ಬಾಸ್ಕೆಟ್ ಬಾಲ್‌ನಲ್ಲಿ ಹಾಸನದ ಯುವಕನ ಸಾಧನೆ

Update: 2019-07-13 18:31 GMT

ಹಾಸನ, ಜು.13: ಶಿಕ್ಷಣದ ಜೊತೆಯಲ್ಲಿ ಕ್ರೀಡೆಯನ್ನು ಮೈಗೂಡಿಸಿಕೊಂಡಿರುವ ಹಾಸನದ ಯುವಕ ಮನೋಜ್ ಎಂಬವರು ಬಾಸ್ಕೆಟ್ ಬಾಲ್‌ನಲ್ಲಿ ಸಾಧನೆ ಮಾಡಿದ್ದು, 2019ರ ಚೀನಾದಲ್ಲಿ ನಡೆಯುವ ಪೈಭಾ ಅಂಡರ್ 16 ಮೆನ್ಸ್ ವರ್ಲ್ಡ್ ಚಾಂಪಿಯನ್ ಶಿಪ್‌ಗೆ ಕರ್ನಾಟಕದಿಂದ ಆಯ್ಕೆಗೊಂಡಿದ್ದಾರೆ. ಮೊಬೈಲ್ ಕ್ಯಾಂಟಿನ್ ಇಟ್ಟುಕೊಂಡು ಜೀವನ ಸಾಗಿಸುತ್ತಿರುವ ರೂಪಾ ಮಂಜುನಾಥ್ ಎಂಬವರ ಪುತ್ರ ಮನೋಜ್ ಹಾಸನ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ತರಬೇತಿ ಪಡೆಯುತ್ತಿದ್ದರು.

ವರ್ಲ್ಡ್ ಚಾಂಪಿಯನ್ ಶಿಫ್‌ಗೆ ಕರ್ನಾಟಕದಿಂದ ಇಬ್ಬರಲ್ಲಿ ಈತನು ಒಬ್ಬ ಆಯ್ಕೆಗೊಂಡಿರುವುದು ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಹೆಮ್ಮೆಯ ವಿಷಯ.

ಧಾರಾವಾಡದಲ್ಲಿ ಪ್ರಥಮ ಪಿಯುಸಿ ಶಿಕ್ಷಣ ಪಡೆಯುತ್ತಿದ್ದೇನೆ. ನಮ್ಮ ಅಪ್ಪ ನಗರದ ಆರ್.ಸಿ. ರಸ್ತೆಯಲ್ಲಿ ಮೊಬೈಲ್ ಕ್ಯಾಂಟೀನ್ ಇಟ್ಟುಕೊಂಡಿದ್ದಾರೆ. ನನಗೆ ಮೊದಲಿನಿಂದಲೂ ಕ್ರೀಡೆಯಲ್ಲಿ ಆಸಕ್ತಿ ಇತ್ತು. ಜಿಲ್ಲಾ ಕ್ರೀಡಾಂಗಣಕ್ಕೆ ಹೋದಾಗ ಅಲ್ಲಿ ಬಾಸ್ಕೆಟ್ ಬಾಲ್ ಆಡುವ ಕ್ರೀಡಾಪಟುಗಳನ್ನು ನೋಡಿ ನಾನು ಆಡಬೇಕು ಎಂಬ ಆಸೆ ಹುಟ್ಟಿತು. ಇಲ್ಲಿನ ಕೋಚ್ ಸುಬ್ರಹ್ಮಣ್ಯ ಎಂಬವರು ಸಲಹೆ ನೀಡಿದ್ದರು. ನಂತರ ಧಾರವಾಡಕ್ಕೆ ಹೋಗಿ ಉತ್ತಮ ಕೋಚಿಂಗ್ ಪಡೆದಿರುವುದಾಗಿ ಮನೋಜ್ ತಿಳಿಸಿದರು.

ಬಾಸ್ಕೆಟ್ ಬಾಲ್‌ ಕ್ರೀಡೆಯಲ್ಲಿ ರಾಷ್ಟ್ರಮಟ್ಟದ 4 ಹಂತ, 5 ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ, 6 ಬಾರಿ ಜಿಲ್ಲೆಯಲ್ಲಿ ಭಾಗವಹಿಸಿದ್ದೇನೆ. ಜೊತೆಗೆ ನಮ್ಮ ತಂದೆ-ತಾಯಿ ಸಹಕಾರದಿಂದ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತಿದೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.

ಮನೋಜ್ ತಾಯಿ ರೂಪಾ ಮಾತನಾಡಿ, ಬಾಸ್ಕೆಟ್ ಬಾಲ್ ಕ್ರೀಡೆ ನಮಗೆ ಇಷ್ಟವಿರಲಿಲ್ಲ. ಆದರೆ ಮಗನಿಗೆ ಆಸಕ್ತಿ ಇತ್ತು. ಹಠ ಮಾಡಿ ಕಲಿತು ಇಂದು ಸಾಧನೆ ಮಾಡಿರುವುದು ಸಂತೋಷ ತಂದಿದೆ ಎಂದರು.

ಪ್ರಪಂಚದಲ್ಲಿರುವ ಎಲ್ಲ ತಂಡಗಳು ವರ್ಲ್ಡ್ ಚಾಂಪಿಯನ್ ಶಿಪ್‌ಗೆ ಸೆಣಸಾಟ ನಡೆಸಲಿದೆ. ಸಲ್ಪ ಕಠಿಣವಾಗಿದ್ದರೂ ಉತ್ತಮ ಆಟವಾಡುತ್ತೇನೆ. ಈ ಕ್ರೀಡೆಯಲ್ಲಿ ಭಾಗವಹಿಸಲು ಅವಕಾಶ ದೊರಕಿದ್ದು, ಉತ್ತಮ ಆಟವನ್ನು ಪ್ರದರ್ಶಿಸಿ ಗೆಲ್ಲುವ ಗುರಿ ಇಟ್ಟುಕೊಂಡಿದ್ದೇನೆ.
ಮನೋಜ್, ಬಾಸ್ಕೆಟ್ ಬಾಲ್ ಕ್ರೀಡಾಪಟು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News