ಸರಕಾರವನ್ನು ನಿಯಂತ್ರಿಸುತ್ತಿರುವ ಅನಾಮಿಕ ‘ದೇಣಿಗೆ’ಗಳು

Update: 2019-07-11 07:18 GMT

ಕಾರ್ಪೊರೇಟ್ ಸಂಸ್ಥೆಗಳು ಆಗಾಗ ದೇಣಿಗೆ ನೀಡುವುದರ ಮೂಲಕ ಸುದ್ದಿಯಲ್ಲಿರುತ್ತವೆ. ಒಂದೆರಡು ಸಂಸ್ಥೆಗಳನ್ನು ಹೊರತು ಪಡಿಸಿದರೆ ಬಹುತೇಕ ಕಾರ್ಪೊರೇಟ್ ಸಂಸ್ಥೆಗಳು ‘ಸೇವೆ’ಯ ಹೆಸರಲ್ಲಿ ನೀಡುವ ದೇಣಿಗೆಗಳ ಹಿಂದೆ ಒಂದಲ್ಲ ಒಂದು ವಾಣಿಜ್ಯ ಉದ್ದೇಶಗಳಿರುತ್ತವೆ. ತೆರಿಗೆಯಿಂದ ನುಣುಚಿಕೊಳ್ಳುವುದಕ್ಕೆ ಈ ದೇಣಿಗೆಗಳನ್ನು ಬಳಸಿಕೊಳ್ಳುವ ಹಲವು ಸಂಸ್ಥೆಗಳಿವೆ. ಸಮಾಜಕ್ಕೆ ಒಳಿತನ್ನು ಮಾಡುವಂತೆ ನಟಿಸುತ್ತಲೇ, ಸರಕಾರದಿಂದ ಅದರ ದುಪ್ಪಟ್ಟು ಸವಲತ್ತುಗಳನ್ನು ಬಾಚಿಕೊಳ್ಳುತ್ತವೆ. ಇಂತಹ ಕಾರ್ಪೊರೇಟ್ ಸಂಸ್ಥೆಗಳು ರಾಜಕೀಯ ಪಕ್ಷಗಳಿಗೆ ದೇಣಿಗೆಗಳನ್ನು ನೀಡುತ್ತವೆ ಎಂದಾದರೆ, ಅದರ ಉದ್ದೇಶವನ್ನು ಅರ್ಥ ಮಾಡಿಕೊಳ್ಳುವುದೇನು ಕಷ್ಟವಿಲ್ಲ. ಪ್ರಮುಖ ಪಕ್ಷವೊಂದಕ್ಕೆ ಕಾರ್ಪೊರೇಟ್ ಸಂಸ್ಥೆಗಳು ದೇಣಿಗೆ ನೀಡುವುದೆಂದರೆ ಕರೆಯುವ ಹಸುವಿಗೆ ಹುಲ್ಲು ಹಾಕಿದಂತೆ. ಅಧಿಕಾರ ಬಂದಾಗ ಗರಿಷ್ಠ ಮಟ್ಟದಲ್ಲಿ ಈ ಕಾರ್ಪೊರೇಟ್ ಸಂಸ್ಥೆಗಳೇ ಅದರ ಹಾಲು ಕರೆಯುತ್ತವೆ.

ಮತದಾರನೆಂಬ ಕರು ಅದನ್ನು ಹತಾಶೆಯಿಂದ ನೋಡಬೇಕಾಗುತ್ತತೆ. ಯಾವ ಪಕ್ಷ ಕಾರ್ಪೊರೇಟ್ ಸಂಸ್ಥೆಗಳ ಈ ದೇಣಿಗೆಯೆಂಬ ಭಿಕ್ಷೆಗೆ ತನ್ನನ್ನು ತೆತ್ತುಕೊಂಡಿದೆಯೋ ಆ ಪಕ್ಷ ಆ ಸಂಸ್ಥೆಗೆ ಋಣಿಯಾಗಿರಬೇಕಾಗುತ್ತದೆ. ವಿಪರ್ಯಾಸವೆಂದರೆ ಸದ್ಯ ಈ ದೇಶವನ್ನು ಆಳುತ್ತಿರುವ ಬಿಜೆಪಿ ಇಂತಹ ದೇಣಿಗೆಗಳನ್ನು ಬಾಚಿಕೊಂಡ ಅತಿ ದೊಡ್ಡ ಪಕ್ಷವಾಗಿ ಗುರುತಿಸಿಕೊಂಡಿದೆ. 2016-17 ಮತ್ತು 2017-18ರ ಎರಡು ವಿತ್ತೀಯ ವರ್ಷಗಳಲ್ಲಿ ದೇಶದ ಆರು ರಾಷ್ಟ್ರೀಯ ಪಕ್ಷಗಳು ಪಡೆದ ಒಟ್ಟು ದೇಣಿಗೆ 985 ಕೋಟಿ ರೂ. ಆಗಿದ್ದರೆ, ಇದರಲ್ಲಿ ಬಿಜೆಪಿಯ ಪಾಲು 915 ಕೋಟಿ ರೂ ಅಂದರೆ ಶೇ.92.5 ಆಗಿದೆ ಎನ್ನುವ ಅಂಶ ಇದೀಗ ಬೆಳಕಿಗೆ ಬಂದಿದೆ. 2014ರ ಜನವರಿಯಲ್ಲಿ ಎಡಿಆರ್ ಬಿಡುಗಡೆ ಮಾಡಿದ ವರದಿಯಲ್ಲಿ, 2004-05 ಮತ್ತು 2011-12ರ ಮಧ್ಯೆ ರಾಷ್ಟ್ರೀಯ ಪಕ್ಷಗಳು ಒಟ್ಟು 378.89 ಕೋಟಿ ರೂ. ದೇಣಿಗೆ ಪಡೆದಿದ್ದವು. 2017ರಲ್ಲಿ ಬಿಡುಗಡೆ ಮಾಡಿದ ಇನ್ನೊಂದು ವರದಿಯಲ್ಲಿ, 2012-13 ಮತ್ತು 2015-16ರ ಮಧ್ಯೆ ರಾಷ್ಟ್ರೀಯ ಪಕ್ಷಗಳು 956.77 ಕೋಟಿ ರೂ. ದೇಣಿಗೆ ಪಡೆದಿದ್ದವು ಎಂದು ಎಡಿಆರ್ ತಿಳಿಸಿತ್ತು. ಇಷ್ಟೇ ಅಲ್ಲ, ಈ ದೇಣಿಗೆಗಳು ಪಕ್ಷಗಳಿಗೆ ಹರಿದು ಬರುವ ರೀತಿಯೂ ಅನುಮಾನಾಸ್ಪದವಾಗಿದೆ. ಪ್ರಜಾಸತಾತ್ಮಕ ಸುಧಾರಣೆಗಳ ಸಂಘಟನೆ (ಎಡಿಆರ್) ನಡೆಸಿರುವ ವಿಶ್ಲೇಷಣೆಯಲ್ಲಿ, ಇಂತಹ ದೇಣಿಗೆಯನ್ನು ಪಾನ್ ಕಾರ್ಡ್ ವಿವರ ಮತ್ತು ವಿಳಾಸವನ್ನು ಪಡೆಯದೆಯೇ ಸ್ವೀಕರಿಸಲಾಗಿದೆ. ಆಸಕ್ತಿದಾಯಕ ಅಂಶವೆಂದರೆ, ಹೀಗೆ ಪಡೆಯಲಾದ ದೇಣಿಗೆಯಲ್ಲೂ ಬಿಜೆಪಿಯೇ ಮುಂದಿದೆ. ಒಟ್ಟಾರೆಯಾಗಿ ಆರು ರಾಷ್ಟ್ರೀಯ ಪಕ್ಷಗಳು ಸ್ವಯಂ ದೇಣಿಗೆ ರೂಪದಲ್ಲಿ 1059.25 ಕೋಟಿ ರೂ. ಪಡೆದುಕೊಂಡಿದ್ದವು.

ಇದರಲ್ಲಿ ಬಿಜೆಪಿ 1,731 ಕಾರ್ಪೊರೇಟ್ ದಾನಿಗಳಿಂದ 915.59 ಕೋಟಿ ರೂ. ಸ್ವೀಕರಿಸಿತ್ತು ಎಂದು ಎಡಿಆರ್ ವರದಿ ತಿಳಿಸಿದೆ. ಕಾಂಗ್ರೆಸ್ 151 ಕಾರ್ಪೊರೇಟ್ ದಾನಿಗಳಿಂದ 55.36 ಕೋಟಿ ರೂ. ಪಡೆದುಕೊಂಡಿದೆ. 2012-13 ಮತ್ತು 2017-18ರ ಮಧ್ಯೆ ರಾಷ್ಟ್ರೀಯ ಪಕ್ಷಗಳಿಗೆ ಕಾರ್ಪೊರೇಟ್ ವಲಯದಿಂದ ಹರಿದುಬರುವ ದೇಣಿಗೆಗಳಲ್ಲಿ ಶೇ. 414 ಏರಿಕೆ ಕಂಡಿದೆ. ಈ ಅವಧಿಯಲ್ಲಿ ಬಿಜೆಪಿ 1,621.40 ಕೋಟಿ ರೂ. ಅಂದರೆ ಒಟ್ಟು ದೇಣಿಗೆಯ ಶೇ.83.49 ಪಡೆದುಕೊಂಡಿದೆ ಎಂದು ವಿಶ್ಲೇಷಣೆ ತಿಳಿಸುತ್ತದೆ. ಆಶ್ವರ್ಯವೆಂದರೆ, ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದ ಬಹುತೇಕ ಕಾರ್ಪೊರೇಟ್ ಸಂಸ್ಥೆಗಳು ದೇಶಕ್ಕೆ ಅಷ್ಟೇನು ಪರಿಚಿತವಲ್ಲ. 2016-17 ಮತ್ತು 2017-18ರ ಮಧ್ಯೆ ಪ್ರುಡೆಂಟ್/ಸತ್ಯ ಇಲೆಕ್ಟೋರಲ್ ಟ್ರಸ್ಟ್ ಎಂಬ ಸಂಸ್ಥೆ ಎರಡು ರಾಷ್ಟ್ರೀಯ ಪಕ್ಷಗಳಿಗೆ ಅತೀ ಹೆಚ್ಚು ದೇಣಿಗೆ ನೀಡಿದೆ. ಎರಡು ವರ್ಷಗಳಲ್ಲಿ ಈ ಟ್ರಸ್ಟ್ 46 ಬಾರಿ ದೇಣಿಗೆ ನೀಡಿದ್ದು, 429.42 ಕೋಟಿ ರೂ. ರಾಜಕೀಯ ಪಕ್ಷಗಳಿಗೆ ಕೊಡುಗೆಯಾಗಿ ನೀಡಿದೆ. ಈ ಟ್ರಸ್ಟ್‌ನಿಂದ ಪಕ್ಷ 405.52 ಕೋಟಿ ರೂ. ದೇಣಿಗೆ ಪಡೆದಿದೆ ಎಂದು ಬಿಜೆಪಿ ತಿಳಿಸಿದ್ದರೆ ಕಾಂಗ್ರೆಸ್ ಒಟ್ಟು 23.90 ಕೋಟಿ ರೂ. ಸ್ವೀಕರಿಸಿರುವುದನ್ನು ಒಪ್ಪಿಕೊಂಡಿದೆ.

ಕಾಂಗ್ರೆಸ್ ಮತ್ತು ಬಿಜೆಪಿಗೆ ಅತೀಹೆಚ್ಚು ದೇಣಿಗೆ ನೀಡಿದ ಇನ್ನೊಂದು ಸಂಸ್ಥೆಯೆಂದರೆ ಭದ್ರಮ್ ಜನಹಿತ್ ಶಲಿಕ ಟ್ರಸ್ಟ್. ಈ ಟ್ರಸ್ಟ್ ಎರಡು ರಾಜಕೀಯ ಪಕ್ಷಗಳಿಗೆ ಒಟ್ಟು 41 ಕೋಟಿ ರೂ. ದೇಣಿಗೆ ನೀಡಿದೆ. ಎರಡು ವರ್ಷಗಳಲ್ಲಿ ರಾಷ್ಟ್ರೀಯ ಪಕ್ಷಗಳು ಕಾರ್ಪೊರೇಟ್ ವಲಯದಿಂದ ಪಡೆದ 985.18 ಕೋಟಿ ರೂ. ದೇಣಿಗೆಯಲ್ಲಿ 22.59 ಕೋಟಿ ರೂ.ಯನ್ನು ಅಪರಿಚಿತ ಮೂಲಗಳಿಂದ ಪಡೆಯಲಾಗಿದೆ. ಈ ಕಂಪೆನಿಗಳ ಬಗ್ಗೆ ಆನ್‌ಲೈನ್‌ನಲ್ಲಿ ಯಾವುದೇ ಮಾಹಿತಿ ಲಭ್ಯವಿಲ್ಲ ಅಥವಾ ಅವುಗಳ ಕಾರ್ಯವೈಖರಿ ಬಗ್ಗೆ ಅಸ್ಪಷ್ಟತೆಯಿದೆ. 2016-17ರ ಅವಧಿಯಲ್ಲಿ ರಾಜಕೀಯ ಪಕ್ಷಗಳಿಗೆ ಅತೀಹೆಚ್ಚು ದೇಣಿಗೆ ನೀಡಿದ ವಲಯಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ 49.94 ಕೋಟಿ ರೂ.ಗಳೊಂದಿಗೆ ರಿಯಲ್ ಎಸ್ಟೇಟ್ ಕ್ಷೇತ್ರವಿದೆ. ಇಲ್ಲಿಯೂ ದಾನಿಗಳ ವಿವರವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸುವ ಸಮಯದಲ್ಲಿ ರಾಜಕೀಯ ಪಕ್ಷಗಳು ದಾನಿಗಳ ಪಾನ್‌ಕಾರ್ಡ್ ವಿವರ ಮತ್ತು ವಿಳಾಸವನ್ನು ನೀಡುವ ಕಡ್ಡಾಯ ಷರತ್ತನ್ನು ಪಾಲಿಸಿಲ್ಲ ಎನ್ನುವುದನ್ನು ಎಡಿಆರ್ ಬಹಿರಂಗಪಡಿಸಿದೆ.

ರಾಜಕೀಯ ಪಕ್ಷಗಳು ಪಡೆದ 120.14 ಕೋಟಿ ರೂ. ದೇಣಿಗೆಯಲ್ಲಿ ದಾನಿಗಳ ವಿಳಾಸವನ್ನು ನೀಡದಿದ್ದರೆ, 2.59 ಕೋಟಿ ರೂ. ದೇಣಿಗೆಯಲ್ಲಿ ದಾನಿಗಳ ಪ್ಯಾನ್ ಕಾರ್ಡ್ ವಿವರವನ್ನು ಸಲ್ಲಿಸಿಲ್ಲ ಎಂದು ವರದಿ ತಿಳಿಸಿದೆ. ಹೀಗೆ ಪಾನ್ ವಿವರ ಅಥವಾ ವಿಳಾಸರಹಿತವಾಗಿ ಪಡೆದ ದೇಣಿಗೆಗಳ ಪೈಕಿ ಶೇ.98 ಬಿಜೆಪಿ ಪಾಲಾಗಿದೆ. ಹೀಗೆ, ಅಡ್ಡ ದಾರಿಯಲ್ಲಿ ತಮ್ಮ ಪಕ್ಷಗಳಿಗೆ ಅನಧಿಕೃತ ಮೂಲಕಗಳಿಂದ ದೇಣಿಗೆಗಳನ್ನು ಸ್ವೀಕರಿಸುವ ಪಕ್ಷದ ನೇತಾರರೇ, ಈ ದೇಶದ ಸಾಮಾನ್ಯ ಪ್ರಜೆಗಳಿಗೆ ವಿವಿಧ ಕಾರ್ಡ್‌ಗಳನ್ನು ಕಡ್ಡಾಯಗೊಳಿಸಿ ಅವರ ದೈನಂದಿನ ಬದುಕನ್ನು ನರಕಗೊಳಿಸುತ್ತಿದ್ದಾರೆ. ಪಾನ್‌ಕಾರ್ಡ್ ಇಲ್ಲದೆ ಬ್ಯಾಂಕ್ ಮೆಟ್ಟಿಲು ಹತ್ತಲಾಗದಂತಹ ಸ್ಥಿತಿ ನಿರ್ಮಾಣ ಮಾಡಿದ್ದಾರೆ. ಆಧಾರ್ ಕಾರ್ಡ್ ಇಲ್ಲದೆ ರೇಷನ್ ವಂಚಿತ ಜನರು ಹಸಿವಿನಿಂದ ಸಾಯುವಂತಹ ನರಕವನ್ನು ಸೃಷ್ಟಿಸಿದ್ದಾರೆ. ನೂತನ ಸರಕಾರ ಕಾರ್ಪೊರೇಟ್ ಸಂಸ್ಥೆಗಳ ಮೂಗಿನ ನೇರಕ್ಕೆ ಆಡಳಿತ ನಡೆಸುತ್ತಿರುವ ಕಾರಣಗಳನ್ನು ಈ ‘ದೇಣಿಗೆ’ಗಳೇ ಬಹಿರಂಗಪಡಿಸುತ್ತಿವೆ. ಚುನಾವಣೆಗಳಲ್ಲಿ ಹಣ ಪ್ರಭಾವ ಹೆಚ್ಚುತ್ತಿರುವಂತೆಯೇ, ದೇಣಿಗೆಗಳೇ ಚುನಾವಣೆಯ ಸೋಲು ಗೆಲುವುಗಳಲ್ಲಿ ನಿರ್ಣಾಯಕವಾಗುತ್ತವೆ. ಮತದಾರರನ್ನು ಹಣದಿಂದ ಕೊಂಡುಕೊಳ್ಳಬಹುದೆಂಬ ಧೈರ್ಯ ನಾಯಕರಲ್ಲಿ ಹೆಚ್ಚಿದಷ್ಟೂ ಈ ದೇಶದಲ್ಲಿ ‘ಮತದಾರ’ ಅಪ್ರಸ್ತುತನಾಗುತ್ತಾನೆ. ಸರಕಾರ ಮತದಾರನ ಬದಲಿಗೆ ಕಾರ್ಪೊರೇಟ್ ಸಂಸ್ಥೆಗಳಿಗೆ ತಲೆಬಾಗತೊಡಗುತ್ತದೆ. ತಮ್ಮ ದೇಣಿಗೆಗಳ ಮೂಲಕ ಪಕ್ಷಗಳನ್ನು, ಆ ಮೂಲಕ ಸರಕಾರವನ್ನು ಕೊಂಡುಕೊಂಡಿರುವ ಕಾರ್ಪೊರೇಟ್ ಸಂಸ್ಥೆಗಳೇ ಈ ದೇಶವನ್ನು ಪರೋಕ್ಷವಾಗಿ ಆಳುತ್ತಿದ್ದಾರೆ ಎನ್ನುವುದನ್ನು ಮೇಲಿನ ಅಂಕಿ ಅಂಶಗಳು ಸ್ಪಷ್ಟವಾಗಿ ಹೇಳುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News