ವಿಷ ಮಿಶ್ರಿತ ನೀರು ಸೇವಿಸಿ 12 ವಿದ್ಯಾರ್ಥಿಗಳು ಅಸ್ವಸ್ಥ

Update: 2019-07-15 13:11 GMT

ಮಂಡ್ಯ, ಜು.15: ಕ್ರಿಮಿನಾಶಕ ಮಿಶ್ರಿತ ನೀರು ಸೇವಿಸಿದ 12 ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ತಾಲೂಕಿನ ಎ.ಹುಲ್ಲುಕೆರೆ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.

ಗ್ರಾಮದ ಸರಕಾರಿ ಪ್ರೌಢಶಾಲೆಯ ವಿನಯ್, ಶಿವಲಿಂಗ, ಯಶವಂತ್, ಧನುಷ್, ದರ್ಶನ್, ತೇಜ, ಮಯೂರ್‍ಗೌಡ, ಪ್ರಜ್ವಲ್, ನಿಶಾ, ಚಂದ್ರು ಹಾಗೂ ಸೋಮಶೇಖರ್ ಅಸ್ವಸ್ಥಗೊಂಡಿದ್ದಾರೆ.

ಬೆಳಗ್ಗೆ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳು ನೀರನ್ನು ಕುಡಿದ ತಕ್ಷಣ ತೀವ್ರ ಅಸ್ವಸ್ಥಗೊಂಡಿದ್ದು, ಕೂಡಲೇ ಸಮೀಪದ ಕೊತ್ತತ್ತಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಯಿತು.

ನಂತರ ಎಲ್ಲಾ ವಿದ್ಯಾರ್ಥಿಗಳನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಯಿತು. ಚಂದ್ರು, ಸೋಮಶೇಖರ್ ಎಂಬ ವಿದ್ಯಾರ್ಥಿಗಳ ಪರಿಸ್ಥಿತಿ ಗಂಭೀರವಾಗಿದ್ದು, ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.

ದುಷ್ಕರ್ಮಿಗಳು ಶಾಲೆಯ ಕುಡಿಯುವ ನೀರಿನ ಟ್ಯಾಂಕ್‍ಗೆ ಕ್ರಿಮಿನಾಶಕ ಔಷಧಿ ಮಿಶ್ರಣ ಮಾಡಿದ್ದಾರೆನ್ನಲಾಗಿದೆ. ಸ್ಥಳಕ್ಕೆ ಶ್ವಾನದಳದೊಂದಿಗೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದರು.

ವಿಷಯ ತಿಳಿದ ತಕ್ಷಣ ಜಿಲ್ಲಾಸ್ಪತ್ರೆ ಮಿಮ್ಸ್‍ಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಾಗರತ್ನ ಸ್ವಾಮಿ ಹಾಗೂ ಜಿಪಂ ಸದಸ್ಯ ರಾಮಲಿಂಗಯ್ಯ ಆತಂಕಗೊಂಡಿದ್ದ ಪೋಷಕರನ್ನು ಸಮಾಧಾನಿಸಿದರು. 

ಆಸ್ಪತ್ರೆಗೆ ಭೇಟಿ ನೀಡಿದ ಎಎಸ್ಪಿ ಬಲರಾಮೇಗೌಡರು ಮಕ್ಕಳಿಂದ ಮಾಹಿತಿ ಪಡೆದರು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News