ಶರೀಫ್‌ರನ್ನು ಜೈಲಿಗೆ ಹಾಕಲು ಬ್ಲಾಕ್‌ಮೇಲ್ ಮಾಡಲಾಗಿತ್ತು ಎಂದ ಪಾಕಿಸ್ತಾನ ನ್ಯಾಯಾಧೀಶ ವಜಾ

Update: 2019-07-12 18:52 GMT

 ಇಸ್ಲಾಮಾಬಾದ್, ಜು. 12: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಶರೀಫ್‌ರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲಿಗೆ ಹಾಕುವಂತೆ ತನ್ನನ್ನು ಬ್ಲಾಕ್‌ಮೇಲ್ ಮಾಡಲಾಗಿತ್ತು ಎಂದು ಹೇಳಿದ್ದ ಪಾಕಿಸ್ತಾನದ ಹಿರಿಯ ನ್ಯಾಯಾಧೀಶ ಅರ್ಶಾದ್ ಮಲಿಕ್‌ರನ್ನು ಶುಕ್ರವಾರ ವಜಾಗೊಳಿಸಲಾಗಿದೆ ಎಂದು ಕಾನೂನು ಸಚಿವಾಲಯ ಹೇಳಿದೆ.

ಅಕೌಂಟಬಿಲಿಟಿ ನ್ಯಾಯಾಲಯದ ನ್ಯಾಯಾಧೀಶರು ವಜಾಗೊಂಡ ಬೆನ್ನಿಗೇ, ನವಾಝ್ ಶರೀಫ್‌ರನ್ನು ತಕ್ಷಣ ಬಿಡುಗಡೆ ಮಾಡುವಂತೆ ಅವರ ಪಕ್ಷ ಪಿಎಮ್‌ಎಲ್-ಎನ್ ಕರೆ ನೀಡಿದೆ.

ಶರೀಫ್ ಭ್ರಷ್ಟಾಚಾರ ಪ್ರಕರಣದಲ್ಲಿ ಏಳು ವರ್ಷಗಳ ಜೈಲು ಶಿಕ್ಷೆಯನ್ನು ಅನಭವಿಸುತ್ತಿದ್ದಾರೆ.

‘‘ನವಾಝ್ ಶರೀಫ್ ವಿರುದ್ಧದ ತೀರ್ಪನ್ನು ರದ್ದುಪಡಿಸಬೇಕು ಹಾಗೂ ಅವರನ್ನು ತಕ್ಷಣ ಬಿಡುಗಡೆಗೊಳಿಸಬೇಕು’’ ಎಂದು ಪಕ್ಷದ ವಕ್ತಾರೆ ಮರಿಯಮ್ ಔರಂಗಜೇಬ್ ಒತ್ತಾಯಿಸಿದ್ದಾರೆ. ಶರೀಫ್‌ರ ದೋಷಿತ್ವವನ್ನು ‘ಶೂನ್ಯ’ ಎಂದು ಪರಿಗಣಿಸಬೇಕು ಎಂದು ಅವರು ಹೇಳಿದ್ದಾರೆ.

ಸೌದಿ ಅರೇಬಿಯದಲ್ಲಿ ಉಕ್ಕು ಕಾರ್ಖಾನೆಯೊಂದರ ಮಾಲೀಕತ್ವ ಪಡೆಯಲು ಬಳಸಲಾದ ಹಣದ ಆದಾಯ ಮೂಲವನ್ನು ಸಾಬೀತುಪಡಿಸಲು ಶರೀಫ್ ವಿಫಲರಾಗಿದ್ದಾರೆ ಎಂದು ಪರಿಗಣಿಸಿ ಅವರಿಗೆ ಕಳೆದ ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.

ಈಗ, ನ್ಯಾಯಾಧೀಶರನ್ನು ವಜಾ ಮಾಡುವಂತೆ ಇಸ್ಲಾಮಾಬಾದ್ ಹೈಕೋರ್ಟ್ ಕಾನೂನು ಸಚಿವಾಲಯಕ್ಕೆ ಸೂಚನೆ ನೀಡಿದೆ.

►ಬ್ಲಾಕ್‌ಮೇಲ್ ಮಾಡಲಾಗಿತ್ತು ಎಂದಿದ್ದ ನ್ಯಾಯಾಧೀಶ

 ಶರೀಫ್ ದೋಷಿ ಎಂದು ತೀರ್ಪು ನೀಡುವಂತೆ ತನ್ನ ಮೇಲೆ ಒತ್ತಡ ಹೇರಲಾಗಿತ್ತು ಹಾಗೂ ವೀಡಿಯೊ ತುಣುಕೊಂದನ್ನು ತೋರಿಸಿ ತನ್ನನ್ನು ಬ್ಲಾಕ್‌ಮೇಲ್ ಮಾಡಲಾಗಿತ್ತು ಎಂಬುದಾಗಿ ಅಕೌಂಟಬಿಲಿಟಿ ನ್ಯಾಯಾಲಯದ ನ್ಯಾಯಾಧೀಶ ಅರ್ಶದ್ ಮಲಿಕ್ ಹೇಳುವುದನ್ನು ತೋರಿಸುವ ವೀಡಿಯೊವೊಂದನ್ನು ಪಿಎಂಎಲ್-ಎನ್ ನಾಯಕರು ಕಳೆದ ವಾರ ಬಿಡುಗಡೆ ಮಾಡಿದ್ದರು.

ಆದರೆ, ಬಳಿಕ ಮಲಿಕ್ ಹೇಳಿಕೆಯೊಂದನ್ನು ನೀಡಿ, ತನ್ನನ್ನು ಬ್ಲಾಕ್‌ಮೇಲ್ ಮಾಡಲಾಗಿತ್ತು ಎಂಬುದನ್ನು ನಿರಾಕರಿಸಿದ್ದರು ಹಾಗೂ ವೀಡಿಯೊವನ್ನು ತಿರುಚಲಾಗಿದೆ ಎಂದು ಹೇಳಿದ್ದರು.

ಬಳಿಕ, ಶರೀಫ್ ಪರವಾಗಿ ತೀರ್ಪು ನೀಡುವಂತೆ ಅವರಿಗೆ ನಿಕಟರಾಗಿದ್ದ ವ್ಯಕ್ತಿಗಳು ತನಗೆ ಲಂಚದ ಆಮಿಷ ಒಡ್ಡಿದ್ದಾರೆ ಎಂಬುದಾಗಿ ಅಫಿದಾವಿತ್ ಮೂಲಕ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News