ಪಾಕ್ ವಿದೇಶ ಸಚಿವರನ್ನು ತರಾಟೆಗೆ ತೆಗೆದುಕೊಂಡ ಪತ್ರಕರ್ತ

Update: 2019-07-12 18:47 GMT

ಲಂಡನ್, ಜು. 12: ಪಾಕಿಸ್ತಾನದಲ್ಲಿ ಹೆಚ್ಚುತ್ತಿರುವ ಪತ್ರಿಕಾ ನಿರ್ಬಂಧಗಳ ನಡುವೆಯೇ, ಕೆನಡದ ಪತ್ರಕರ್ತರೊಬ್ಬರು ಲಂಡನ್‌ನಲ್ಲಿ ಪಾಕಿಸ್ತಾನದ ವಿದೇಶ ಸಚಿವ ಶಾ ಮಹ್ಮೂದ್ ಖುರೇಶಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಪಾಕಿಸ್ತಾನ ಸರಕಾರ ನೀಡಿದ ದೂರಿನ ಬಳಿಕ, ತನ್ನ ಸಾಮಾಜಿಕ ಮಾಧ್ಯಮ ಖಾತೆಯನ್ನು ಅಮಾನತಿನಲ್ಲಿರಿಸಲಾಗಿದೆ ಎಂದು ಈ ಪತ್ರಕರ್ತರು ಆರೋಪಿಸಿದ್ದಾರೆ.

ಲಂಡನ್‌ನಲ್ಲಿ ಗುರುವಾರ ನಡೆದ ‘ಮಾಧ್ಯಮ ಸ್ವಾತಂತ್ರವನ್ನು ರಕ್ಷಿಸಿ’ ಎಂಬ ವಿಷಯದ ಕುರಿತ ಪತ್ರಿಕಾಗೋಷ್ಠಿಯೊಂದರಲ್ಲಿ ಖುರೇಶಿ ಭಾಗವಹಿಸಿದ್ದಾಗ ಈ ಘಟನೆ ನಡೆದಿದೆ.ಜೈಲಿನಲ್ಲಿರುವ ಮಾಜಿ ಅಧ್ಯಕ್ಷ ಅಸಿಫ್ ಅಲಿ ಝರ್ದಾರಿಯೊಂದಿಗಿನ ಸಂದರ್ಶನವೊಂದನ್ನು ಪ್ರಸಾರ ಮಾಡಿದ ಮೂರು ಖಾಸಗಿ ಟಿವಿ ಚಾನೆಲ್‌ಗಳ ಪ್ರಸಾರವನ್ನೇ ಪಾಕಿಸ್ತಾನದ ಇಲೆಕ್ಟ್ರಾನಿಕ್ ಮಾಧ್ಯಮ ನಿಯಂತ್ರಣ ಪ್ರಾಧಿಕಾರವು ಅಮಾನತಿನಲ್ಲಿಟ್ಟ ದಿನಗಳ ಬಳಿಕ ಈ ಬೆಳವಣಿಗೆ ಸಂಭವಿಸಿದೆ.

ಕೆನಡದ ರಾಜಕೀಯ ವೆಬ್‌ಸೈಟ್ ‘ರೆಬೆಲ್ ಮೀಡಿಯ’ದ ಪತ್ರಕರ್ತ ಇಝ್ರ ಲೆವಂಟ್ ಪಾಕಿಸ್ತಾನದ ಸಚಿವರನ್ನು ತಡೆದು ವಾಗ್ದಾಳಿ ನಡೆಸಿದರು. ಪಾಕಿಸ್ತಾನ ಸರಕಾರದ ದೂರಿನ ಹಿನ್ನೆಲೆಯಲ್ಲಿ ತನ್ನ ಟ್ವಿಟರ್ ಖಾತೆಯನ್ನು ಅಮಾನತಿನಲ್ಲಿಡಲಾಗಿದೆ ಎಂದು ಅವರು ಆರೋಪಿಸಿದರು ಎಂದು ‘ಡಾನ್’ ಪತ್ರಿಕೆ ವರದಿ ಮಾಡಿದೆ.ವಾಕ್ ಸ್ವಾತಂತ್ರದ ಬಗ್ಗೆ ಸಚಿವರು ದ್ವಿಮುಖ ಮಾನದಂಡಗಳನ್ನು ಅನುಸರಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

►ಮರ್ಯಮ್ ನವಾಝ್ ಸಂದರ್ಶನ ಮತ್ತೆ ಹಠಾತ್ ಸ್ಥಗಿತ!

ಇಸ್ಲಾಮಾಬಾದ್, ಜು. 12: ಪಾಕಿಸ್ತಾನದಲ್ಲಿ ನಡೆಯುತ್ತಿರುವ ಮಾಧ್ಯಮ ಸೆನ್ಸಾರ್‌ಶಿಪ್‌ನ ಮುಂದುವರಿದ ಭಾಗವಾಗಿ, ಸುದ್ದಿ ಚಾನೆಲ್ ಒಂದರಲ್ಲಿ ಪ್ರಸಾರಗೊಳ್ಳುತ್ತಿದ್ದ ಪಿಎಮ್‌ಎಲ್-ಎನ್ ಪಕ್ಷದ ನಾಯಕಿ ಮರ್ಯಮ್ ನವಾಝ್‌ರ ಸಂದರ್ಶನವು ದಿಢೀರನೆ ನಾಪತ್ತೆಯಾಗಿದೆ.

ಸಂದರ್ಶನ ಆರಂಭಗೊಂಡ ಕೆಲವೇ ನಿಮಿಷಗಳಲ್ಲಿ ಅದನ್ನು ‘ಬಲವಂತ’ವಾಗಿ ನಿಲ್ಲಿಸಲಾಗಿದೆ.‘‘ಹಮ್ ನ್ಯೂಸ್‌ನಲ್ಲಿ ಮರ್ಯಮ್ ಸಂದರ್ಶನ ಆರಂಭಗೊಂಡ ಕೆಲವೇ ನಿಮಿಷಗಳಲ್ಲಿ ಅದನ್ನು ಬಲವಂತವಾಗಿ ನಿಲ್ಲಿಸಲಾಗಿದೆ ಎನ್ನುವುದು ಈಗಷ್ಟೇ ತಿಳಿದುಬಂತು’’ ಎಂದು ‘ಹಮ್ ನ್ಯೂಸ್’ನಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತ ನದೀಮ್ ಮಲಿಕ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News