ಬಾಲಕೋಟ್ ವಾಯುದಾಳಿಯ ಬಳಿಕ ಶೇ.43ರಷ್ಟು ನುಸುಳುವಿಕೆ ಕಡಿಮೆ: ಕೇಂದ್ರ ಸರಕಾರ

Update: 2019-07-09 18:48 GMT

ಹೊಸದಿಲ್ಲಿ, ಜು. 9: ಕಳೆದ ವರ್ಷದ ಮೊದಲ ಆರು ತಿಂಗಳ ಅವಧಿಗೆ ಹೋಲಿಸಿದರೆ ಈ ವರ್ಷ ಇದೇ ಅವಧಿಯಲ್ಲಿ ಜಮ್ಮು-ಕಾಶ್ಮೀರದಲ್ಲಿಯ ಭದ್ರತಾ ಸ್ಥಿತಿಯಲ್ಲಿಸುಧಾರಣೆಯಾಗಿದೆ ಮತ್ತು ಬಾಲಕೋಟ್ ವಾಯುದಾಳಿಯ ಬಳಿಕ ಗಡಿಯಾಚೆಯಿಂದ ನುಸುಳುವಿಕೆ ಶೇ.43ರಷ್ಟು ಕಡಿಮೆಯಾಗಿದೆ ಎಂದು ಸಹಾಯಕ ಗೃಹ ಸಚಿವನಿತ್ಯಾನಂದ ರಾಯ್ ಅವರು ಮಂಗಳವಾರ ಲೋಕಸಭೆಯಲ್ಲಿ ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರದಲ್ಲಿ ತಿಳಿಸಿದರು.

ಕೇಂದ್ರ ಸರಕಾರವು ಗಡಿಯಾಚೆಯಿಂದ ನುಸುಳುವಿಕೆ ಕುರಿತಂತೆ ಶೂನ್ಯ ಸಹಿಷ್ಣುತೆ ನೀತಿಯನ್ನು ಅಳವಡಿಸಿಕೊಂಡಿದೆ ಎಂದು ತಿಳಿಸಿದ ಅವರು, ನುಸುಳುವಿಕೆಯನ್ನು ತಡೆಯಲು ಕೇಂದ್ರವು ರಾಜ್ಯ ಸರಕಾರದ ಸಮನ್ವಯದೊಂದಿಗೆ ಬಹು ಆಯಾಮಗಳ ಕಾರ್ಯತಂತ್ರವನ್ನು ರೂಪಿಸಿದೆ. ಅಂತರಾಷ್ಟ್ರೀಯ ಗಡಿ ಮತ್ತು ನಿಯಂತ್ರಣರೇಖೆಯಲ್ಲಿ ಬಹು ಸ್ತರೀಯ ನಿಯೋಜನೆ,ಗಡಿ ಬೇಲಿ ನಿರ್ಮಾಣ,ಸುಧಾರಿತ ಬೇಹುಗಾರಿಕೆ ಮತ್ತು ಕಾರ್ಯಾಚರಣೆ ಸಮನ್ವಯ, ಭದ್ರತಾ ಪಡೆಗಳಿಗೆ ಆಧುನಿಕ ತಂತ್ರಜ್ಞಾನಗಳ ಶಸ್ತ್ರಾಸ್ತ್ರಗಳ ಪೂರೈಕೆ ಮತ್ತು ನುಸುಳುಕೋರರ ವಿರುದ್ಧ ಪೂರ್ವ ನಿಯಾಮಕ ಕ್ರಮ ಇವು ಈ ಕಾರ್ಯತಂತ್ರದಲ್ಲಿ ಒಳಗೊಂಡಿವೆ ಎಂದರು.

 ಪ್ರತ್ಯೇಕ ಪ್ರಶ್ನೆಗೆ ಉತ್ತರಿಸಿದ ರಾಯ್, ಭಾರತ ಪಾಕ್ ಗಡಿಯುದ್ದಕ್ಕೆ ನಿಯಂತ್ರಣ ರೇಖೆಯಲ್ಲಿ ಅಳವಡಿಸಲಾಗಿರುವ ವಿದ್ಯುತ್ ಬೇಲಿಯು ನುಸುಳುವಿಕೆಯ ವಿರುದ್ಧ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದೆ. ಇದಕ್ಕೆ ನಿರಂತರ ವಿದ್ಯುತ್ ಪೂರೈಕೆಗಾಗಿ ವಿದ್ಯುತ್‌ನ್ನು ಲಭ್ಯವಿರುವೆಡೆಗಳಲ್ಲಿ ಪವರ್ ಗ್ರಿಡ್‌ಗಳಿಂದ ಮತ್ತು ಇತರ ಸ್ಥಳಗಳಲ್ಲಿ ಜನರೇಟರ್‌ಗಳಿಂದ ಪಡೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News