ ಎಂದು ವಿಪಕ್ಷಗಳು ಆರೋಪಿಸಿವೆ.

ಕಾನೂನುಬಾಹಿರ ಚಟುವಟಿಕೆಗಳ (ತಡೆ) ತಿದ್ದುಪಡಿ ಮಸೂದೆ, 2019ಕ್ಕೆ ವಿರೋಧ ವ್ಯಕ್ತಪಡಿಸಿದ ಆರ್‌ಎಸ್‌ಪಿಯ ಎನ್.ಕೆ ಪ್ರೇಮಚಂದ್ರನ್, ಉಗ್ರವಾದವನ್ನು ಹತ್ತಿಕ್ಕುವ ಹೆಸರಲ್ಲಿ ವ್ಯಕ್ತಿಯ ಮೂಲಭೂತ ಹಕ್ಕುಗಳನ್ನು ಕಡೆಗಣಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಇಂತಹ ವ್ಯಕ್ತಿಗಳನ್ನು ನಿಭಾಯಿಸಲು ಸದ್ಯ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸಮಸ್ಯೆಗಳನ್ನು ಅನುಭವಿಸುತ್ತಿದೆ ಎನ್ನುವ ಸರಕಾರದ ಹೇಳಿಕೆಯಲ್ಲಿ ಯಾವುದೇ ಸ್ಪಷ್ಟತೆಯಿಲ್ಲ. ಉಗ್ರನಿಗ್ರಹ ಸಂಸ್ಥೆಯು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸದನವನ್ನು ಕತ್ತಲಲ್ಲಿಡಬಾರದು ಎಂದು ಅವರು ತಿಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿದ ಕಾಂಗ್ರೆಸ್ ನಾಯಕ ಶಶಿ ತರೂರ್, ಈ ಮಸೂದೆಯನ್ನು ಅವಸರದಲ್ಲಿ ಪರಿಚಯಿಸಲಾಗಿದೆ. ವ್ಯಕ್ತಿಯ ತನಿಖೆ ನಡೆಸಲು ಈಗಾಗಲೇ ಕಾನೂನಿನಲ್ಲಿ ಅನೇಕ ನಿಬಂಧನೆಗಳಿವೆ ಎಂದು ತಿಳಿಸಿದ್ದಾರೆ.

ಇಂತಹ ಮಸೂದೆಯನ್ನು ಮಂಡಿಸುವುದಕ್ಕೂ ಮೊದಲು ಸರಕಾರ ಸದನದ ಸದಸ್ಯರ ಜೊತೆ ಸಮಾಲೋಚನೆ ನಡೆಸುವಲ್ಲಿ ವಿಫಲವಾಗಿದೆ. ಅಟಲ್ ಬಿಹಾರಿ ವಾಜಪೇಯಿಯವರೂ ಈ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದರು ಮತ್ತು ಸರಕಾರ ಹಿರಿಯ ನಾಯಕನ ದೃಷ್ಟಿಕೋನವನ್ನು ಗಮನದಲ್ಲಿಡಬೇಕು ಎಂದು ಅವರು ತಿಳಿಸಿದ್ದಾರೆ.

ಗೃಹ ಸಚಿವ ಅಮಿತ್ ಶಾ ಪರವಾಗಿ ಸದನದಲ್ಲಿ ಮಸೂದೆಯನ್ನು ಮಂಡಿಸಿದ ಸಹಾಯಕ ಗೃಹ ಸಚಿವ ಜಿ. ಕಿಶನ್ ರೆಡ್ಡಿ, ಅಮೆರಿಕ ಜಮಾತುದ್ ದಾವ ಮುಖ್ಯಸ್ಥ ಹಫೀಝ್ ಸಯೀದ್‌ನನ್ನು ಉಗ್ರ ಎಂದು ಘೋಷಿಸಬಹುದಾದರೆ ಭಾರತ ಯಾಕೆ ಮಾಡಬಾರದು ಎಂದು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News