ಉ.ಪ್ರದೇಶದಲ್ಲಿ ಅಪಘಾತ: ಹಿರಿಯ ರಂಗಕರ್ಮಿ ಕೆ.ಮುದ್ದುಕೃಷ್ಣ, ಪತ್ನಿ ಬಿ.ಇಂದ್ರಾಣಿ ಮೃತ್ಯು

Update: 2019-07-08 17:07 GMT

ಮೈಸೂರು,ಜು.8: ಉತ್ತರ ಪ್ರದೇಶದ ಲಕ್ನೋ ಬಳಿ ಸಂಭವಿಸಿದ ಅಪಘಾತದಲ್ಲಿ ಮೈಸೂರಿನ ಹಿರಿಯ ರಂಗಕರ್ಮಿ ಕೆ.ಮುದ್ದುಕೃಷ್ಣ (63) ಹಾಗೂ ಅವರ ಪತ್ನಿ ಸಿಎಫ್‍ಟಿಆರ್‍ಐ ಉದ್ಯೋಗಿ ಬಿ.ಇಂದ್ರಾಣಿ(59) ಮೃತಪಟ್ಟಿದ್ದಾರೆ.

ವಾರಣಾಸಿಗೆ ಪ್ರವಾಸಕ್ಕೆಂದು ತೆರಳಿದ್ದ ದಂಪತಿಗಳು ರವಿವಾರ ಲಕ್ನೋ ಬಿಟ್ಟು ವಾರಣಾಸಿಕಡೆಗೆ ಕ್ಯಾಬ್‍ನಲ್ಲಿ ಪ್ರಯಾಣ ಬೆಳೆಸುತ್ತಿದ್ದಂತೆ ಎದುರುಗಡೆಯಿಂದ ಬಂದ ಬಸ್ಸೊಂದು ಢಿಕ್ಕಿ ಹೊಡೆದಿದೆ. ಪರಿಣಾಮ ಇಂದ್ರಾಣಿ ಮತ್ತು ಮುದ್ದುಕೃಷ್ಣ ಗಾಯಗೊಂಡಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಇಂದ್ರಾಣಿ ಸೋಮವಾರ ಬೆಳಗಿನ ಜಾವ ಕೊನೆಯುಸಿರೆಳೆದರು. 

ಗಾಯಗೊಂಡಿದ್ದ ಮುದ್ದುಕೃಷ್ಣ ಚೇತರಿಸಿಕೊಳ್ಳುತ್ತಿದ್ದರಾದರೂ, ಪತ್ನಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸೋಮವಾರ ಬೆಳಗ್ಗೆ 9 ಗಂಟೆ ಸಮಯದಲ್ಲಿ ಹೃದಯಾಘತದಿಂದ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇಂದು ಇಂದ್ರಾಣಿ ಅವರ ಜನ್ಮದಿನವಾಗಿದ್ದು, ಇಂದೇ ದುರಂತ ಸಂಭವಿಸಿದೆ.

ವಿಷಯ ತಿಳಿಯುತ್ತಿದ್ದಂತೆ ಮೈಸೂರಿನಿಂದ ಮುದ್ದುಕೃಷ್ಣ ಅವರ ಸ್ನೇಹಿತ ಜಯರಾಮ್ ಪಾಟೀಲ್ ಅವರು ಉತ್ತರ ಪ್ರದೇಶಕ್ಕೆ ತೆರಳಿದ್ದು, ಮಂಗಳವಾರ ಸಂಜೆಯೊಳಗೆ ಮೃತರ ಪಾರ್ಥೀವ ಶರೀರವನ್ನು ಮೈಸೂರಿಗೆ ತರಬಹುದು ಎಂದು ಹೇಳಲಾಗುತ್ತಿದೆ.

ಮೃತ ದಂಪತಿಗಳ ಇಬ್ಬರು ಗಂಡು ಮಕ್ಕಳು ಸ್ವೀಡನ್ ನಲ್ಲಿ ಉದ್ಯೋಗದಲ್ಲಿದ್ದು, ಅವರು ಮಂಗಳವಾರ ಅಥವಾ ಬುಧವಾರ ಮೈಸೂರಿಗೆ ಆಗಮಿಸಲಿದ್ದಾರೆ. ಆ ನಂತರವಷ್ಟೇ ಮೃತರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ತಿಳಿದು ಬಂದಿದೆ.

ಸಂತಾಪ: ರಂಗಕರ್ಮಿ ಕೆ.ಮುದ್ದುಕೃಷ್ಣ ದಂಪತಿಗಳ ಸಾವಿನ ವಿಷಯ ತಿಳಿದು ಮೈಸೂರಿನ ರಂಗಕರ್ಮಿಗಳು ಮತ್ತು ಸ್ನೇಹಿತರು ದಿಗ್ಬ್ರಾಂತರಾಗಿದ್ದಾರೆ. ಬದುಕಿದ್ದಾಗಲೂ ಜೊತೆಯಲ್ಲಿದ್ದ ದಂಪತಿಗಳು ಸಾವಿನಲ್ಲೂ ಒಂದಾಗಿದ್ದಾರೆ ಎಂದು ಮರುಗಿದ್ದಾರೆ.

ಈ ಕುರಿತು ರಂಗಕರ್ಮಿ ಜನಾರ್ಧನ್ ಮಾತನಾಡಿ, ಸುಮಾರು ನಾಲ್ಕು ದಶಕಗಳಿಂದ ಸಾಂಸ್ಕ್ರತಿಕ ಹಿನ್ನಲೆಯಿಂದ ಬಂದವರು. ನಾವೆಲ್ಲ ಕರ್ನಾಟಕದ ಹೊಸ ರಂಗ ಜಾಥಾಗಳು ಮೌಲ್ಯಗಳ ಜಾಥಗಳನ್ನು ನಡೆಸುವಾಗ ಹಳಮೆಯವರ ಜೊತೆ ಮೈಸೂರಿನ ಜವಾಬ್ದಾರಿ ವಹಿಸುತ್ತಿದ್ದರು. ಸಮುದಾಯ ಸಾಂಸ್ಕೃತಿಕ ಸಂಘಟನೆಯ ನೇತೃತ್ವ ವಹಿಸಿ ಮೈಸೂರಿನಲ್ಲಿ ಕಟ್ಟಿ ಬೆಳೆಸಿದರು.

ಪ್ರಗತಿಪರ ಚಳುವಳಿ, ಕನ್ನಡ ಚಳುವಳಿ, ದಲಿತ ಮತ್ತು ಹಿಂದುಳಿ ಚಳುವಳಿಗಳು ಸೇರಿದಂತೆ ಹಲವಾರ ಚಳುವಳಿಗಳಲ್ಲಿ ಭಾಗವಹಿಸಿದ್ದ ಅವರು, ತನ್ನದೇ ಆದ ಆಸಕ್ತಿ ಹೊಂದಿ ನಾಣ್ಯಗಳನ್ನು ಸಂಗ್ರಹಿಸುವುದರಲ್ಲಿ ಬಹಳಷ್ಟು ಸಾಧನೆ ಮಾಡಿದ್ದರು ಎಂದು ಸ್ಮರಿಸಿದರು.

ದಸರಾ ಸಂದರ್ಭದಲ್ಲಿ ಸಣ್ಣ ಫಿಲಂ ಸೊಸೈಟಿ ಇಟ್ಟುಕೊಂಡು ಚಲನಚಿತ್ರದ ಫೆಸ್ಟಿವಲ್ ಅನ್ನು ಕಳೆದ ಇಪ್ಪತ್ತು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದರು ಎಂದು ಭಾವುಕರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News