ವಿಶ್ವಾಸಮತ ಮಂಡಿಸಲು ನಾನು ಸಿದ್ಧ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2019-07-12 12:16 GMT

ಬೆಂಗಳೂರು, ಜು. 12: ‘ಬೆಂಬಲವಿಲ್ಲದಿದ್ದರೂ ಅಧಿಕಾರದಲ್ಲಿ ಶಾಶ್ವತವಾಗಿ ಕೂರಲು ನಾನು ಬಂದಿಲ್ಲ. ಬೆಂಬಲವಿದ್ದರೆ ಮಾತ್ರ ಈ ಸ್ಥಾನದಲ್ಲಿ ಮುಂದುವರಿಯಲು ಸಾಧ್ಯ. ನಾನು ಸ್ವಪ್ರೇರಣೆಯಿಂದ ವಿಶ್ವಾಸಮತ ಮಂಡಿಸಲು ನಿರ್ಧರಿಸಿದ್ದೇನೆ, ಸಮಯ ಕೊಡಿ’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ, ಸ್ಪೀಕರ್ ರಮೇಶ್‌ ಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.

ಶುಕ್ರವಾರ ವಿಧಾನಸಭೆಯಲ್ಲಿ ಸ್ಪೀಕರ್ ಮಂಡಿಸಿದ ಸಂತಾಪ ಸೂಚನೆ ನಿರ್ಣಯ ಬೆಂಬಲಿಸಿ ಮಾತು ಆರಂಭಿಸಿದ ಕುಮಾರಸ್ವಾಮಿ, ‘ರಾಜ್ಯದಲ್ಲಿ ರಾಜಕೀಯ ಪ್ರಕ್ರಿಯೆಗಳಿಗೆ ಚಾಲನೆ ಸಿಕ್ಕಿದ್ದು, ಹಲವು ಮಂದಿ ಶಾಸಕರು ಕೆಲ ನಿರ್ಣಯಗಳಿಂದ ಗೊಂದಲ ಸೃಷ್ಟಿಯಾಗಿದೆ. ಹೀಗಾಗಿ ನಾನು ಎಲ್ಲಕ್ಕೂ ಸಿದ್ಧನಾಗಿದ್ದೇನೆ’ ಎಂದು ಸ್ಪಷ್ಟಪಡಿಸಿದರು.

‘ರಾಜ್ಯದ ಜನತೆಗೆ ಸರಿಯಾದ ಸಂದೇಶ ರವಾನಿಸಬೇಕೆಂಬ ಕಾರಣಕ್ಕಾಗಿ ಸ್ವಪ್ರೇರಣೆಯಿಂದ ವಿಶ್ವಾಸಮತ ಯಾಚಿಸಲು ನಿರ್ಧರಿಸಿದ್ದೇನೆ. ಬೆಂಬಲವಿದ್ದರೆ ಮಾತ್ರ ಈ ಸ್ಥಾನದಲ್ಲಿ ಮುಂದುವರಿಯಲು ಸಾಧ್ಯ. ಈ ಸ್ಥಾನವನ್ನು ಯಾವುದೇ ಸಂದರ್ಭದಲ್ಲಿ ದುರ್ಬಳಕೆ ಮಾಡಿಕೊಳ್ಳುವುದಿಲ್ಲ’ ಎಂದು ಕುಮಾರಸ್ವಾಮಿ ನುಡಿದರು.

ವಿಪಕ್ಷ ಬಿಜೆಪಿ ಸದನದಲ್ಲಿ ಮೈತ್ರಿ ಸರಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ಸಿದ್ಧತೆ ನಡೆಸಿತ್ತು. ಆದರೆ, ಅದಕ್ಕೂ ಮೊದಲೇ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ನಿರ್ಣಯ ಪ್ರಕಟಿಸಿರುವುದು ವಿಪಕ್ಷ ಬಿಜೆಪಿಗೆ ಅಚ್ಚರಿ ಮೂಡಿಸಿದೆ.
ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತ ಸಾಬೀತುಪಡಿಸಲು ಸಮಯ ಕೋರಿದ್ದು, ಈ ಮನವಿಯ ಬಗ್ಗೆ ನಿರ್ಧರಿಸಲು ಸ್ಪೀಕರ್ ಅವರಿಗೆ ಏಳು ದಿನಗಳ ಕಾಲಾವಕಾಶವಿದೆ. ಈ ಕುರಿತು ಸ್ಪೀಕರ್ ರಮೇಶ್‌ಕುಮಾರ್ ಯಾವ ತೀರ್ಮಾನ ಕೈಗೊಳ್ಳಲಿದ್ದಾರೆ ಎಂಬುದು ಕುತೂಹಲ ಸೃಷ್ಟಿಸಿದೆ.

"ಎಲ್ಲವನ್ನು ಸದನದಲ್ಲಿ ಎದುರಿಸುತ್ತೇನೆ"
ಹೊರಗೆ ನಾನು ಹೇಳುವುದು ಏನು ಇಲ್ಲ. ಎಲ್ಲ ವಿಷಯಗಳನ್ನು ಸದನದಲ್ಲಿ ಎದುರಿಸುತ್ತೇನೆ. ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸುತ್ತೇನೆ. ಅಲ್ಲಿಯವರೆಗೆ ಕಾದು ನೋಡಿ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News