ಸರಕಾರದ ದುಸ್ಥಿತಿಗೆ ಕುಮಾರಸ್ವಾಮಿ, ರೇವಣ್ಣ ಕಾರಣ: ಚಲುವರಾಯಸ್ವಾಮಿ, ಎಚ್.ಸಿ.ಬಾಲಕೃಷ್ಣ ಆರೋಪ

Update: 2019-07-15 16:46 GMT

ಮಂಡ್ಯ, ಜು.15: ಮೈತ್ರಿ ಸರಕಾರದ ಇಂದಿನ ದುಸ್ಥಿತಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಸಚಿವ ಎಚ್.ಡಿ.ರೇವಣ್ಣ ಕಾರಣ ಎಂದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಆರೋಪಿಸಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಜಪೇಯಿ 26 ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಸರಕಾರ ನಿಭಾಯಿಸಿದರು. ಇವರ ಕೈಯಲ್ಲಿ ಒಂದು ಪಕ್ಷದ ಶಾಸಕರನ್ನು ನಿಭಾಯಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಲೇವಡಿ ಮಾಡಿದರು.

ಜೆಡಿಎಸ್ ಪಕ್ಷ ಬಿಟ್ಟ ಸಂದರ್ಭದಲ್ಲಿ ನಮ್ಮನ್ನು ರೇವಣ್ಣ ಶನಿ ಅಂದಿದ್ದರು. ನಿಜವಾದ ಶನಿ ಯಾರು ಎಂಬುದು ಈಗ ಗೊತ್ತಾಗಿದೆ ಎಂದು ರೇವಣ್ಣ ಅವರಿಗೆ ಬಾಲಕೃಷ್ಣ ತಿರುಗೇಟು ನೀಡಿದರು.

ಇಂದಿನ ಈ ಸ್ಥಿತಿಗೆ ರೇವಣ್ಣ ಒಬ್ಬರೇ ಕಾರಣವಲ್ಲ, ಮುಖ್ಯಮಂತ್ರಿಗಳೂ ಕಾರಣ. ರೇವಣ್ಣ ಅವರನ್ನೇ ಸಚಿವ ಸ್ಥಾನದಿಂದ ಹೊರಗಿಟ್ಟು ಸರಕಾರ ನಡೆಸಬಹುದಿತ್ತು ಎಂದು ಚಲುವರಾಯಸ್ವಾಮಿ ದೂರಿದರು. ಅಂತಿಮವಾಗಿ ಫೈಲ್‍ಗಳಿಗೆ ಸಹಿ ಹಾಕುವವರು, ನಿರ್ಧಾರ ತೆಗೆದುಕೊಳ್ಳುವವರು ಸಿಎಂ ಕುಮಾರಸ್ವಾಮಿ ತಾನೆ? ಎಂದು ಪ್ರಶ್ನಿಸಿದ ಅವರು, ಆದ್ದರಿಂದ ಇದರ ಹೊಣೆಯನ್ನು ಕುಮಾರಸ್ವಾಮಿ ಹೊರಬೇಕು ಎಂದರು.

ನಾವು ಏಳು ಜನ ತಪ್ಪು ಮಾಡಿ ಜೆಡಿಎಸ್ ಪಕ್ಷ ಬಿಟ್ಟು ಬರಲಿಲ್ಲ. ಇವತ್ತು ನಾರಾಯಣಗೌಡ ಪಕ್ಷ ಬಿಟ್ಟು ಬಂದು ಮಾತನಾಡುತ್ತಿದ್ದಾರೆ, ಅದೇ ಸ್ಥಿತಿ ಸಚಿವ ಪುಟ್ಟರಾಜುಗೂ ಬರಬಹುದು ಎಂದ ಅವರು, ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಲು ತೋರುತ್ತಿರುವ ಕಾಳಜಿಯಷ್ಟೇ ಮಂಡ್ಯ ಜಿಲ್ಲೆ ಜನರ ಬಗೆಗೂ ತೋರಬೇಕು. ಒಣಗುತ್ತಿರುವ ಬೆಳೆಗಳಿಗೆ ಕೂಡಲೇ ನಾಲೆಗಳಿಗೆ ಹರಿಸಬೇಕು ಎಂದು ಅವರು ಒತ್ತಾಯಿಸಿದರು.

ಬೆಳೆಗಳಿಗೆ ನೀರಿಗಾಗಿ ರೈತರು ಹೋರಾಟ ಮಾಡುತ್ತಿದ್ದಾರೆ. ಆದರೆ, ಮುಖ್ಯಮಂತ್ರಿ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಕಡೆಗೆ ಬೆಟ್ಟುಮಾಡಿ ತಮ್ಮ ಜವಾಬ್ಧಾರಿಯಿಂದ ನುಣಿಚಿಕೊಳ್ಳುತ್ತಿದ್ದಾರೆ. ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಚಲುವರಾಯಸ್ವಾಮಿ ಟೀಕಿಸಿದರು.

ಶಾಸಕರ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈ ರೀತಿಯ ರಾಜಕಾರಣ ಎಂದೂ ನೋಡಿಲ್ಲ, ಮುಂದೆ ನೋಡುವ ಪರಿಸ್ಥಿತಿ ಬರೋದು ಬೇಡ. ಕೋರ್ಟ್ ತೀರ್ಪಿದೆ. ಆನಂತರ ಏನಾಗುತ್ತೆ ನೋಡೋಣ ಎಂದರು.

ಮಾಜಿ ಶಾಸಕ ಎಚ್.ಬಿ.ರಾಮು, ತಾಪಂ ಮಾಜಿ ಅಧ್ಯಕ್ಷ ತ್ಯಾಗರಾಜು ಹಾಗೂ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News