ನಮ್ಮ ಪೂರ್ವಜರು ಸ್ವಾತಂತ್ರ್ಯ ಹೋರಾಟದಲ್ಲಿ ಗಳಿಸಿದ ಭಾರತ ಇದಲ್ಲ: ಇನ್ಫೋಸಿಸ್ ಸಹಸ್ಥಾಪಕ ನಾರಾಯಣ ಮೂರ್ತಿ

Update: 2019-07-13 18:36 GMT

 ಮುಂಬೈ,ಜು.13: ದೇಶದ ವಿವಿಧ ಭಾಗಗಳಲ್ಲಿ ಇಂದು ನಡೆಯುತ್ತಿರುವುದನ್ನು ನೋಡಿದರೆ ನಾವು,ವಿಶೇಷವಾಗಿ ಯವಜನರು ನಮ್ಮ ಪೂರ್ವಜರು ಸ್ವಾತಂತ್ರ ಹೋರಾಟದಲ್ಲಿ ಪಡೆದುಕೊಂಡಿದ್ದ ಭಾರತ ಇದಲ್ಲ ಎಂದು ಸ್ಪಷ್ಟವಾಗಿ ಹೇಳುವ ಅಗತ್ಯವಿದೆ ಎಂದು ಇನ್ಫೋಸಿಸ್‌ನ ಸಹಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಅವರು ಇಂದಿಲ್ಲಿ ಹೇಳಿದರು.

ಭಾರತೀಯರು ಸಾಮಾನ್ಯವಾಗಿ ಅಗತ್ಯವಿದ್ದಾಗಲೂ ಯಾರನ್ನೂ ಅಸಮಾಧಾನಗೊಳಿಸಲು ಬಯಸುವುದಿಲ್ಲ ಎಂದು ಅವರು ವಿಷಾದಿಸಿದರು.

ಇಲ್ಲಿಯ ಸೇಂಟ್ ಝೇವಿಯರ್ಸ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ಇದು ನಮ್ಮ ಪೂರ್ವಜರ ಚಿಂತನೆಯಲ್ಲಿದ್ದ ಭಾರತವಲ್ಲ ಎಂದು ಹೇಳುವ ಅಗತ್ಯವಿದೆ. ಆದರೆ ನಮ್ಮಲ್ಲಿ ಎಷ್ಟು ಜನರು ಇದನ್ನು ಮಾಡುತ್ತಿದ್ದೇವೆ? ಯಾರೂ ಇಲ್ಲ ಎನ್ನುವುದು ವಿಷಾದಕರ. ಇದೇ ಕಾರಣದಿಂದಾಗಿ ನಮ್ಮ ದೇಶವು ಈ ಸ್ಥಿತಿಗೆ ಬಂದಿದೆ. ತಪ್ಪು ಏನು ಎನ್ನುವುದನ್ನು ಹೇಳುವ ಮೂಲಕ ಯಾರನ್ನೂ ಅಸಮಾಧಾನಗೊಳಿಸಲು ಯಾರೂ ಬಯಸುತ್ತಿಲ್ಲ ಎಂದರು. ತನ್ನ ಮತ್ತು ಇನ್ಫೋಸಿಸ್‌ನ ಮಾಜಿ ಸಿಇಒ ವಿಶಾಲ ಸಿಕ್ಕಾ ನಡುವಿನ ಕಲಹವನ್ನು ಪ್ರಸ್ತಾಪಿಸಿದ ಅವರು,ಸಂಸ್ಥೆಯ ಮುಖ್ಯ ವೌಲ್ಯಗಳನ್ನು ಕಸದ ಬುಟ್ಟಿಗೆ ಎಸೆಯಲಾಗಿದ್ದಾಗ ತಾನು ಮಾತನಾಡಲೇಬೇಕಿತ್ತು ಎಂದು ಸಿಕ್ಕಾ ಹೆಸರನ್ನು ಉಲ್ಲೇಖಿಸದೆ ಹೇಳಿದರು.

ತಾನು ಮಾತನಾಡದಿದ್ದರೆ ತಪ್ಪುಗಳು ಮುಂದುವರಿಯಲು ಅವಕಾಶ ನೀಡಿದಂತಾಗುತ್ತಿತ್ತು. ಸಿಕ್ಕಾ ಅವರ ತನ್ನ ವೇತನದಲ್ಲಿ ಶೇ.55ರಷ್ಟು ಮತ್ತು ಮುಖ್ಯ ನಿರ್ವಹಣಾಧಿಕಾರಿ ಪ್ರವೀಣ ರಾವ್ ಅವರ ವೇತನದಲ್ಲಿ ಶೇ.30ರಷ್ಟು ಏರಿಕೆಯಾಗಿತ್ತು. ಮಧ್ಯಮ ಹಂತದ ಯಾವುದೇ ಉದ್ಯೋಗಿಗೆ ವೇತನವನ್ನು ಹೆಚ್ಚಿಸಿರಲಿಲ್ಲ. ಸೆಕ್ಯೂರಿಟಿ ಗಾರ್ಡ್‌ಗಳಿಗೆ ವೇತನ ಏರಿಕೆ ಅಥವಾ ಓವರ್‌ಟೈಮ್ ಇಲ್ಲದೆ ಒಂದು ದಿನ ಹೆಚ್ಚುವರಿಯಾಗಿ ದುಡಿಯುವಂತೆ ಸೂಚಿಸಲಾಗಿತ್ತು. ಅದು ಸಂಸ್ಥೆಯ ವೌಲ್ಯಗಳ ಗಂಭೀರ ಉಲ್ಲಂಘನೆಯಾಗಿತ್ತು. ಹೀಗಾಗಿ ಆರು ಕಿರಿಯ ಸಹೋದ್ಯೋಗಿಗಳೊಂದಿಗೆ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದ ತನ್ನಂತಹ ಯಾರಾದರೂ ವೌಲ್ಯ ನಾಶದ ವಿರುದ್ಧ ಎದ್ದು ನಿಂತಿರದಿದ್ದರೆ ತಾನು ತನ್ನ ಕರ್ತವ್ಯದಲ್ಲಿ ವಿಫಲನಾಗುತ್ತಿದ್ದೆ ಎಂದು ಮೂರ್ತಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News