ಮೊಬೈಲ್‍ಗೆ ಆ್ಯಪ್ ಡೌನ್‍ಲೋಡ್ ಮಾಡಿ 80 ಸಾವಿರ ರೂ. ಕಳೆದುಕೊಂಡ ವರ್ತಕ !

Update: 2019-07-15 13:39 GMT

ಶಿವಮೊಗ್ಗ, ಜು. 15: ಮೊಬೈಲ್‍ಗೆ ಕರೆನ್ಸಿ ರೀಚಾರ್ಜ್ ವೇಳೆ ಕೈತಪ್ಪಿ ಹೋದ ಹಣವನ್ನು ಹಿಂದಿರುಗಿ ಪಡೆಯಲು, ಕಸ್ಟಮರ್ ಕೇರ್ ಪ್ರತಿನಿಧಿಯ ಸಲಹೆಯಂತೆ ಡೌನ್‍ಲೋಡ್ ಮಾಡಿಕೊಂಡ ಮೊಬೈಲ್ ಆ್ಯಪ್‍ನಿಂದ ವರ್ತಕರೋರ್ವರು ಸಾವಿರಾರು ಕಳೆದುಕೊಂಡ ಕುತೂಹಲಕಾರಿ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ. 

ಗಾಂಧಿಬಜಾರ್ ರಸ್ತೆಯ ಕೊಟೇಚಾ ಸ್ಟೋರ್ ಮಾಲಕ ಲಲಿತ್ ಕೊಟೇಚಾ ವಂಚನೆಗೊಳಗಾದವರೆಂದು ಗುರುತಿಸಲಾಗಿದೆ. ಇವರ ಬ್ಯಾಂಕ್ ಖಾತೆಯಿಂದ 80 ಸಾವಿರ ರೂ.ಗಳನ್ನು ಆನ್‍ಲೈನ್ ವಂಚಕರು ಅಪಹರಿಸಿದ್ದಾರೆ. ಈ ಸಂಬಂಧ ಅವರು ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 

ವಂಚನೆಯ ಹಿನ್ನೆಲೆ: ಜು.13 ರಂದು ಲಲಿತ್ ಕೊಟೇಚಾರವರು ತಮ್ಮ ಮೊಬೈಲ್‍ಗೆ ಆನ್‍ಲೈನ್ ಮೂಲಕ ಕರೆನ್ಸಿ ರೀಚಾರ್ಜ್ ಮಾಡಲು ಮುಂದಾಗಿದ್ದಾರೆ. ಆದರೆ ರೀಚಾರ್ಜ್ ಆಗಿಲ್ಲ. ಈ ಕಾರಣದಿಂದ ಅವರು ಕಸ್ಟಮರ್ ಕೇರ್ ನಂಬರೊಂದಕ್ಕೆ ಕರೆ ಮಾಡಿದ್ದಾರೆ. ಮೊಬೈಲ್‍ಗೆ ಕರೆನ್ಸಿ ರೀಚಾರ್ಜ್ ಆಗದ ಕಾರಣ, ಹಣವನ್ನು ತಮ್ಮ ಖಾತೆಗೆ ಹಿಂದಿರುಗಿಸುವಂತೆ ಮನವಿ ಮಾಡಿದ್ದಾರೆ. 

ಈ ವೇಳೆ ಕಸ್ಟಮರ್ ಕೇರ್ ಪ್ರತಿನಿಧಿಯು 'ಎನೀ ಡೆಸ್ಕ್' ಆ್ಯಪ್‍ ಅನ್ನು ಮೊಬೈಲ್‍ಗೆ ಇನ್‍ಸ್ಟಾಲ್ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ. ಅದರಂತೆ ಆ ಆ್ಯಪ್‍ಅನ್ನು ಡೌನ್‍ಲೋಡ್ ಮಾಡಿಕೊಂಡಿದ್ದಾರೆ. ಈ ವೇಳೆ ಮೊಬೈಲ್‍ಗೆ ಬಂದ ಮೆಸೇಜ್ ತಮಗೆ ಫಾರ್ವರ್ಡ್ ಮಾಡುವಂತೆ ಕಸ್ಟಮರ್ ಕೇರ್ ಪ್ರತಿನಿಧಿ ಸೂಚಿಸಿದ್ದು, ಅದರಂತೆ ಲಲಿತ್‍ರವರು ಮೆಸೇಜ್‍ನ್ನು ಫಾರ್ವರ್ಡ್‍ಗೊಳಿಸಿದ್ದಾರೆ. 

ತಕ್ಷಣವೇ ಲಲಿತ್‍ರವರ ಆಕ್ಸಿಸ್ ಬ್ಯಾಂಕ್ ಖಾತೆಯಿಂದ 80 ಸಾವಿರ ರೂ. ಡ್ರಾ ಮಾಡಿಕೊಂಡು ವಂಚಿಸಲಾಗಿದೆ. ಈ ಸಂಬಂಧ ಅವರು ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News