ಇಂದಿನಿಂದ ವಿಧಾನ ಮಂಡಲದ ಮಳೆಗಾಲದ ಅಧಿವೇಶನ

Update: 2019-07-12 04:54 GMT
ಕಾಂಗ್ರೆಸ್ ನ ರಮೇಶ ಜಾರಕಿಹೊಳಿ ನಿವಾಸಕ್ಕೆ ವಿಪ್ ಅಂಟಿಸುತ್ತಿರೋದು

ಬೆಂಗಳೂರು, ಜು.12: ಕಾಂಗ್ರೆಸ್ ಮತ್ತು ಜೆಡಿಎಸ್ ನ ಅತೃಪ್ತ ಶಾಸಕರ ರಾಜೀನಾಮೆಯಿಂದಾಗಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರ ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದರೂ, ಈ ಹಿಂದೆ ನಿಗದಿಯಾಗಿರುವ ವಿಧಾನ ಮಂಡಲದ  ಮಳೆಗಾಲದ ಅಧಿವೇಶನ ಶುಕ್ರವಾರದಿಂದ  ಆರಂಭಗೊಳ್ಳಲಿದೆ.

ಅಧಿವೇಶನದಲ್ಲಿ ಹಾಜರಾಗಲು ಕಾಂಗ್ರೆಸ್ –ಜೆಡಿಎಸ್ ಪಕ್ಷದ ಶಾಸಕರಿಗೆ ವಿಪ್ ಜಾರಿಯಾಗಿದೆ. ಆಪರೇಶನ್ ಕಮಲಕ್ಕೆ ಹೆದರಿ ರೆಸಾರ್ಟ್ ಸೇರಿದ್ದ ಜೆಡಿಎಸ್ ಶಾಸಕರು ಅಧಿವೇಶನಕ್ಕೆ ಆಗಮಿಸಲು ತಯಾರಿ ನಡೆಸಿದ್ದಾರೆ.ರಾಜ್ಯದಲ್ಲಿನ ರಾಜಕೀಯ ಬಿಕ್ಕಟ್ಟು ಬಗ್ಗೆ ಚರ್ಚಿಸಲು ವಿಪಕ್ಷ ಬಿಜೆಪಿ ವಿಧಾನಸಭೆಯಲ್ಲಿ ನಿಲುವಳಿ ಸೂಚನೆ ಮಂಡಿಸುವ ನಿರೀಕ್ಷೆ ಇದೆ.  

ಈ ನಡುವೆ ಬೆಳಗ್ಗೆ 10:30ಕ್ಕೆ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಮುಖ್ಯ ಮಂತ್ರಿ ಎಚ್.ಡಿ.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯಲಿದೆ.ಸಭೆಯಲ್ಲಿ ಅಧಿವೇಶನದ ಬಗ್ಗೆ ಚರ್ಚೆ ನಡೆಯಲಿದೆ.

ಇದಕ್ಕೂ ಮೊದಲು ಕುಮಾರ ಸ್ವಾಮಿ ಬೆಳಗ್ಗೆ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರನ್ನು ಭೇಟಿಯಾಗಿ ಪ್ರಸಕ್ತ ಪರಿಸ್ಥಿತಿಯ  ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಅತೃಪ್ತ ಶಾಸಕರ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ಇಂದು ನಡೆಯಲಿದ್ದು, ಇದೇ ವೇಳೆ ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ನೀಡಿರುವ ನೋಟಿಸ್ ಗೆ ಸ್ಪೀಕರ್ ರಮೇಶ್ ಕುಮಾರ್ ಸಲ್ಲಿಸಿದ ಅರ್ಜಿಯ ವಿಚಾರಣೆಯೂ ನಿಗದಿಯಾಗಿದೆ

ಸ್ಪೀಕರ್ ಸುಪ್ರೀಂ ಕೋರ್ಟ್ ಗೆ ನೀಡಿರುವ ವರದಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್  ನೀಡುವ ತೀರ್ಪಿನ ವಿಚಾರದಲ್ಲಿ ಅತೃಪ್ತ ಶಾಸಕರು ಆತಂಕಗೊಂಡಿದ್ದಾರೆ. ಅತೃಪ್ತರು ಸುಪ್ರೀಂ ಕೋರ್ಟ್ ನ ಆದೇಶದ ಹಿನ್ನೆಲೆಯಲ್ಲಿ ಮುಂಬೈನಿಂದ ಬೆಂಗಳೂರಿಗೆ ನಿನ್ನೆ ಸಂಜೆ ಆಗಮಿಸಿ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿಯಾಗಿ ಮತ್ತೆ ರಾಜೀನಾಮೆ ನೀಡಿ ಮುಂಬೈಗೆ ವಾಪಸಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News