ಕುತೂಹಲ ಕೆರಳಿಸಿದ ರಾಜ್‌ ಠಾಕ್ರೆ- ಸೋನಿಯಾ ಗಾಂಧಿ ಭೇಟಿ

Update: 2019-07-09 03:43 GMT

ಹೊಸದಿಲ್ಲಿ, ಜು.9: ಎಂಎನ್‌ಎಸ್ ಮುಖಂಡ ರಾಜ್‌ ಠಾಕ್ರೆ ಸೋಮವಾರ ಕಾಂಗ್ರೆಸ್ ನಾಯಕಿ ಹಾಗೂ ಯುಪಿಎ ಸಂಚಾಲಕಿ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಈ ವರ್ಷದ ಕೊನೆಯಲ್ಲಿ ನಡೆಯುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಉಭಯ ಪಕ್ಷಗಳು ಮೈತ್ರಿ ಮಾಡಿಕೊಳ್ಳುವ ಬಗೆಗಿನ ಹಲವು ಊಹಾಪೋಹಗಳಿಗೆ ಈ ಭೇಟಿ ಕಾರಣವಾಗಿದೆ.

ಏತನ್ಮಧ್ಯೆ ಮಹಾರಾಷ್ಟ್ರ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಶೋಕ್ ಚವ್ಹಾಣ್ ನಾಗ್ಪುರದಲ್ಲಿ ಹೇಳಿಕೆ ನೀಡಿ, "ಬಿಜೆಪಿ- ಶಿವಸೇನೆ ವಿರುದ್ಧ ಹೋರಾಡಲು ಎಂಎನ್‌ಎಸ್ ಜತೆಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಕಾಂಗ್ರೆಸ್‌ ಪಕ್ಷ ಮುಕ್ತ ಮನಸ್ಸು ಹೊಂದಿದೆ" ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಸೋನಿಯಾ ಜತೆಗಿನ ಮಾತುಕತೆ ವಿವರಗಳನ್ನು ಠಾಕ್ರೆ ಬಹಿರಂಗಪಡಿಸಿಲ್ಲ.

ಚವ್ಹಾಣ್ ಕಳೆದ ತಿಂಗಳೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ಉತ್ತರಾಧಿಕಾರಿ ನೇಮಕಗೊಳ್ಳುವವರೆಗೆ ಅದೇ ಹುದ್ದೆಯಲ್ಲಿ ಮುಂದುವರಿದಿದ್ದಾರೆ. ಲೋಕಸಭಾ ಚುನಾವಣೆಗೆ ಮುನ್ನ ಎಂಎನ್‌ಎಸ್ ಜತೆಗೆ ರಾಜಕೀಯ ಸಂಬಂಧ ಬೆಳೆಸಿಕೊಳ್ಳಲು ಕಾಂಗ್ರೆಸ್ ಪಕ್ಷದಲ್ಲೇ ವಿರೋಧ ಇತ್ತು ಎನ್ನುವುದನ್ನು ಚವ್ಹಾಣ್ ಹೇಳಿದ್ದಾರೆ.

"ಆದರೆ ಈಗ ಮನಸ್ಸುಗಳು ಬದಲಾಗಿವೆ. ಅಗತ್ಯಬಿದ್ದರೆ ಹಾಗೂ ಇತರ ಅಂಗಪಕ್ಷಗಳು ಆಕ್ಷೇಪಿಸದಿದ್ದರೆ ಕಾಂಗ್ರೆಸ್ ಪಕ್ಷ ಈ ಯೋಚನೆ ಬಗ್ಗೆ ಮುಕ್ತವಾಗಿದೆ" ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News