ಜಲಸಂರಕ್ಷಣೆಯನ್ನು ಹೇಗೆ ಪ್ರೋತ್ಸಾಹಿಸಬಹುದು?

Update: 2019-07-11 18:41 GMT

ಭಾರತದ ಬಹಳಷ್ಟು ಭಾಗಗಳನ್ನು ನೀರಿನ ಕೊರತೆ ಕಾಡುತ್ತಿದೆ. ಇತ್ತೀಚೆಗೆ ಪ್ರಕಟವಾದ ಸರಕಾರದ ವರದಿಯೊಂದರ ಪ್ರಕಾರ ಭಾರತವು ನೀರಿನ ಕೊರತೆಯಿರುವ ದೇಶವಲ್ಲ. ಬದಲಾಗಿ ತೀವ್ರ ಸ್ವರೂಪದ ಅಸಡ್ಡೆ, ಜಲಸಂಪನ್ಮೂಲಗಳ ಉಸ್ತುವಾರಿ ಹಾಗೂ ನಿರ್ವಹಣೆಯ ಕೊರತೆ ಮತ್ತು ಸೂಕ್ತ ಅಭಿವೃದ್ಧಿ ಯೋಜನೆಗಳ ಗೈರುಹಾಜರಿಯೇ ದೇಶವನ್ನು ಕಾಡುತ್ತಿರುವ ಗಂಭೀರ ಸ್ವರೂಪದ ಜಲಕ್ಷಾಮಕ್ಕೆ ಕಾರಣ.

ಈ ರಂಗದಲ್ಲಿ ಇನ್ನಷ್ಟು ಅಸಡ್ಡೆ ತೋರಿದಲ್ಲಿ ಭವಿಷ್ಯದಲ್ಲಿ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತದೆಂದು ಎಚ್ಚರಿಕೆ ನೀಡಿರುವ ವರದಿಯು ನೀರಿನ ದುರ್ಬಳಕೆಯನ್ನು ತಡೆಯುವ ಸೂಕ್ತ ಕ್ರಮಗಳನ್ನು ತುರ್ತಾಗಿ ತೆಗೆದುಕೊಳ್ಳಬೇಕು ಮತ್ತು ನೀರಿನ ನ್ಯಾಯೋಚಿತವಾದ ಹಾಗೂ ಸರಿಯಾದ ಬಳಕೆ ಮಾಡುವವರಿಗೆ ಸೂಕ್ತ ಪ್ರತಿಫಲಗಳನ್ನು ನೀಡಬೇಕು. ಹೀಗೆ ಮಾಡಲು ತಪ್ಪಿದವರಿಗೆ ಶಿಕ್ಷೆ ನೀಡಬೇಕೆಂದು ಶಿಫಾರಸು ಮಾಡಿದೆ. ಭವಿಷ್ಯದಲ್ಲಿ ನೀರಿನ ಬಿಕ್ಕಟ್ಟನ್ನು ಬಗೆಹರಿಸಲು ನೀರಿನ ಎಲ್ಲ ಬಳಕೆದಾರರು ತಮ್ಮ ಬದುಕಿನ ಶೈಲಿಯನ್ನು ಬದಲಿಸುವಂತೆ ಜಾಗೃತಿ ಉಂಟುಮಾಡಬೇಕೆಂದು ಕೂಡಾ ವರದಿ ಹೇಳಿದೆ. ಜನರ ಜೀವನಶೈಲಿಯನ್ನು ಬದಲಿಸುವಂತೆ ಅವರನ್ನು ಬದಲಾಯಿಸಲು ನಾವು ಪೂರಕವಾದ ಯೋಜನೆಗಳನ್ನು ಹಾಗೂ ತಂತ್ರಜ್ಞಾನವನ್ನು ಅಳವಡಿಸಿಕೊಂಡಲ್ಲಿ ಭವಿಷ್ಯದ ಸವಾಲನ್ನು ನಿಭಾಯಿಸಬಹುದಾಗಿದೆ.

ಭಾರತದಲ್ಲಿ ನೀರಿನ ಲಭ್ಯತೆಯ ಪುನರ್‌ವಿಮರ್ಶೆಯ ಕುರಿತು ಕೇಂದ್ರ ಜಲ ಆಯೋಗ ಸಿದ್ಧಪಡಿಸಿದ ವರದಿಯನ್ನು ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಕಾವತ್ ಜೂನ್ 26ರಂದು ಬಿಡುಗಡೆ ಮಾಡಿದರು. ವರದಿಯ ಭಾಗವಾಗಿ ಭಾರತದ 20 ನದಿ ಪಾತ್ರಗಳ 32,71,953 ಚದರ ಕಿಲೋಮೀಟರ್ ಕ್ಯಾಚ್‌ಮೆಂಟ್ ಪ್ರದೇಶವನ್ನು ಪರಿಗಣಿಸಲಾಯಿತು. ಜಲ ಅಧ್ಯಯನದ ಪ್ರಕಾರ ಸಿಂಧೂ, ಗಂಗಾ ಮತ್ತು ಬ್ರಹ್ಮಪುತ್ರಾ ನದಿ ಪಾತ್ರಗಳಲ್ಲಿ ನೀರಿನ ಲಭ್ಯತೆ ಕಡಿಮೆಯಾಗಿದೆ. ಇತರ ನದಿ ಪಾತ್ರಗಳಲ್ಲಿ ಈ ಲಭ್ಯತೆ ಹೆಚ್ಚಾಗಿದೆ. ದೇಶದ 20 ನದಿ ಪಾತ್ರಗಳ ವಾರ್ಷಿಕ ತಲಾ ಜಲಸಂಪನ್ಮೂಲ ಲಭ್ಯತೆ 1999.20 ಬಿಲಿಯನ್ ಘನಮೀಟರ್‌ಗಳೆಂದು ಅಂದಾಜಿಸಲಾಗಿದೆ.

1947ರಲ್ಲಿ ದೇಶಕ್ಕೆ ಸ್ವಾತಂತ್ರ ಬಂದಂದಿನಿಂದ ವಾರ್ಷಿಕ ತಲಾ ಜಲ ಲಭ್ಯತೆ ಇಳಿಮುಖವಾಗುತ್ತಾ ಹೋಗಿದೆ. ಆದ್ದರಿಂದ ಈಗ ಲಭ್ಯವಿರುವ ಅತ್ಯುತ್ತಮ ಸಂಪನ್ಮೂಲಗಳನ್ನು ಹಾಗೂ ತಂತ್ರಜ್ಞಾನವನ್ನು ಬಳಸಿ ನೀರಿನ ಈ ಬಿಕ್ಕಟ್ಟನ್ನು, ಜಲ ಒತ್ತಡ (ವಾಟರ್ ಸ್ಟ್ರೆಸ್)ವನ್ನು ತಡೆಯುವುದು ಅತ್ಯವಶ್ಯಕವಾಗಿದೆ. ಜಲ ಒತ್ತಡವು ದೇಶದ ಹಲವಾರು ಭಾಗಗಳ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.ಕೃಷಿ, ಜಲ ವಿದ್ಯುತ್ ಉತ್ಪಾದನೆ, ಜಾನುವಾರು ಸಾಕಣೆ ಇತ್ಯಾದಿ ಹಲವು ರಂಗಗಳು ತೀವ್ರ ಸ್ವರೂಪದ ಸಮಸ್ಯೆಗಳನ್ನೆದುರಿಸುವ ಅಪಾಯವಿದೆ. ಜಾಗತಿಕ ತಾಪಮಾನದ ಏರಿಕೆಯು ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸಬಹುದು; ಭೂಮಿಯ ಮೇಲಿರುವ ನೀರು ಹೆಚ್ಚು ಹೆಚ್ಚು ಆವಿಯಾಗಿ ನೀರಿಗೆ ಹಾಹಾಕಾರ ಉಂಟಾಗಬಹುದು.

ಈಗ ದೇಶವು ತನ್ನ ಇತಿಹಾಸದಲ್ಲೆ ಅತ್ಯಂತ ತೀವ್ರವಾದ ನೀರಿನ ಕೊರತೆಯನ್ನು ಅನುಭವಿಸುತ್ತಿದೆ. ಸುಮಾರು 600 ಮಿಲಿಯ ಜನರು, ಅಂದರೆ ದೇಶದ ಒಟ್ಟು ಜನಸಂಖ್ಯೆಯ ಅರ್ಧದಷ್ಟು ಜನರು, ತೀವ್ರ ಮಟ್ಟದ ಜಲ ಒತ್ತಡವನ್ನು ಎದುರಿಸುತ್ತಿದ್ದಾರೆ.

ಅಂತರ್ಜಲ ಬಳಕೆ:

ಈಗಾಗಲೇ ಜಲ ಒತ್ತಡಕ್ಕೆ ಗುರಿಯಾಗಿರುವ ನಮ್ಮ ದೇಶಕ್ಕೆ ಏರುತ್ತಿರುವ ಜನಸಂಖ್ಯೆ ಒಂದು ಹೆಚ್ಚುವರಿ ಸವಾಲಾಗಿದೆ. ಇನ್ನೊಂದು ಮುಖ್ಯ ಸವಾಲೆಂದರೆ ಅಂತರ್ಜಲದ ಅತಿ ಬಳಕೆ. ಈಗ ಸರಕಾರ ನೀಡಿರುವ ಉಚಿತ ವಿದ್ಯುತ್‌ನಿಂದ ನಡೆಯುವ 20 ಮಿಲಿಯಕ್ಕೂ ಹೆಚ್ಚು ಬಾವಿಗಳು ದೇಶದಲ್ಲಿವೆ. ಇವುಗಳಿಂದ ಅಗತ್ಯಕ್ಕಿಂತ ಹೆಚ್ಚು ನೀರನ್ನು ಹೊರತೆಗೆಯುವುದರಿಂದ ಹಲವು ರಾಜ್ಯಗಳಲ್ಲಿ ನೀರು ಪೋಲಾಗುತ್ತಿದೆ. ಪರಿಣಾಮವಾಗಿ, ದೇಶದಲ್ಲಿ ಜಲ ಕೋಷ್ಠಕವು ಪ್ರತಿ ವರ್ಷ 0.4 ಮಿಟರ್‌ನಷ್ಟು ಕೆಳಕ್ಕೆ ಹೋಗುತ್ತಿದೆ. ಹಲವಾರು ಕರಾವಳಿ ಪ್ರದೇಶಗಳಲ್ಲಿ ಉಪ್ಪು ನೀರು ಒಳನುಗ್ಗಿ ಫಲವತ್ತಾದ ಕೃಷಿ ಭೂಮಿ ಬೇಸಾಯಕ್ಕೆ ಅನರ್ಹಭೂಮಿಯಾಗುತ್ತಿದೆ. ಅಲ್ಲದೆ, ಬೆಳೆಗಳಿಗಾಗಿ ಅಗತ್ಯಕ್ಕಿಂತ ತೀರ ಹೆಚ್ಚು ನೀರು ಬಳಕೆಯಾಗಿ ನೀರು ವ್ಯರ್ಥವಾಗುತ್ತಿದೆ. ಇದಕ್ಕೆ ರೈತರು ಬಳಸುವ ಹರಿಯುವ ನೀರಿನ ನೀರಾವರಿ (ಫ್ಲೋ ಇರಿಗೇಶನ್) ಒಂದು ಕಾರಣವಾಗಿದೆ. ನೆರೆ ನೀರಾವರಿಯಿಂದ ಮೈಕ್ರೊ ನೀರಾವರಿ ಬದಲಾಗುವುದು ಇಂದಿನ ಅಗತ್ಯ. ಜಲ ನಿರ್ವಹಣೆಯ ನಿಟ್ಟಿನಲ್ಲಿ ದೇಶದ ಒಟ್ಟು ಧೋರಣೆಯಲ್ಲಿ ಆಮೂಲಾಗ್ರ ಬದಲಾವಣೆಯಾಗಬೇಕಾಗಿದೆ. ಜಲಸಂರಕ್ಷಣೆಗಾಗಿ ಕೇಂದ್ರ ಸರಕಾರದ ಅಧಿಕಾರಿಗಳ ತಂಡಗಳು ದೇಶಾದ್ಯಂತ 256 ಜಿಲ್ಲೆಗಳ 1,592 ಜಲ-ಒತ್ತಡ ಬ್ಲಾಕ್‌ಗಳಿಗೆ ತೆರಳಿ ಐದು ಮುಖ್ಯ ಜಲ ಸಂರಕ್ಷಣಾ ಕ್ರಮಗಳ ಅನುಷ್ಠಾನವನ್ನು ಪರಿಶೀಲಿಸಲಿದ್ದಾರೆ. ಆ ಐದು ಕ್ರಮಗಳು ಹೀಗಿವೆ: ಜಲಸಂಗ್ರಹಣೆ ಮತ್ತು ಮಳೆ ಕೊಯ್ಲು, ಸಾಂಪ್ರದಾಯಿಕವಾದ ಅಥವಾ ಇತರ ಜಲಮೂಲಗಳ (ಕೆರೆ ಕಾಲುವೆ ಇತ್ಯಾದಿ)ನವೀಕರಣ, ಪುನರ್ಬಳಕೆ, ಕೊಳವೆ ಬಾವಿಗಳನ್ನು ರೀಚಾರ್ಜ್ ಮಾಡುವುದು, ಕಿಂಡಿ ಅಣೆಕಟ್ಟು ಅಭಿವೃದ್ಧಿ ಮತ್ತು ತೀವ್ರ ಸ್ವರೂಪದ ಅರಣ್ಯ ಅಭಿವೃದ್ಧಿ.

ಜಲ ಸಂರಕ್ಷಣೆ ಎನ್‌ಡಿಎ ಸರಕಾರದ ಒಂದು ಪ್ರಮುಖ ಕಾರ್ಯ ಯೋಜನೆಯಾಗಿದೆ ಮತ್ತು ಅದು 2019ರ ಸಂಸತ್ ಚುನಾವಣಾ ಪ್ರಚಾರದ ಮೇಲೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಆಶ್ವಾಸನೆಗಳಿಗೆ ಅನುಗುಣವಾಗಿಯೇ ಇದೆ. ಅಲ್ಲದೆ ಈ ವರ್ಷ ನಡೆಯಲಿರುವ ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆಗಳಲ್ಲಿ ಕೂಡ ನೀರಿನ ಕೊರತೆಯ ಪ್ರಶ್ನೆ ಪ್ರಮುಖ ಪಾತ್ರ ವಹಿಸುತ್ತದೆಯೆಂದು ನಿರೀಕ್ಷಿಸಲಾಗಿದೆ.

ಅದೇನಿದ್ದರೂ, ಸರಕಾರೇತರ ತಜ್ಞರು ಸರಕಾರ ನೀಡಿರುವ ಆಶ್ವಾಸನೆಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ನೀರಿನ ಸಮಸ್ಯೆ ಬಗೆಹರಿಸಲು ಸರಕಾರವು ಅಣೆಕಟ್ಟುಗಳನ್ನು ನಿರ್ಮಿಸಿ ನೀರನ್ನು ದಾಸ್ತಾನು ಇಡುವಂತಹ ತಪ್ಪು ಹೆಜ್ಜೆಗಳನ್ನಿಡುತ್ತದೆ ಎಂದು ಪರಿಸರವಾದಿ ಭರತ್ ಜುನ್‌ಜುನ್‌ವಾಲಾ ಹೇಳಿದ್ದಾರೆ. ನೀರಿನ ಆವಿಯಾಗುವಿಕೆ ಮತ್ತು ಕಾಲುವೆಗಳ ಮೂಲಕ ನೀರಿನ ಪೂರೈಕೆಯಿಂದಾಗಿ ಸುಮಾರು ಶೇ.30ರಿಂದ ಶೇ.40ರಷ್ಟು ನೀರು ನಷ್ಟವಾಗುತ್ತದೆ. ಹೆಚ್ಚು ಅಣೆಕಟ್ಟುಗಳನ್ನು ನಿರ್ಮಿಸಿದಾಗ ಹೆಚ್ಚು ನೀರು ನಷ್ಟವಾಗುತ್ತದೆ ಮತ್ತು ಮತ್ತಷ್ಟು ಸಮಸ್ಯೆಗಳು ಉದ್ಭವಿಸುತ್ತದೆ.

ಕೃಪೆ: scroll.in

Writer - ಮಯಾಂಕ್ ಅಗರವಾಲ್

contributor

Editor - ಮಯಾಂಕ್ ಅಗರವಾಲ್

contributor

Similar News