ಮೈತ್ರಿ ನಾಯಕರನ್ನು ಭೇಟಿ ಮಾಡಲು ಇಚ್ಛಿಸುವುದಿಲ್ಲ: ಅತೃಪ್ತ ಶಾಸಕರಿಂದ ಮುಂಬೈ ಪೊಲೀಸರಿಗೆ ಪತ್ರ

Update: 2019-07-15 12:14 GMT

ಬೆಂಗಳೂರು, ಜು.15: ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಯಾವುದೆ ವರಿಷ್ಠರನ್ನು ಭೇಟಿ ಮಾಡಲು ಇಚ್ಛಿಸುವುದಿಲ್ಲವೆಂದು ಮುಂಬೈ ಹೊಟೇಲ್‌ನಲ್ಲಿರುವ ಅತೃಪ್ತ ಶಾಸಕರು ಮುಂಬೈ ಪೊಲೀಸರಿಗೆ ಪತ್ರ ಬರೆದು, ಸೂಕ್ತ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ. 

ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಗುಲಾಂ ನಬಿ ಆಝಾದ್ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮುಂಬೈಗೆ ತೆರಳಿ ಅತೃಪ್ತ ಶಾಸಕರನ್ನು ಮನವೊಲಿಸಲು ಪ್ರಯತ್ನಿಸುತ್ತಾರೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ, 'ನಾವು ರಾಜೀನಾಮೆ ಕೊಟ್ಟಿದ್ದೇವೆ, ಇದರಲ್ಲಿ ಯಾವುದೆ ಬದಲಾವಣೆ ಇಲ್ಲ, ಹೀಗಾಗಿ ವರಿಷ್ಠರು ಇಲ್ಲಿಗೆ ಬರುವ ಅಗತ್ಯವಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

ಮುಂಬೈನ ಪೊವಾಯಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್‌ಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿಕೊಂಡಿರುವ 14 ಅತೃಪ್ತ ಶಾಸಕರು, ಯಾವುದೇ ನಾಯಕರನ್ನು ಭೇಟಿ ಮಾಡಲು ಇಚ್ಛಿಸುವುದಿಲ್ಲ. ನಾವು ಕೊಟ್ಟಿರುವ ರಾಜೀನಾಮೆಯನ್ನು ಹಿಂಪಡೆಯದಿರಲು ನಿರ್ಧರಿಸಿದ್ದೇವೆ. ಹೀಗಾಗಿ ಕಾಂಗ್ರೆಸ್ ನಾಯಕರಿಂದ ನಮಗೆ ಬೆದರಿಕೆ ಇದೆ. ಆದ್ದರಿಂದ, ನಮ್ಮ ಭೇಟಿಗೆ ಯಾರಿಗೂ ಅವಕಾಶ ಕೊಡಬಾರದು ಎಂದು ಅವರು ವಿವರಿಸಿದ್ದಾರೆ. ಈ ಸಂಬಂಧ ಅತೃಪ್ತ ಶಾಸಕರು ವಾಸ್ತವ್ಯ ಹೂಡಿರುವ ಹೊಟೇಲ್‌ನ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News