Breaking News: ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರ ಸದ್ಯಕ್ಕಿಲ್ಲ: ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದು ಹೀಗೆ

Update: 2019-07-11 16:04 GMT

ಬೆಂಗಳೂರು, ಜು. 12: ಶಾಸಕರ ರಾಜೀನಾಮೆ ‘ಪ್ರಹಸನ’ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಸೂಚನೆಯನ್ವಯ ಅತೃಪ್ತರು ಮುಂಬೈನಿಂದ ವಿಮಾನದ ಮೂಲಕ ಬೆಂಗಳೂರಿಗೆ ಓಡೋಡಿ ಬಂದು ವಿಧಾನಸೌಧದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಖುದ್ದು ಭೇಟಿ ಮಾಡಿ ಮತ್ತೊಮ್ಮೆ ರಾಜೀನಾಮೆ ಸಲ್ಲಿಸಿದ್ದಾರೆ.

ರಾಜೀನಾಮೆ ಸಲ್ಲಿಸಿರುವ ಶಾಸಕರಾದ ಬೈರತಿ ಬಸವರಾಜ್, ಸೋಮಶೇಖರ್, ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಮುನಿರತ್ನ, ಶಿವರಾಂ ಹೆಬ್ಬಾರ್, ಪ್ರತಾಪ್‌ಗೌಡ ಪಾಟೀಲ್, ಬಿ.ಸಿ.ಪಾಟೀಲ್, ಎಚ್.ವಿಶ್ವನಾಥ್, ನಾರಾಯಣ ಗೌಡ, ಕೆ.ಗೋಪಾಲಯ್ಯ ತಮ್ಮ ರಾಜೀನಾಮೆ ಕೂಡಲೇ ಅಂಗೀಕರಿಸಬೇಕೆಂದು ಸ್ಪೀಕರ್‌ಗೆ ಮನವಿ ಮಾಡಿದ್ದಾರೆ.

ಆದರೆ, ಸ್ಪೀಕರ್ ರಮೇಶ್‌ಕುಮಾರ್, ‘ಸಂವಿಧಾನ, ನಿಯಮಾವಳಿಗಳ ಅನ್ವಯ ಶಾಸಕರ ರಾಜೀನಾಮೆಗಳನ್ನು ನಾನು ಪರಿಶೀಲನೆ ನಡೆಸಲೇಬೇಕಿದೆ. ಅದರ ನೈಜತೆ ಖಾತ್ರಿಯಾದ ನಂತರವೆ ರಾಜೀನಾಮೆ ಇತ್ಯರ್ಥಪಡಿಸುತ್ತೇನೆ. ಈ ವಿಚಾರದಲ್ಲಿ ನಾನು ಕಾನೂನು ಮೀರುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಏತನ್ಮಧ್ಯೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ‘ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಶಾಸಕರಾದ ರಮೇಶ್ ಜಾರಕಿಹೊಳಿ ಹಾಗೂ ಮಹೇಶ್ ಕುಮಟಳ್ಳಿ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಕೋರಿ ಸ್ಪೀಕರ್‌ಗೆ ದೂರು ನೀಡಿದ್ದಾರೆ.

ಅದೇ ರೀತಿಯಲ್ಲಿ ಜೆಡಿಎಸ್ ವಕ್ತಾರ ರಮೇಶ್‌ಬಾಬು, ಶಾಸಕರಾದ ಎಚ್. ವಿಶ್ವನಾಥ್, ಕೆ.ಗೋಪಾಲಯ್ಯ ಮತ್ತು ನಾರಾಯಣಗೌಡ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಿದ್ದು, ಪೂರಕ ದಾಖಲೆಗಳನ್ನು ಸಲ್ಲಿಸಿದ್ದಾರೆ.

ಹೀಗಾಗಿ ರಾಜ್ಯದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಜೊತೆಗೆ ಶಾಸಕರ ಮುಂದಿನ ಭವಿಷ್ಯ ಏನಾಗಲಿದೆ ಎಂಬುದನ್ನು ಕಾದುನೋಡಬೇಕಿದೆ. ಈ ನಡುವೆ ಸ್ಪೀಕರ್ ರಮೇಶ್‌ಕುಮಾರ್ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಶಾಸಕರ ರಾಜೀನಾಮೆ ಪ್ರಹಸನ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.

ನೈಜತೆ ಖಾತ್ರಿಯಾದ ನಂತರವೆ ರಾಜೀನಾಮೆ ಅಂಗೀಕಾರ: ಶಾಸಕರು ರಾಜೀನಾಮೆ ನೀಡಿದ್ದು ಜು.6ರಂದು ಶನಿವಾರ. ಅಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 12.45ರವರೆಗೆ ಕಚೇರಿಯಲ್ಲಿದ್ದು, ಆನಂತರ ನನ್ನ ಸ್ವಂತ ಕೆಲಸಕ್ಕಾಗಿ ಅಲ್ಲಿಂದ ಹೊರಗೆ ಬಂದಿದ್ದೇನೆ. ಶಾಸಕರು ನನ್ನ ಕಚೇರಿಗೆ ಬಂದದ್ದು ಮಧ್ಯಾಹ್ನ 2.30ಕ್ಕೆ. ಅವರು ಬರುವ ಮುನ್ನ ಯಾರೊಬ್ಬರೂ ಕೂಡ ನನಗೆ ದೂರವಾಣಿ ಅಥವಾ ಪತ್ರ ಮುಖೇನ ಸೂಚನೆ ಕೊಟ್ಟಿರಲಿಲ್ಲ ಎಂದು ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ತಿಳಿಸಿದರು.

ಗುರುವಾರ ವಿಧಾನಸೌಧದಲ್ಲಿ ತುರ್ತು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಶಾಸಕರು ಬರುತ್ತಿರುವುದರಿಂದ ನಾನು ಹೊರಟು ಹೋಗಿದ್ದೆ ಎಂಬ ಅಭಿಪ್ರಾಯವನ್ನು ಮೂಡಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ದಯಮಾಡಿ ಸಾಧ್ಯವಾದಷ್ಟು ಮಟ್ಟಿಗೆ ಸತ್ಯಕ್ಕೆ ಹತ್ತಿರವಾದ ಪ್ರಯತ್ನ ಮಾಡಿ ಎಂದು ಅವರು ಹೇಳಿದರು.

ರವಿವಾರ ರಜಾ ದಿನ ನಾನು ಕಚೇರಿ ತೆರೆದುಕೊಂಡು ಕೂರಲು ಸಾಧ್ಯವಿಲ್ಲ. ಸೋಮವಾರ ನನಗೆ ಈ ಎಲ್ಲ ಬೆಳವಣಿಗೆಗಳು ಆಗುವುದು ಗೊತ್ತಿರಲಿಲ್ಲ. ನಾನು ನನ್ನದೇ ಆದ ಕೆಲವು ಕೆಲಸಗಳಲ್ಲಿದ್ದೆ. ಅದಕ್ಕಾಗಿ ಸೋಮವಾರ ಕಚೇರಿಗೆ ಬಂದಿಲ್ಲ. ಮಂಗಳವಾರ ನಾನು ಕಚೇರಿಗೆ ಬಂದೆ ಎಂದು ಅವರು ಹೇಳಿದರು.

ನಮ್ಮ ರಾಜ್ಯ ವಿಧಾನಸಭೆಯ ನಡಾವಳಿ ನಿಯಮ 202ರ ಪ್ರಕಾರ ಸದಸ್ಯರು ರಾಜೀನಾಮೆ ಕೊಡಬಯಸಿದ್ದಲ್ಲಿ ಹೀಗೆ ಮಾಡಬೇಕು ಎಂದು ನಿಗದಿ ಮಾಡಿ ನಮೂನೆ ಇಟ್ಟಿದ್ದೇವೆ. ದುರಾದೃಷ್ಟವಶಾತ್ ನಮ್ಮ ಕಚೇರಿಗೆ ತಲುಪಿದ್ದ 13 ರಾಜೀನಾಮೆ ಪತ್ರಗಳಲ್ಲಿ 8 ಪತ್ರಗಳು ಆ ನಮೂನೆಯಂತೆ ಇರಲಿಲ್ಲ. ಆ ಎಂಟು ಜನರಿಗೆ ಜು.9ರಂದು ಪುನಃ ನೀವು ರಾಜೀನಾಮೆ ಕೊಡಬಯಸಿದ್ದಲ್ಲಿ, ನಿಯಮ 202ರ ಪ್ರಕಾರ ನಮ್ಮ ಕಚೇರಿಗೆ ತಲುಪಿಸಿ ಎಂದು ಸೂಚನೆ ಕೊಟ್ಟಿದ್ದೇವೆ ಎಂದು ಅವರು ತಿಳಿಸಿದರು.

ಉಳಿದ ಐದು ಜನ ಶಾಸಕರ ರಾಜೀನಾಮೆ ಪತ್ರ ಕ್ರಮಬದ್ಧವಾಗಿದ್ದು, ಅವರನ್ನು ಕೌಲ್ ಅಂಡ್ ಶೆಕ್ತರ್, ಸಂವಿಧಾನದ ನಿಯಮ 190ರ ಪ್ರಕಾರ ನಾನು ವಿಚಾರಣೆ ಮಾಡಿ, ರಾಜೀನಾಮೆ ಸಹಜವಾಗಿದೆಯಾ, ಸ್ವಯಂ ಪ್ರೇರಿತವಾಗಿ ಕೊಟ್ಟಿದ್ದಾರಾ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು ಎಂದು ರಮೇಶ್ ಕುಮಾರ್ ಹೇಳಿದರು.

ಇವತ್ತು ರಾಜ್ಯ ರಾಜಕಾರಣದಲ್ಲಿ ನಡೆದಿರುವ ಬೆಳವಣಿಗೆಗಳಲ್ಲಿ, ಈ ರಾಜೀನಾಮೆ ಸಹಜನಾ, ಸ್ವಯಂ ಪ್ರೇರಿತವಾಗಿ ಆಗಿದೆಯಾ ಇಲ್ಲವೇ ಎಂಬುದನ್ನು ನಾನು ವ್ಯಾಖ್ಯಾನ ಮಾಡುವುದಿಲ್ಲ. ಅದನ್ನು ಸಾರ್ವಜನಿಕರ ವಿವೇಚನೆಗೆ ಬಿಡುತ್ತೇನೆ. ಆದರೆ, ವಿಚಾರಣೆ ಮಾಡಿಯೇ ತೀರ್ಮಾನ ಕೈಗೊಳ್ಳಬೇಕಾದ ಹೊಣೆಗಾರಿಕೆ ನನ್ನ ಮೇಲಿದೆ ಎಂದು ಸ್ಪೀಕರ್ ಹೇಳಿದರು.

ಜು.12ರಿಂದ ಅಧಿವೇಶನ ಆರಂಭವಾಗುತ್ತದೆ. ಆ ದಿನ ಮೂರು ಮಂದಿಗೆ ಸಮಯ ನೀಡಿದ್ದೇನೆ, 13 ಹಾಗೂ 14 ಸಾರ್ವತ್ರಿಕ ರಜೆ. ಉಳಿದ ಇಬ್ಬರನ್ನು 15ರಂದು ಹಾಜರಾಜಲು ಅವಕಾಶ ನೀಡಿದ್ದೇನೆ. ಆದರೂ ನಾನು ವಿಳಂಬ ಮಾಡುತ್ತಿದ್ದೇನೆ ಎಂದು ಬಿಂಬಿಸಲಾಗಿದೆ. ನಾನು ಮಿಂಚಿನ ವೇಗದಲ್ಲಿ ಕೆಲಸ ಮಾಡಬೇಕಿತ್ತಾ? ಯಾರಿಗೋಸ್ಕರ? ಯಾರನ್ನು ಸಂತೋಷ ಪಡಿಸಲು? ಯಾರನ್ನು ಮೆಚ್ಚಿಸಲು? ಎಂದು ಅವರು ಪ್ರಶ್ನಿಸಿದರು.

ಸಂವಿಧಾನದ ಮುಖಸ್ಥರಾದ ರಾಜ್ಯಪಾಲರ ಕಚೇರಿಯನ್ನು ರಾಜೀನಾಮೆ ನೀಡಲು ಬಳಸಿಕೊಳ್ಳಲಾಗುತ್ತಿದೆ. ಅವರ ಕಾರ್ಯದರ್ಶಿ ನನಗೆ ಆ ಪತ್ರಗಳನ್ನು ರವಾನಿಸಿ, ಕ್ರಮ ಕೈಗೊಳ್ಳಿ ಎನ್ನುತ್ತಿದ್ದಾರೆ. ಸುಪ್ರೀಂಕೋರ್ಟ್ ಇವತ್ತು ತನ್ನ ಆದೇಶದಲ್ಲಿ ದೂರುದಾರರು ಸ್ಪೀಕರ್ ಎದುರು ಸಂಜೆ 6 ಒಳಗೆ ಹಾಜರಾಗಲು ‘ನಾವು ಅನುಮತಿ’ ನೀಡುತ್ತಿದ್ದೇವೆ ಎಂದು ಹೇಳುತ್ತದೆ. ಶಾಸಕರು ನನ್ನನ್ನು ಭೇಟಿಯಾಗಲು, ಸುಪ್ರೀಂಕೋರ್ಟ್ ಅನುಮತಿಯ ಅಗತ್ಯವಿದೆಯೇ? ನನ್ನನ್ನು ಭೇಟಿಯಾಗದಂತೆ ಯಾರು ಅವರನ್ನು ಹಿಡಿದಿಟ್ಟಿದ್ದರು? ಯಾರು ಬಂಧಿಸಿಟ್ಟಿದ್ದರೂ, ಇಲ್ಲಿ ಬಂದು ರಾಜೀನಾಮೆ ನೀಡಿ, ಮುಂಬೈಗೆ ಹೋಗಿ ಅಲ್ಲಿಂದ, ದಿಲ್ಲಿಗೆ ಹೋಗಿ ಸುಪ್ರೀಂಕೋರ್ಟ್ ಮುಂದೆ ನಾನು ವಿಳಂಬ ಮಾಡುತ್ತಿದ್ದೇನೆ ಎಂದು ಅರ್ಜಿ ಹಾಕಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಜನ ನನ್ನ ಬಗ್ಗೆ ಏನು ತಿಳಿದುಕೊಳ್ಳಬೇಕು. ಸಾಯುವ ವಯಸ್ಸಿನಲ್ಲಿ ಇವನಿಗೆ ಏನು ಆಸೆ ಬಂತೋ? ಏನಾದರೂ ಸಿಗುತ್ತದೆ ಎಂದು ಈ ರೀತಿ ಮಾಡುತ್ತಿದ್ದಾನ ಎಂದು ಅಂದುಕೊಳ್ಳುತ್ತಾರೆ. ನಿಮ್ಮ ಕಾಲಿಗೆ ನಮಸ್ಕಾರ ಮಾಡುತ್ತೇನೆ, ನೆಮ್ಮದಿಯಿಂದ ನಮ್ಮನ್ನು ಸಾಯಲು ಬಿಡಿ ಎಂದು ರಮೇಶ್ ಕುಮಾರ್ ಮನವಿ ಮಾಡಿದರು.

ಇವತ್ತು ರಾಜೀನಾಮೆ ಕೊಟ್ಟಿರುವ ಶಾಸಕರು, ಈಗಲೇ ಅದನ್ನು ಅಂಗೀಕರಿಸಿ ಎಂದು ಕೇಳಿದ್ದಾರೆ. ಆದರೆ, ನಾನು ಈ ಬಗ್ಗೆ ಯೋಚನೆ ಮಾಡಬೇಕು, ನಿಯಮಾವಳಿಗಳನ್ನು ಮೀರಿ ಹೋಗಲು ಸಾಧ್ಯವಿಲ್ಲ ಎಂದು ತಿಳಿಸಿದ್ದೇನೆ. ಅಲ್ಲದೇ, ಇವತ್ತಿನ ಎಲ್ಲ ಕಲಾಪವನ್ನು ವಿಡಿಯೋ ಚಿತ್ರೀಕರಣ ಮಾಡಿಸಿದ್ದು, ಅದನ್ನು ಸೇರಿಸಿ ಸುಪ್ರೀಂಕೋರ್ಟ್ ರಿಜಿಸ್ಟ್ರಾರ್ ಜನರಲ್‌ಗೆ ಕಳುಹಿಸಿಕೊಡುತ್ತಿದ್ದೇನೆ ಎಂದು ರಮೇಶ್ ಕುಮಾರ್ ಹೇಳಿದರು.

ನಾನು ಕೇಳಿದ ಪ್ರಶ್ನೆಗಳಿಗೆ ಶಾಸಕರು ಉತ್ತರಿಸಿದ್ದಾರೆ. ಕೆಲವು ರಾಜ್ಯಗಳಲ್ಲಿ ಶಾಸಕರ ಅನರ್ಹತೆ ಹಾಗೂ ರಾಜೀನಾಮೆ ವಿಚಾರಗಳು ವರ್ಷಾನುಗಟ್ಟಲೆ ಇತ್ಯರ್ಥವಾಗದೆ ಉಳಿದಿವೆ. ಕೆಲಸದ ದಿನಗಳು ಲೆಕ್ಕ ಹಾಕಿದರೆ ಈ ಎಲ್ಲ ಪ್ರಕ್ರಿಯೆಗಳು ಮೂರು ದಿನ ನಡೆದಿದೆ. ಈ ಅವಧಿಯಲ್ಲಿ ಭೂ ಕಂಪವಾಗಿಬಿಟ್ಟಂತೆ ವರ್ತಿಸಲಾಗುತ್ತಿದೆ ಎಂದು ಸ್ಪೀಕರ್ ಹೇಳಿದರು.

ನಾವು ನಿಯಮಾವಳಿಗಳಿಗೆ, ಸಂವಿಧಾನಕ್ಕೆ ಗೌರವ ಕೊಡಬೇಕಿಲ್ಲವೇ? ನಾನು ಯಾರ ಹಂಗಿನಲ್ಲಿಯೂ ಬದುಕಿಲ್ಲ. ರಾಜ್ಯದ ಜನತೆ ಹಾಗೂ ಸಂವಿಧಾನದ ಆಶಯಗಳ ಹಂಗಿನಲ್ಲಿ ಬದುಕುತ್ತೇನೆ. ಮೂರನೇಯ ಯಾವ ಶಕ್ತಿಯೂ ನನ್ನನ್ನು ತನ್ನ ಹಂಗಿನಲ್ಲಿ ಇರಿಸಿಕೊಳ್ಳಲು ಸಾಧ್ಯವಿಲ್ಲ.

-ಕೆ.ಆರ್.ರಮೇಶ್ ಕುಮಾರ್, ಸ್ಪೀಕರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News