ಇರಾನ್ ಬಿಕ್ಕಟ್ಟು ಉಲ್ಬಣಕ್ಕೆ ಅಮೆರಿಕದ ‘ಏಕಪಕ್ಷೀಯ ಪೀಡನೆ’ ಕಾರಣ: ಚೀನಾ

Update: 2019-07-08 18:26 GMT

ಬೀಜಿಂಗ್, ಜೂ. 8: ಇರಾನ್ ಪರಮಾಣು ಬಿಕ್ಕಟ್ಟು ಉಲ್ಬಣಗೊಳ್ಳುವುದಕ್ಕೆ ಅಮೆರಿಕದ ‘ಏಕಪಕ್ಷೀಯ ಪೀಡನೆ’ಯೇ ಕಾರಣ ಎಂದು ಚೀನಾ ಸೋಮವಾರ ಹೇಳಿದೆ.

‘‘ಏಕಪಕ್ಷೀಯ ಪೀಡನೆಯು ಈಗಾಗಲೇ ಉಲ್ಬಣಗೊಳ್ಳುತ್ತಿರುವ ಕ್ಯಾನ್ಸರ್ ಗಡ್ಡೆಯಂತಾಗಿದೆ ಎನ್ನುವುದನ್ನು ವಾಸ್ತವಾಂಶಗಳು ತೋರಿಸಿವೆ’’ ಎಂದು ಚೀನಾದ ವಿದೇಶ ಸಚಿವಾಲಯದ ವಕ್ತಾರ ಗೆಂಗ್ ಶುವಂಗ್ ಬೀಜಿಂಗ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘‘ಇರಾನ್ ಮೇಲೆ ಅಮೆರಿಕ ಹೇರುತ್ತಿರುವ ಗರಿಷ್ಠ ಒತ್ತಡವೇ ಇರಾನ್ ಪರಮಾಣು ಬಿಕ್ಕಟ್ಟಿಗೆ ಮೂಲ ಕಾರಣ’’ ಎಂದು ಅವರು ಅಭಿಪ್ರಾಯ ಪಟ್ಟರು.

ಇರಾನ್ ಪರಮಾಣು ಒಪ್ಪಂದದಿಂದ ಅಮೆರಿಕ ಕಳೆದ ವರ್ಷದ ಮೇ ತಿಂಗಳಲ್ಲಿ ಹೊರಬಂದಿರುವುದನ್ನು ಸ್ಮರಿಸಬಹುದಾಗಿದೆ. 2015ರಲ್ಲಿ ಈ ಒಪ್ಪಂದಕ್ಕೆ ಬ್ರಿಟನ್, ಚೀನಾ, ಫ್ರಾನ್ಸ್, ಜರ್ಮನಿ, ಅಮೆರಿಕ ಮತ್ತು ರಶ್ಯಗಳೊಂದಿಗೆ ಇರಾನ್ ಸಹಿ ಹಾಕಿತ್ತು.

 ಒಪ್ಪಂದದಲ್ಲಿ ವಿಧಿಸಲಾಗಿರುವ ಯುರೇನಿಯಂ ಸಂವರ್ಧನೆ ಮೇಲಿನ ಮಿತಿಯನ್ನು ಮೀರುವುದಾಗಿ ಈಗಾಗಲೇ ಇರಾನ್ ಘೋಷಿಸಿದೆ. ಒಪ್ಪಂದದ ಇತರ ಭಾಗೀದಾರ ದೇಶಗಳು ಪರಿಹಾರವೊಂದನ್ನು ಕಂಡುಕೊಳ್ಳಲು ವಿಫಲವಾದರೆ, ಒಪ್ಪಂದದ ಅಡಿಯಲ್ಲಿ ತಾನು ಹೊಂದಿರುವ ಇನ್ನಷ್ಟು ಬದ್ಧತೆಗಳಿಂದ ಹೊರಬರುವುದಾಗಿ ಇರಾನ್ ರವಿವಾರ ಬೆದರಿಕೆ ಹಾಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News