ಬಿಜೆಪಿ ವಿರುದ್ಧ ಅಸಮಾಧಾನ: ಮಡಿಕೇರಿಯಲ್ಲಿ ಜೆಡಿಎಸ್ ಪ್ರತಿಭಟನೆ

Update: 2019-07-12 18:39 GMT

ಮಡಿಕೇರಿ,ಜು.12 :ರಾಜ್ಯದ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿ ಕೊಡಗು ಜಿಲ್ಲಾ ಜಾತ್ಯತೀತ ಜನತಾದಳ ನಗರದ ಜನರಲ್ ಕೆ.ಎಸ್. ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.

ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಅವರ ನೇತೃತ್ವದಲ್ಲಿ ಶುಕ್ರವಾರ ಬೆಳಗ್ಗೆ ಜ.ತಿಮ್ಮಯ್ಯ ವೃತ್ತದಲ್ಲಿ ಸಮಾವೇಶಗೊಂಡ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು, ಬಿಜೆಪಿ ಹಾಗೂ ಅತೃಪ್ತ ಶಾಸಕರುಗಳ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿಯ ಆಮಿಷಕ್ಕೆ ಒಳಗಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಕೆಲವು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಮೂಲಕ  ಪ್ರಜಾಪ್ರಭುತ್ವ ವ್ಯವಸ್ಥೆಯ ಕಗ್ಗೊಲೆ ಮಾಡಿರುವುದಲ್ಲದೆ, ತಮ್ಮ ಕ್ಷೇತ್ರದ ಮತದಾರರಿಗೆ  ದ್ರೋಹವೆಸಗಿದ್ದಾರೆ ಎಂದು ಆರೋಪಿಸಿದರು.

ಮೈತ್ರಿ ಸರ್ಕಾರದ ಭಾಗವೇ ಆಗಿದ್ದ ಕೆಲವು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡುತ್ತಾರೆಂದು ಯಾರೂ ನಿರೀಕ್ಷಿಸಿರಲಿಲ್ಲ. ಅದರಲ್ಲು ಮುಖ್ಯವಾಗಿ ಹಿರಿಯ ರಾಜಕಾರಣಿ ಹೆಚ್.ವಿಶ್ವನಾಥ್ ಅವರು ತೆಗೆದುಕೊಂಡ ನಿಲುವುಗಳು ಮತ್ತು ವರ್ತನೆ ಅತೀವ ನೋವನ್ನುಂಟು ಮಾಡಿದೆ ಎಂದು ತಿಳಿಸಿದರು. 

ಒಂದು ಪಕ್ಷದಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾದ ಬಳಿಕ,  ಮತ್ತೊಂದು ಪಕ್ಷಕ್ಕೆ ಬೆಂಬಲ ನೀಡಿ ತಮ್ಮನ್ನು ತಾವೇ ಮಾರಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದ ಕೆ.ಎಂ.ಗಣೇಶ್,  ಪಕ್ಷ ನಿಷ್ಟರಾಗಿರಬೇಕಾದ ಶಾಸಕರು ಕೀಳುಮಟ್ಟದ ರಾಜಕಾರಣ ಮಾಡುವ ಮೂಲಕ ಪಕ್ಷದ ಬಲವರ್ಧನೆಗೆ ತಡೆ ಒಡ್ಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. 

ಪ್ರತಿಭಟನೆಯಲ್ಲಿ ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷರುಗಳಾದ ಪಾಣತ್ತಲೆ ವಿಶ್ವನಾಥ್, ಪಿ.ಎ.ಯೂಸೂಫ್, ಲೀಲಾ ಶೇಷಮ್ಮ, ಕಾರ್ಯದರ್ಶಿ ಸುನಿಲ್, ಖಜಾಂಚಿ ಡೆನ್ನಿ ಬರೋಸ್, ನಗರ ಅಲ್ಪಸಂಖ್ಯಾತರ ಅಧ್ಯಕ್ಷ ಇಬ್ರಾಹಿಂ, ಯುವ ಘಟಕದ ಅಧ್ಯಕ್ಷ ವಿಶ್ವ, ಪ್ರಧಾನ ಕಾರ್ಯದರ್ಶಿ ಜಾಸಿರ್ ಮೂರ್ನಾಡು,  ಜಿಲ್ಲಾ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಇಸಾಕ್ ಖಾನ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶಾಂತಿ ಅಚ್ಚಪ್ಪ, ನಗರ ಎಸ್‍ಸಿ ಘಟಕದ ಅಧ್ಯಕ್ಷ ರವಿಕುಮಾರ್, ವೀರಾಜಪೇಟೆ ನಗರಾಧ್ಯಕ್ಷ ಮಂಜು, ವೀರಾಜಪೇಟೆ ತಾಲ್ಲೂಕು ಅಧ್ಯಕ್ಷೆ ಕುಸುಮ ಚಂದ್ರಶೇಖರ, ಮಡಿಕೇರಿ ನಗರ ಮಹಿಳಾ ಘಟಕದ ಅಧ್ಯಕ್ಷೆ ಸುನಂದ, ಉಪಾಧ್ಯಕ್ಷೆ ಬೆನ್ನಿ ಜೆಸಿಂತ ಡಿಸಿಲ್ವ ಸೇರಿದಂತೆ ಹಲ ಪ್ರಮುಖರು, ಕಾರ್ಯಕರ್ತರು ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News