ಸಿಎಂ ಅನಿವಾರ್ಯವಾಗಿ ವಿಶ್ವಾಸಮತ ಯಾಚನೆಗೆ ನಿರ್ಧರಿಸಿದ್ದಾರೆ: ಯಡಿಯೂರಪ್ಪ

Update: 2019-07-15 14:24 GMT

ಬೆಂಗಳೂರು, ಜು. 15: ರಾಜ್ಯದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅನಿವಾರ್ಯವಾಗಿ ವಿಶ್ವಾಸಮತ ಯಾಚನೆ ಮಾಡುತ್ತೇವೆಂದು ಹೇಳಿದ್ದಾರೆ ಎಂದು ವಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ಸೋಮವಾರ ಅಧಿವೇಶನ ಕಲಾಪದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಅವಿಶ್ವಾಸ ನಿರ್ಣಯ ಕುರಿತ ಪ್ರಸ್ತಾವವನ್ನು ಬಿಜೆಪಿ ಮುಂದಿಡುತ್ತಿದ್ದಂತೆ ಅನಿವಾರ್ಯವಾಗಿ ನಾವೇ ವಿಶ್ವಾಸಮತ ಯಾಚಿಸುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದರು.

ಹೀಗಾಗಿ ಸ್ಪೀಕರ್ ರಮೇಶ್‌ಕುಮಾರ್ ಅವರು ಗುರುವಾರ (ಜು.18)ಕ್ಕೆ ದಿನಾಂಕ ನಿಗದಿ ಮಾಡಿದರು. ಕಲಾಪ ಸಲಹಾ ಸಮಿತಿ ಸಭೆಯ ಸೌಹಾರ್ದಯುತ ಮಾತುಕತೆ ನಡೆಯಿತು. ಈ ವೇಳೆ ವಿಶ್ವಾಸಮತವನ್ನು ಮೊದಲನೇ ದಿನವೇ ಕೇಳುತ್ತಿದ್ದೇವೆ. ವಿಶ್ವಾಸವಿಲ್ಲದೆ ಸದನ ಮುನ್ನಡೆಸಬಾರದೆಂದೇ ಅಂದು ಸಲಹಾ ಸಮಿತಿ ಸಭೆ ಕರೆಯಲಾಗಿತ್ತು ಎಂದು ತಿಳಿಸಿದರು.

ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಮುಗಿಯುವವರೆಗೆ ಯಾವುದೇ ಕಲಾಪವನ್ನು ನಡೆಸುವುದು ಬೇಡ ಎಂದು ಸ್ಪೀಕರ್‌ಗೆ ನಾವು ಮನವಿ ಮಾಡಿದ್ದೆವು. ಆದುದರಿಂದ ಸ್ಪೀಕರ್ ಕಲಾಪವನ್ನು ಗುರುವಾರಕ್ಕೆ ಸಮಯ ನಿಗದಿ ಮಾಡಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.

ಸಂಬಂಧವಿಲ್ಲ: ಸಿಎಂ ವಿಶ್ವಾಸಮತ ಯಾಚನೆಗೂ, ಅತೃಪ್ತರ ಮನವೊಲಿಕೆಗೂ ಯಾವುದೇ ಸಂಬಂಧವಿಲ್ಲ. ಇನ್ನು ಎರಡು ದಿನ ನಮ್ಮ ಪಕ್ಷದ ಎಲ್ಲ ಶಾಸಕರು ರೆಸಾರ್ಟ್‌ನಲ್ಲಿ ಇರಲಿದ್ದಾರೆ. ನಾವೆಲ್ಲರೂ ಈಗ ರೆಸಾರ್ಟ್‌ಗೆ ತೆರಳುತ್ತಿದ್ದೇವೆ ಎಂದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಅವರು ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News