ಟೌನ್‍ಶಿಪ್ ಬಳಕೆಗೆ ಕಾನೂನಿನ ತೊಡಕಿದೆ; ಜನಾಭಿಪ್ರಾಯವೇ ಅಂತಿಮ: ಜಿಲ್ಲಾಧಿಕಾರಿ

Update: 2019-07-12 18:16 GMT

ಚಿಕ್ಕಮಗಳೂರು, ಜು.12: ನೂತನ ಕಳಸ ತಾಲೂಕಿನ ಆಡಳಿತ ಕೇಂದ್ರವನ್ನು ಕುದುರೆಮುಖ ಟೌನ್‍ಶಿಪ್‍ನಲ್ಲಿ ಆರಂಭಿಸುವ ವಿಚಾರ ಕೇವಲ ಪ್ರಸ್ತಾವವೇ ಹೊರತು ನಿರ್ಧಾರವಲ್ಲ. ಈ ಪ್ರಸ್ತಾಪ ಅಂತಿಮವಲ್ಲ. ಸ್ಥಳೀಯ ಜನರ ಅಭಿಪ್ರಾಯವೇ ಅಂತಿಮ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸ್ಪಷ್ಟನೆ ನೀಡಿದ್ದಾರೆ.

ಗುರುವಾರ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಕಳಸ ತಾಲೂಕು ಕೇಂದ್ರದ ಆಡಳಿತಕ್ಕಾಗಿ ಕುದುರೆಮುಖ ಟೌನ್‍ಶಿಪ್ ಬಳಕೆಯ ಜಿಲ್ಲಾಡಳಿತದ ಪ್ರಸ್ತಾವಕ್ಕೆ ಸ್ಥಳೀಯ ಜನರು ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕುದುರೆಮುಖ ಟೌನ್‍ಶಿಪ್ ಸಂಬಂಧ ಕಾನೂನಿನ ತೊಡಕಿದೆ. ಅಲ್ಲದೇ ಅಭಯಾರಣ್ಯದ ವ್ಯಾಪ್ತಿಯಲ್ಲಿ ಟೌನ್‍ಶಿಪ್ ಇರುವುದರಿಂದ ಅರಣ್ಯ ಕಾನೂನಿನ ತೊಡಕು ತಾಲೂಕು ಕೇಂದ್ರಕ್ಕೆ ತೊಡಕಾಗಬಹುದು. ಆದ್ದರಿಂದ ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕೇವಲ ಪ್ರಸ್ತಾಪವನ್ನು ಸರಕಾರದ ಮುಂದಿಟ್ಟಿದೆಯಷ್ಟೆ. ಇದೇ ಅಂತಿಮವಲ್ಲ. ಈ ಸಂಬಂಧ ಸ್ಥಳೀಯ ಜನರೊಂದಿಗೆ ಸಭೆ ನಡೆಸಿ ಜನಾಭಿಪ್ರಾಯ ಸಂಗ್ರಹಿಸಲಾಗುವುದು. ಜನರ ಅಭಿಪ್ರಾಯದಂತೆ ಕಳಸ ತಾಲೂಕು ಕೇಂದ್ರಕ್ಕೆ ಮೂಲಸೌಕರ್ಯ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಚಿಕ್ಕಮಗಳೂರು ನಗರದಲ್ಲಿ ಅನಧೀಕೃತ ಕಟ್ಟಡಗಳ ನಿರ್ಮಾಣ ಸಂಬಂಧ ದೂರು ಬಂದಿದೆ. ಅನಧೀಕೃತ ಕಟ್ಟಡಗಳ ಸಂಬಂಧ ಪರಿಶೀಲನಾ ಕಾರ್ಯ ನಡೆಯುತ್ತಿದ್ದು, ಸೂಕ್ತ ಸಮಯದಲ್ಲಿ ಅಗತ್ಯ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದ ಅವರು, ನಗರಸಭೆಗೆ ಸಾರ್ವಜನಿಕರಿಂದ ಸಂದಾಯವಾಗಬೇಕಿರುವ ನೀರು, ಕಂದಾಯ ಮತ್ತಿತರ ತೆರಿಗೆಗಳು ಸಂಗ್ರಹ ಬಾಕಿ ಇರುವುದು ತಿಳಿದಿದ್ದು, ತೆರಿಗೆ ಸಂಗ್ರಹಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಬಾಕಿ ತೆರಿಗೆ ಸಂಗ್ರಹಕ್ಕೆ ಶೀಘ್ರ ಅಗತ್ಯಕ್ರಮವಹಿಸಲಾಗುವುದು ಎಂದರು.

ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡುತ್ತಿದೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿ ಬಂದಿದ್ದು, ಈ ಗೌಡನಹಳ್ಳಿ ಸೇರಿದಂತೆ ಕೆಲ ಗ್ರಾಮಗಳಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ ರೋಗಗಳ ನಿಯಂತ್ರಣಕ್ಕೆ ಅಗತ್ಯ ಕ್ರಮವಹಿಸಲಾಗಿದೆ. ಕೆಲ ಗ್ರಾಮಗಳಲ್ಲಿ ವೈದ್ಯಾಧಿಕಾರಿಗಳ ತಂಡ ಶಿಬಿರ ನಡೆಸಿದ್ದು, ಸಾಂಕ್ರಾಮಿಕ ರೋಗಗಳು ನಿಯಂತ್ರಣಕ್ಕೆ ಬಂದಿವೆ ಎಂದ ಅವರು, ನಗರ ಸೇರಿದಂತೆ ಕೆಲ ಗ್ರಾಮೀಣ ಪ್ರದೇಶಗಳಲ್ಲಿ ಡೆಂಗ್ ರೋಗ ಪ್ರಕರಣಗಳು ಒಂದೆರೆಡು ಸಂಖ್ಯೆಯಲ್ಲಿ ಕಂಡು ಬಂದಿವೆ. ಮಳೆಗಾಲದಲ್ಲಿ ಹವಾಮಾನ ವೈಫರೀತ್ಯದಿಂದಾಗಿ ಜ್ವರದಂತಹ ಪ್ರಕರಣಗಳು ಹೆಚ್ಚು ಕಾಣಿಸಿಕೊಂಡಿವೆ. ಇಂತಹ ಪ್ರಕರಣಗಳ ಬಗ್ಗೆ ನಿರ್ಲಕ್ಷ್ಯ ಮಾಡದೇ ಶಂಕಿತ ಡೆಂಗ್ ರೋಗಿಗಳ ರಕ್ತದ ಮಾದರಿಗಳನ್ನು ಪ್ರಯೋಗಲಾಯಕ್ಕೆ ಕಳಿಸಿ ಪರೀಕ್ಷಿಸಲಾಗಿದೆ. ಇಂತಹ ನೂರು ಪ್ರಕರಣಗಳಲ್ಲಿ ಒಂದೆರೆಡು ಡೆಂಗ್ ರೋಗಗಳಿರುವುದು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಡೆಂಗ್ ರೋಗದ ಪ್ರಕರಣಗಳು ತುಂಬಾ ಕಡಿಮೆ ಪ್ರಮಾಣದಲ್ಲಿದೆ ಎಂದರು. 

ನಗರ ವ್ಯಾಪ್ತಿಯಲ್ಲಿ ಸೊಳ್ಳೆಗಳ ಹಾವಳಿ ನಿಯಂತ್ರಣಕ್ಕೆ ಪಾಗಿಂಗ್ ಮಾಡುವ ಕಾರ್ಯ ನಡೆಯುತ್ತಿದೆ. ಪಾಗಿಂಗ್ ಕೆಲಸ ಸಮರ್ಪಕವಾಗಿ ಕೈಗೊಳ್ಳಲು ಟೈಂ ಟೇಬಲ್‍ನಂತೆ ಕಾರ್ಯನಿರ್ವಹಿಸಲು ಸೂಚಿಸಲಾಗುವುದು. ಅಲ್ಲದೇ ಚರಂಡಿ ಹಾಗೂ ಮನೆಗಳ ಸುತ್ತಮುತ್ತಲು ಸ್ವಚ್ಛತೆ ಕಾಯ್ದುಕೊಳ್ಳಲು, ಲಾರ್ವಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಮೂಲಕ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮನೆಮನೆ ಭೇಟಿ ಮೂಲಕವೂ ಜಾಗೃತಿ ಮೂಡಿಸಲಾಗುತ್ತಿದೆ ಎಂದ ಅವರು, ನಗರದ ಕೆಲ ಬಡಾವಣೆಗಳಲ್ಲಿ ಚರಂಡಿಗಳ ಸ್ವಚ್ಛತೆಗೆ ನಗರಸಭೆ ಸಿಬ್ಬಂದಿಗೆ ಸೂಚಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ನಡೆಯುತ್ತಿರುವ ಕಂದಾಯ, ಅರಣ್ಯ ಭೂಮಿ ಜಂಟಿ ಸರ್ವೆಕಾರ್ಯದ ಫೀಲ್ಡ್‍ವರ್ಕ್ ಬಹುತೇಕ ಪೂರ್ಣಗೊಂಡಿದ್ದು, ಪೇಪರ್ ವರ್ಕ್ ಬಾಕಿದೆ. ಸರ್ವೇ ವರದಿಯನ್ನು ಪರಿಶೀಲಿಸಿ ಕಂದಾಯ, ಅರಣ್ಯ ಭೂಮಿಯ ಲಬ್ಯತೆಯ ಪ್ರಮಾಣವನ್ನು ತಾಳೆಹಾಕಬೇಕಿದೆ. ಈ ಸಂಬಂಧ ಈಗಾಗಲೇ ಕಂದಾಯ, ಅರಣ್ಯಾಧಿಕಾರಿಗಳ ಸಭೆ ನಡೆಸಲಾಗಿದ್ದು, ಈ ಸಂಬಂಧ ಮುಂದಿನ ಸೋಮವಾರ ಮತ್ತೊಂದು ಸಭೆ ನಡೆಸಲಾಗುವುದು. ಶೀಘ್ರ ಜಂಟಿ ಸರ್ವೇ ಕಾರ್ಯದ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಇದೇ ವೇಳೆ ತಿಳಿಸಿದರು.

ವಾಡಿಕೆಯಂತೆ ಜಿಲ್ಲೆಯಲ್ಲಿ ಇದುವರೆಗೂ 637 ಮಿ.ಮೀ. ಮಳೆಯಾಗಬೇಕಿತ್ತು. ಆದರೆ ಜಿಲ್ಲೆಯಲ್ಲಿ ಕಳೆದ ಜನವರಿಯಿಂದ ಜುಲೈ ಮೊದಲವಾರದವರೆಗೆ 423 ಮಿ.ಮೀ. ಮಳೆಯಾಗಿದೆ. ಕಡೂರು ತಾಲೂಕು ವ್ಯಾಪ್ತಿಯಲ್ಲಿ ವಾಡಿಕೆಯಂತೆ 423 ಮಿ.ಮೀ ಮಳೆಯಾಗಬೇಕಿತ್ತು. ಆದರೆ ಇದುವರೆಗೂ 204 ಮಿ.ಮೀ ಮಳೆಯಾಗಿದೆ. ಉಳಿದ ತಾಲೂಕುಗಳ ವ್ಯಾಪ್ತಿಯಲ್ಲಿ ಶೇ.30ರಷ್ಟು ಮಳೆ ಪ್ರಮಾಣ ಕಡಿಮೆಯಾಗಿದೆ. ಜುಲೈ ಮೊದಲವಾರದಿಂದ ಜಿಲ್ಲಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಮಲೆನಾಡು ವ್ಯಾಪ್ತಿಯಲ್ಲಿ ಮಳೆ ಪ್ರಮಾಣ ಹೆಚ್ಚಾಗಿದ್ದರೂ ಪ್ರಮುಖ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿಲ್ಲ. ಆದರೂ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಯ ಬರಪೀಡಿತ ಪ್ರದೇಶಗಳಲ್ಲಿ ಅಗತ್ಯವಿರುವ ಗ್ರಾಮಗಳಿಗೆ ಕುಡಿಯುವ ನೀರಿನ ಪೂರೈಕೆಗೆ ಟ್ಯಾಂಕರ್‍ಗಳ ಮೂಲಕ ನೀರು ಪೂರೈಕೆ ಮುಂದುವರಿದಿದ್ದು, ಕಡೂರು, ತರೀಕೆರೆ, ಚಿಕ್ಕಮಗಳೂರು ತಾಲೂಕು ವ್ಯಾಪ್ತಿಯ 83 ಗ್ರಾಮಗಳಿಗೆ 93 ಟ್ಯಾಂಕರ್ ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News