ಜು.18ರಂದು ನಿರ್ಧಾರವಾಗಲಿದೆ ರಾಜ್ಯ ಸರಕಾರದ ಭವಿಷ್ಯ

Update: 2019-07-15 13:21 GMT

ಬೆಂಗಳೂರು, ಜು.15: ಮೈತ್ರಿಪಕ್ಷಗಳ ಶಾಸಕರ ರಾಜೀನಾಮೆ ಪರ್ವ, ಮುಂಬೈನಲ್ಲಿ ಅತೃಪ್ತ ಶಾಸಕರ ವಾಸ್ತವ್ಯ, ಉಳಿದ ಶಾಸಕರ ರಕ್ಷಣೆಗಾಗಿ ಮತ್ತೊಮ್ಮೆ ರೆಸಾರ್ಟ್‌ಗಳ ಮೊರೆ ಹೋದ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು. ಈ ಎಲ್ಲ ಬೆಳವಣಿಗೆಗಳ ನಡುವೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರದ ಭವಿಷ್ಯ ಜು.18ರಂದು ನಿರ್ಧಾರವಾಗಲಿದೆ.

ಈಗಾಗಲೇ ವಿಶ್ವಾಸಮತ ಯಾಚನೆಗೆ ಸಿದ್ಧವಿರುವುದಾಗಿ ಮುಖ್ಯಮಂತ್ರಿ ಪ್ರಕಟಿಸಿರುವ ಹಿನ್ನೆಲೆಯಲ್ಲಿ, ಎಲ್ಲರ ಕಣ್ಣು ಇದೀಗ ಜು.18ರಂದು ಬೆಳಗ್ಗೆ 11 ಗಂಟೆಗೆ ವಿಧಾನಸಭೆಯಲ್ಲಿ ಕುಮಾರಸ್ವಾಮಿ ಯಾಚಿಸಲಿರುವ ವಿಶ್ವಾಸಮತ ಯಾಚನೆಯ ಪ್ರಕ್ರಿಯೆ ಮೇಲೆ ನೆಟ್ಟಿದೆ. ರಾಜ್ಯ ಸರಕಾರವನ್ನು ಉಳಿಸಿಕೊಳ್ಳಲು ಮುಖ್ಯಮಂತ್ರಿ ಹಾಗೂ ಮೈತ್ರಿ ಪಕ್ಷಗಳ ನಾಯಕರಿಗೆ ಇನ್ನು ಎರಡು ದಿನಗಳ ಕಾಲಾವಕಾಶ ಸಿಕ್ಕಿರುವುದು, ಆಡಳಿತ ಪಕ್ಷಗಳ ಮತ್ತಷ್ಟು ಶಕ್ತಿ ಸಿಕ್ಕಿದಂತಾಗಿದೆ. ಮುಂಬೈನಲ್ಲಿ ವಾಸ್ತವ್ಯ ಹೂಡಿರುವ ಅತೃಪ್ತ ಶಾಸಕರ ಜೊತೆ ಕೊನೆ ಹಂತದ ಮಾತುಕತೆ ನಡೆಸಲು ಮಾಜಿ ಸಿಎಂ ಸಿದ್ದರಾಮಯ್ಯಗೆ ಜವಾಬ್ದಾರಿ ವಹಿಸಲಾಗಿದೆ ಎನ್ನಲಾಗಿದೆ. ಇಂದು ಸದನಕ್ಕೆ ಆಗಮಿಸುವ ಮುನ್ನ ಕುಮಾರಸ್ವಾಮಿ, ಪದ್ಮನಾಭನಗರದಲ್ಲಿರುವ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ನಿವಾಸಕ್ಕೆ ತೆರಳಿ ಅವರ ಜೊತೆ ಮುಂದಿನ ರಾಜಕೀಯ ವಿದ್ಯಾಮಾನಗಳ ಕುರಿತು ಚರ್ಚೆ ನಡೆಸಿದರು. ಅಲ್ಲಿಂದ ವಿಧಾನಸೌಧಕ್ಕೆ ಆಗಮಿಸಿ ಕಲಾಪ ಸಲಹಾ ಸಮಿತಿಯಲ್ಲಿ ವಿಶ್ವಾಸಮತ ಯಾಚನೆಗೆ ಸಮಯ ನಿಗದಿಗೊಳಿಸುವಂತೆ ಸ್ಪೀಕರ್‌ಗೆ ಮನವಿ ಮಾಡಿದರು.

ತಮ್ಮ ರಾಜೀನಾಮೆಗಳನ್ನು ಅಂಗೀಕರಿಸುವಂತೆ ಸ್ಪೀಕರ್‌ಗೆ ನಿರ್ದೇಶನ ನೀಡುವಂತೆ ಕೋರಿ ಅತೃಪ್ತ ಶಾಸಕರು ಸಲ್ಲಿಸಿರುವ ಅರ್ಜಿಯ ವಿಚಾರಣೆಯು ಮಂಗಳವಾರ ಸುಪ್ರೀಂಕೋರ್ಟ್‌ನಲ್ಲಿ ನಡೆಯಲಿದೆ. ಅದರಂತೆ, ಅತೃಪ್ತ ಶಾಸಕರ ರಾಜಕೀಯ ಭವಿಷ್ಯವು ಮಂಗಳವಾರ ನಿರ್ಧಾರವಾಗಲಿದೆ.

ಅತೃಪ್ತ ಶಾಸಕರ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನ ತೀರ್ಪು ಬರುವ ಮುನ್ನವೇ ವಿಶ್ವಾಸ ಮತ ಯಾಚಿಸುವುದು ಸರಿಯಲ್ಲ ಎಂದು, ಗುರುವಾರಕ್ಕೆ ಅವಕಾಶ ಕಲ್ಪಿಸಿಕೊಡುವಂತೆ ಮುಖ್ಯಮಂತ್ರಿ ಸ್ಪೀಕರ್‌ಗೆ ನೋಟಿಸ್ ನೀಡಿ ಮನವಿ ಮಾಡಿದ್ದರು.

ಜಿ.ಟಿ.ದೇವೇಗೌಡ-ಬಿಜೆಪಿ ನಾಯಕರ ಚರ್ಚೆ: ವಿಶ್ವಾಸಮತ ಯಾಚನೆಗೆ ಸಮಯ ನಿಗದಿಗೊಳಿಸುವ ಕುರಿತು ಒಂದೆಡೆ ಸ್ಪೀಕರ್ ಅಧ್ಯಕ್ಷತೆಯಲ್ಲಿ ಕಲಾಪ ಸಲಹಾ ಸಮಿತಿ ಸಭೆ ನಡೆಯುತ್ತಿದ್ದರೆ, ಇತ್ತ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಸದನ ಕಲಾಪ ಆರಂಭಗೊಳ್ಳುವ ಮುನ್ನ ಬಿಜೆಪಿ ನಾಯಕರಾದ ಬಿ.ಶ್ರೀರಾಮುಲು, ಎಸ್.ಆರ್.ವಿಶ್ವನಾಥ್ ಸೇರಿದಂತೆ ಇನ್ನಿತರ ಜೊತೆ ಕೈ ಕುಲುಕಿಕೊಂಡು ಉಭಯ ಕುಶಲೋಪರಿ ನಡೆಸುವ ಮೂಲಕ ಅಚ್ಚರಿ ಮೂಡಿಸಿದರು.

ಅಲ್ಲದೆ, ಸಾಮಾಜಿಕ ಜಾಲ ತಾಣಗಳಲ್ಲಿ ಅಪ್ಪ-ಮಕ್ಕಳ ಜೆಡಿಎಸ್ ಪಕ್ಷವನ್ನು ತೊರೆದು ಬಿಜೆಪಿಗೆ ಮರಳಿ ಬರುತ್ತಿರುವ ಸಚಿವ ಜಿ.ಟಿ.ದೇವೇಗೌಡ ಅವರಿಗೆ ಸ್ವಾಗತ. ‘ಕಮ್ ಬ್ಯಾಕ್ ಜಿಟಿಡಿ’, ನಮ್ಮ ದೇಶದ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಜೀ ದೇಶಕ್ಕೆ ನೀಡುತ್ತಿರುವ ಅಪಾರ ಯೋಜನೆಗಳನ್ನು ಇಷ್ಟಪಟ್ಟು ಬಿಜೆಪಿಗೆ ಸೇರುತ್ತಿರುವ ಜಿಟಿಡಿ ಅವರಿಗೆ ಸುಸ್ವಾಗತ ಎಂದು ಆರಂಭಿಸಿರುವ ಅಭಿಯಾನ ವೈರಲ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News