ಪ್ರಾಣಿಗಳ ಬೇಟೆಗೆ ಸ್ಫೋಟಕ ಬಳಕೆ: ಇಬ್ಬರ ಬಂಧನ, 4 ಜೀವಂತ ಬಾಂಬ್ ಗಳ ಜಪ್ತಿ

Update: 2019-07-08 17:23 GMT

ಕಡೂರು, ಜು.8: ತಾಲೂಕಿನ ಬಾಸೂರು ಕೃಷ್ಣಮೃಗ ಸಂರಕ್ಷಿತ ಅರಣ್ಯದಲ್ಲಿ ಪ್ರಾಣಿಗಳನ್ನು ಬೇಟೆಯಾಡಲು ಸ್ಫೋಟಕಗಳನ್ನು ಇಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಅರಣ್ಯ ಅಧಿಕಾರಿಗಳು ಅವರಿಂದ 4 ಜೀವಂತ ಬಾಂಬುಗಳನ್ನು ವಶ ಪಡಿಸಿಕೊಂಡಿದ್ದಾರೆ.

ರವಿವಾರ ಸಂಜೆ ಈ ಬಗ್ಗೆ ಖಚಿತ ಮಾಹಿತಿ ಪಡೆದ ವಲಯ ಅರಣ್ಯಾಧಿಕಾರಿ ಪಾಲಾಕ್ಷ ಮತ್ತು ಸಿಬ್ಬಂದಿ ಬಾಸೂರು ಕೃಷ್ಣಮೃಗ ರಕ್ಷಿತಾರಣ್ಯದಲ್ಲಿ ಕಾರ್ಯಾಚರಣೆ ನಡೆಸಿ ರಂಗನಾಥ ಮತ್ತು ಮಲ್ಲೇಶಪ್ಪ ಎಂಬುವವರನ್ನು ಬಂಧಿಸಿದ್ದಾರೆ. ಇಬ್ಬರೂ ಹುರುಕನಹಳ್ಳಿ ಗ್ರಾಮದವರಾಗಿದ್ದು, ಕಾಡುಪ್ರಾಣಿಗಳನ್ನು ಬೇಟೆಯಾಡಲು ಬಳಸುವ ಸ್ಟೀಲ್ ಅನಿಮಲ್ ಕ್ಯಾಪ್ಚರ್ ಸಲಕರಣೆ ಮತ್ತು ಜೀವಂತ ಬಾಂಬುಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಒಂದು ಬೈಕನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳನ್ನು ಕಡೂರು ನ್ಯಾಯಾಲಯಕ್ಕೆ ಸೋಮವಾರ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಇದರ ಹಿಂದೆ ದೊಡ್ಡ ಜಾಲವೊಂದು ಕೆಲಸ ಮಾಡುತ್ತಿದ್ದು, ಅದನ್ನು ಕಂಡು ಹಿಡಿಯುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿರುವುದಾಗಿ ಪಾಲಾಕ್ಷ ತಿಳಿಸಿದರು. 

ಜೀವಂತ ಬಾಂಬುಗಳನ್ನು ಅರಣ್ಯ ಇಲಾಖೆಯ ಗೋಡನ್ ನಲ್ಲಿ ಸುರಕ್ಷಿತವಾಗಿರಿಸಲಾಗಿದ್ದು ನ್ಯಾಯಾಲಯದ ಅನುಮತಿ ಪಡೆದು ಅವುಗಳನ್ನುನಿಷ್ಕ್ರಿಯಗೊಳಿಸಲು ಕೋರಿ ಬೆಂಗಳೂರಿನ ಪೊಲೀಸ್ ಇಲಾಖೆಯ ಬಾಂಬ್ ತಜ್ಞರಿಗೆ ಮಾಹಿತಿ ನೀಡಲಾಗಿದೆ ಎಂದರು.

ಕಾರ್ಯಾಚರಣೆಯಲ್ಲಿ ಅರಣ್ಯಇಲಾಖೆ ಸಿಬ್ಬಂದಿಗಳಾದ ಉಪವಲಯ ಅರಣ್ಯಾಧಿಕಾರಿ ಹರೀಶ್, ಗಾರ್ಡ್ ಗಳಾದ ಯುನುಸ್ ಬೇಗ್, ಕಿರಣ್ ಕುಮಾರ್, ಸಿದ್ದೇಶ್ ಮತ್ತು ವಾಹನ ಚಾಲಕ ಮಂಜುನಾಥ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News