ನಾನು ಸರಕಾರ ಬಿಟ್ಟುಕೊಡಲ್ಲ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2019-07-11 12:03 GMT

ಬೆಂಗಳೂರು, ಜು. 11: ‘ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಹೇಗೆ ಉಳಿಯುತ್ತದೆ ಎಂಬ ಚಿಂತೆ ನಿಮಗೆ ಬೇಡ’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಸಚಿವ ಸಂಪುಟ ಸಹೊದ್ಯೋಗಿಗಳಿಗೆ ಅಭಯ ನೀಡಿದ್ದಾರೆಂದು ಗೊತ್ತಾಗಿದೆ.

ಗುರುವಾರ ವಿಧಾನಸೌಧದ ಮೂರನೆ ಮಹಡಿಯಲ್ಲಿನ ಸಚಿವ ಸಂಪುಟ ಸಭಾ ಮಂದಿರದಲ್ಲಿ ನಡೆದ ಸಂಪುಟ ಸಭೆಯಲ್ಲಿ, 'ಸ್ಪೀಕರ್ ಮತ್ತು ಕಾನೂನಿನ ಮೂಲಕ ನಾವು ಮೈತ್ರಿ ಸರಕಾರವನ್ನು ಉಳಿಸಿಕೊಳ್ಳುತ್ತೇವೆ. ನಾನು ಸರಕಾರ ಬಿಟ್ಟುಕೊಡಲ್ಲ. ಆದರೆ, ಎಲ್ಲ ಸಚಿವರು ತಮ್ಮ ವ್ಯಾಪ್ತಿಯ ಶಾಸಕರೊಂದಿಗೆ ಸಂಪರ್ಕದಲ್ಲಿ ಇರಿ ಎಂದು ಸೂಚನೆ ನೀಡಿದ್ದಾರೆಂದು ತಿಳಿದು ಬಂದಿದೆ.

ನಾಳೆ(ಜು.12)ಯಿಂದ ವಿಧಾನ ಮಂಡಲ ಅಧಿವೇಶನ ಆರಂಭಗೊಳ್ಳಲಿದ್ದು, ಯಾವುದೇ ಸಮಸ್ಯೆ ಇಲ್ಲದೆ ಅಧಿವೇಶನ ನಡೆಯಲಿದೆ. ಬಿಜೆಪಿಯವರ ಪ್ರಚೋದನೆಗೆ ಯಾರೂ ಆಕ್ರೋಶಗೊಳ್ಳುವುದು ಬೇಡ. ಎಲ್ಲರೂ ಒಗ್ಗಟ್ಟಿನಿಂದ ಇರುವುದು ಬಹಳ ಮುಖ್ಯ ಎಂದು ಕುಮಾರಸ್ವಾಮಿ ಮನವಿ ಮಾಡಿದ್ದಾರೆಂದು ಹೇಳಲಾಗಿದೆ.

ಸಂಪುಟದ ಕೆಲ ಸಹೊದ್ಯೋಗಿಗಳು 'ಇದು ಕೊನೆಯ ಸಚಿವ ಸಂಪುಟ ಸಭೆಯಲ್ಲ. ಮೈತ್ರಿ ಸರಕಾರಕ್ಕೆ ಯಾವುದೇ ಆತಂಕವಿಲ್ಲ. ಇನ್ನೂ ಬಹಳಷ್ಟು ಸಂಪುಟ ಸಭೆಗಳನ್ನು ನಾವು ನಡೆಸಲಿದ್ದೇವೆ' ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News