ವಕೀಲರಾದ ಇಂದಿರಾ ಜೈಸಿಂಗ್, ಆನಂದ್ ಗ್ರೋವರ್ ನಿವಾಸ, ಕಚೇರಿಗಳಿಗೆ ಸಿಬಿಐ ದಾಳಿ

Update: 2019-07-11 17:51 GMT

ಹೊಸದಿಲ್ಲಿ, ಜು. 11: ಸರಕಾರೇತರ ಸಂಸ್ಥೆ ‘ಲಾಯರ್ಸ್‌ ಕಲೆಕ್ಟಿವ್’ ವಿದೇಶಿ ದೇಣಿ (ನಿಯಂತ್ರಣ)ಗೆ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ನ್ಯಾಯವಾದಿಗಳಾದ ಇಂದಿರಾ ಜೈಸಿಂಗ್ ಹಾಗೂ ಅವರ ಪತಿ ಆನಂದ್ ಗ್ರೋವರ್ ಮನೆ, ಕಚೇರಿಗಳ ಮೇಲೆ ಸಿಬಿಐ ಗುರುವಾರ ದಾಳಿ ನಡೆಸಿದೆ.

‘ಲಾಯರ್ಸ್‌ ಕಲೆಕ್ಟಿವ್’ನ ದಿಲ್ಲಿ ಹಾಗೂ ಮುಂಬೈ ಕಚೇರಿಗಳ ಮೇಲೆ ಸಿಬಿಐ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ದಾಳಿ ಮುಂದುವರಿದಿರುವ ಸ್ಥಳಗಳ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿಲ್ಲ ವಿದೇಶಿ ನೆರವು ಸ್ವೀಕರಿಸುವಲ್ಲಿ ವಿದೇಶಿ ದೇಣಿ (ನಿಯಂತ್ರಣ)ಗೆ ಕಾಯ್ದೆ ಉಲ್ಲಂಘನೆ ಆರೋಪದಲ್ಲಿ ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಇಂದಿರಾ ಸಿಂಗ್ ಅವರ ಪತಿ ಆನಂದ್ ಗ್ರೋವರ್ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು.

ಯಾವ ಪ್ರಕರಣ ?

‘ಲಾಯರ್ಸ್‌ ಕಲೆಕ್ಟಿವ್’ನಿಂದ ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆ ಉಲ್ಲಂಘನೆ ಪ್ರಕರಣದ ತನಿಖೆಯ ಸ್ಥಿತಿಗತಿ ಕೋರಿ ದೂರುದಾರ ‘ಲಾಯರ್ಸ್‌ ವಾಯಿಸ್’ ದಾಖಲಿಸಿದ ಮನವಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮೇಯಲ್ಲಿ ಇಂದಿರಾ ಜೈಸಿಂಗ್ ಹಾಗೂ ಅವರ ಪತಿ ಆನಂದ್ ಗ್ರೋವರ್‌ಗೆ ನೋಟಿಸು ಜಾರಿ ಮಾಡಿತ್ತು. ವಿದೇಶಿ ನೆರವು ಸ್ವೀಕರಿಸುವಲ್ಲಿ ನಿಯಮ ಉಲ್ಲಂಘಿಸಿದ ಆರೋಪದಲ್ಲಿ ಸಿಬಿಐ ನ್ಯಾಯವಾದಿ ಆನಂದ ಗ್ರೋವರ್ ಹಾಗೂ ಅವರ ಮುಂಬೈ ಮೂಲದ ಸ್ವಯಂ ಸೇವಾ ಸಂಸ್ಥೆ ‘ಲಾಯರ್ಸ್ ಕಲೆಕ್ಟಿವ್’ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು. ‘ಲಾಯರ್ಸ್ ಕಲೆಕ್ಟಿವ್’ ಸ್ವೀಕರಿಸಿದ ವಿದೇಶಿ ನೆರವನ್ನು ಬಳಸುವಲ್ಲಿ ಹಲವು ವ್ಯತ್ಯಾಸಗಳಿರುವುದಾಗಿ ಆರೋಪಿಸಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ವೀಕರಿಸಿದ ದೂರಿನ ಆಧಾರದಲ್ಲಿ ಸಿಬಿಐ ಪ್ರಥಮ ಮಾಹಿತಿ ವರದಿ ದಾಖಲಿಸಿತ್ತು. ಸಿಬಿಐ ‘ಲಾಯರ್ಸ್‌ ಕಲೆಕ್ಟಿವ್’ನ ಅಧ್ಯಕ್ಷ ಗ್ರೋವರ್ ಹಾಗೂ ಅನಾಮಿಕ ಅಧಿಕಾರಿಗಳಲ್ಲದೆ, ಸಂಘಟನೆಯ ಅನಾಮಿಕ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿತ್ತು. ಈ ಆರೋಪವನ್ನು ‘ಲಾಯರ್ಸ್‌ ಕಲೆಕ್ಟಿವ್’ ಮೇಯಲ್ಲಿ ನೀಡಿದ ತನ್ನ ಹೇಳಿಕೆಯಲ್ಲಿ ತೀವ್ರವಾಗಿ ವಿರೋಧಿಸಿತ್ತು.

ಈಗ ಪ್ರಥಮ ಮಾಹಿತಿ ವರದಿಯ ಭಾಗವಾಗಿರುವ ಸಚಿವಾಲಯ ಸಲ್ಲಿಸಿದ ದೂರಿನಲ್ಲಿ ಆನಂದ್ ಗ್ರೋವರ್ ಅವರ ಪತ್ನಿ ಹಾಗೂ ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಇಂದಿರಾ ಜೈಸಿಂಗ್ ವಿರುದ್ಧದ ಆರೋಪವನ್ನು ಉಲ್ಲೇಖಿಸಿದ್ದರೂ ಸಿಬಿಐ ಪ್ರಥಮ ಮಾಹಿತಿ ವರದಿಯಲ್ಲಿ ಅವರನ್ನು ಆರೋಪಿ ಎಂದು ಉಲ್ಲೇಖಿಸಿಲ್ಲ.

ಆರೋಪ ಏನು ?

2009ರಿಂದ 2014ರ ವರೆಗೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿದ್ದ ಜೈಸಿಂಗ್ ‘ಲಾಯರ್ಸ್‌ ಕಲೆಕ್ಟಿವ್’ ಸ್ವೀಕರಿಸಿರುವ ವಿದೇಶಿ ದೇಣಿಗೆಗೆ 96.60 ಲಕ್ಷ ರೂಪಾಯಿ ಗೌರವ ಧನ ಸ್ವೀಕರಿಸಿದ್ದಾರೆ ಎಂದು ಸಚಿವಾಲಯ ಆರೋಪಿಸಿದೆ. ಹೆಚ್ಚುವರಿ ಸಾಲಿಸಿಟರ್ ಜನರಲ್ ಅವರ ವಿದೇಶಿ ಪ್ರವಾಸಕ್ಕೆ ಕೂಡ ಸಚಿವಾಲಯದ ಪೂರ್ವ ಅನುಮೋದನೆ ಇಲ್ಲದೆ, ‘ಲಾಯರ್ಸ್‌ ಕಲೆಕ್ಟಿವ್’ ಇದೇ ಹಣವನ್ನು ಬಳಸಿ ನೆರವು ನೀಡಿದೆ. ವಿದೇಶಿ ಆದರಾದಿತ್ಯವನ್ನು ಸ್ವೀಕರಿಸುವಾಗ ಹಾಗೂ ವಿದೇಶಕ್ಕೆ ಭೇಟಿ ನೀಡುವ ಸಂದರ್ಭ ‘ಲಾಯರ್ಸ್‌ ಕಲೆಕ್ಟಿವ್’ನಿಂದ ಗೌರವ ಧನದ ರೂಪದಲ್ಲಿ ವಿದೇಶಿ ದೇಣಿಗೆ ಸ್ವೀಕರಿಸುವಾಗ ಸರಕಾರದ ಅನುಮತಿ ಕೋರದೆ ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆಯನ್ನು ಜೈಸಿಂಗ್ ಉಲ್ಲಂಘಿಸಿದ್ದಾರೆ ಎಂದು ಸಚಿವಾಲಯ ಆರೋಪಿಸಿದೆ.

ದಾಳಿ ಪ್ರಶ್ನಿಸಿದ ಯೆಚೂರಿ

ಹೊಸದಿಲ್ಲಿ: ಕೇಂದ್ರ ಸರಕಾರ ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಇಂದಿರಾ ಜೈಸಿಂಗ್ ಹಾಗೂ ಅವರ ಪತಿ ಆನಂದ್ ಗ್ರೋವರ್ ಅವರನ್ನು ಉದ್ದೇಶಪೂರ್ವಕ ಗುರಿಯಾಗಿರಿಸಿದೆ ಎಂದು ಸಿಪಿಎಂನ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಗುರುವಾರ ಹೇಳಿದ್ದಾರೆ. ಕಾನೂನು ತನ್ನದೇ ಕ್ರಮ ತೆಗೆದುಕೊಳ್ಳಲಿದೆ. ಜನಪ್ರಿಯ ಹಾಗೂ ಗೌರವಾನ್ವಿತ ಹಿರಿಯ ನ್ಯಾಯವಾದಿಗಳನ್ನು ಕೇಂದ್ರ ಸರಕಾರ ತನ್ನ ಏಜೆನ್ಸಿಗಳ ಮೂಲಕ ಗುರಿ ಮಾಡುವುದು ಅದರ ಉದ್ದೇಶದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತುತ್ತದೆ ಎಂದು ಸೀತಾರಾಮ ಯೆಚೂರಿ ಟ್ವೀಟ್ ಮಾಡಿದ್ದಾರೆ.

150ಕ್ಕೂ ಅಧಿಕ ನಾಗರಿಕರಿಂದ ಖಂಡನೆ

ಹೊಸದಿಲ್ಲಿ: ಹಿರಿಯ ನ್ಯಾಯವಾದಿಗಳಾದ ಇಂದಿರಾ ಜೈಸಿಂಗ್ ಹಾಗೂ ಆನಂದ್ ಗ್ರೋವರ್ ಅವರ ಮನೆ ಹಾಗೂ ಕಚೇರಿ ಮೇಲೆ ನಡೆದ ಸಿಬಿಐ ದಾಳಿಯನ್ನು 150ಕ್ಕೂ ಅಧಿಕ ನಾಗರಿಕರು ಖಂಡಿಸಿದ್ದಾರೆ. ಸಿಬಿಐ ದಾಳಿ ಬೆದರಿಕೆಯ ವಿವೇಚನಾರಹಿತ ಪ್ರದರ್ಶನ ಹಾಗೂ ಅಧಿಕಾರದ ಸಂಪೂರ್ಣ ದುರುಪಯೋಗ ಅಲ್ಲದೆ ಬೇರೇನೂ ಅಲ್ಲ ಎಂದು ನಾಗರಿಕರ ಗುಂಪು ಹೇಳಿದೆ. ‘‘ಅವರ ನಿವಾಸ ಹಾಗೂ ಕಚೇರಿ ಮೇಲೆ ಸಿಬಿಐ ದಾಳಿ ನಡೆಸಿರುವುದನ್ನು ಖಂಡಿಸಿ ನಾವು ಸಹಿ ಹಾಕಿದ್ದೇವೆ’’ ನಾಗರಿಕರ ಗುಂಪಿನ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News