ಶಾಸಕರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ, ಉಗುಳುವ ಚಳವಳಿ ನಡೆಸಿದ ರೈತರು

Update: 2019-07-15 17:10 GMT

ದಾವಣಗೆರೆ, ಜು.15: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ 15 ಕಾಂಗ್ರೆಸ್-ಜೆಡಿಎಸ್ ಶಾಸಕರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ, ಅಡಿಕೆ-ಎಲೆ ಜಗಿದು ಭಾವಚಿತ್ರಗಳ ಮೇಲೆ ಉಗುಳುವ ಮೂಲಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ಛೀ..ಥೂ... ಚಳವಳಿ ನಡೆಸಲಾಯಿತು. 

ನಗರದ ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣದ ಬಳಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಜಿಲ್ಲಾ ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. 

ಇದೇ ವೇಳೆ ಮಾತನಾಡಿದ ಸಂಘದ ಮುಖಂಡ ಚನ್ನಬಸಪ್ಪ ಮಲ್ಲಶೆಟ್ಟಿಹಳ್ಳಿ,  ರಾಜ್ಯದ ಜನತೆ ಕ್ಷೇತ್ರಗಳ ಅಭಿವೃದ್ಧಿ, ಜನರ ಆಶೋತ್ತರಕ್ಕೆ ಸ್ಪಂದಿಸಲಿ ಎಂಬ ಸದುದ್ದೇಶದಿಂದ ವಿಧಾನಸಭೆಗೆ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ. ಆದರೆ, ಸರ್ಕಾರದ ಮಟ್ಟದಲ್ಲಿ ತಮ್ಮ ಕ್ಷೇತ್ರದ ಅಭಿವೃದ್ಧಿಗೆ, ಜನರ ಶ್ರೇಯೋಭಿವೃದ್ಧಿಗೆ ಕೆಲಸ ಮಾಡಲಾಗದ ಶಾಸಕರು ಕುಂಟುನೆಪ ಹೇಳಿಕೊಂಡು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಖಂಡನೀಯ ಎಂದರು. 

ಕ್ಷೇತ್ರ, ಜನರ ಕೆಲಸ ಮಾಡುವುದನ್ನು ಬಿಟ್ಟು, ತಮ್ಮ ಸ್ವಾರ್ಥಕ್ಕಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೈತ್ರಿ ಪಕ್ಷಗಳ 15 ಶಾಸಕರ ಭಾವಚಿತ್ರಕ್ಕೂ ಚಪ್ಪಲಿ ಹಾರ ಹಾಕಿ, ಅಡಿಕೆ-ಎಲೆ ಹಾಕಿಕೊಂಡು ಛೀ.. ಥೂ... ಅಂತಾ ಉಗಿಯುತ್ತಿದ್ದೇವೆ. ಕನಿಷ್ಟ ಮಾನ, ಮರ್ಯಾದೆ, ಆತ್ಮಗೌರವ, ಆತ್ಮಸಾಕ್ಷಿ ಎಂಬುದು ಇಂತಹ ಶಾಸಕರುಗಳಿಗೆ ಇದ್ದರೆ ತಮ್ಮ ಜವಾಬ್ಧಾರಿ ಅರಿತು ವರ್ತಿಸಲಿ ಎಂದು ಅವರು ತಾಕೀತು ಮಾಡಿದರು. 

ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸೇರಿದಂತೆ ಯಾವುದೇ ರಾಜಕೀಯ ಪಕ್ಷಗಳಿಗೂ ಶಿಸ್ತು, ಬದ್ಧತೆಯೇ ಇಲ್ಲ. ರಾಜ್ಯದಲ್ಲಿ ತೀವ್ರ ಮಳೆಯ ಅಭಾವ ತಲೆದೋರಿದ್ದು, ಮತ್ತೆ ಬರ ಆವರಿಸುವ ಮುನ್ಸೂಚನೆ ನೀಡುತ್ತಿದೆ. ಈ ಪರಿಸ್ಥಿತಿಯಲ್ಲಿ ಕ್ಷೇತ್ರದ ಜನರು, ರೈತಾಪಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಶಾಸಕರು ವಿಮಾನ ಹಾರಾಟ, ಐಷಾರಾಮಿ ತಾರಾ ಹೊಟೆಲ್, ರೆಸಾರ್ಟ್‍ಗಳಲ್ಲಿ ಕಾಲಹರಣ ಮಾಡುತ್ತಾ, ರಾಜಕೀಯ ಪ್ರಹಸನ ನಡೆಸಿದ್ದಾರೆ ಎಂದು ಅವರು ದೂರಿದರು. 

ತಾರಾ ಹೊಟೆಲ್‍ಗಳು, ರೆಸಾರ್ಟ್‍ನಲ್ಲಿ ಮೋಜು ಮಸ್ತಿ ಮಾಡುವ ಮೂಲಕ ಜೀವನ ಸಾಗಿಸುತ್ತಿರುವ ಇಂತಹ ರಾಜಕೀಯ ಪಕ್ಷಗಳಿಂದಾಗಲೀ, ರಾಜಕೀಯ ನಾಯಕರಿಂದಾಗಲಿ, ಸಚಿವ, ಶಾಸಕರಿಂದಾಗಲಿ ರಾಜ್ಯ, ಕ್ಷೇತ್ರ, ಜನರ ಅಭಿವೃದ್ಧಿ ಅಸಾಧ್ಯ. ಮೂರೂ ಪಕ್ಷಗಳ ಜನ ಪ್ರತಿನಿಧಿಗಳು ತಮ್ಮ ಕರ್ತವ್ಯವವನ್ನೇ ಮರೆತು, ರಾಜಕೀಯ ಬೇಳೆ ಬೇಯಿಸಿಕೊಳ್ಳಲು ರಾಜೀನಾಮೆಯ ನಾಟಕವನ್ನಾಡುತ್ತಿದ್ದಾರೆ. ಇಂತಹವರನ್ನು ಯಾವುದೇ ಕಾರಣಕ್ಕೂ ಜನತೆ ಕ್ಷಮಿಸಲಾರರು ಅವರು ಹೇಳಿದರು. 

ಹೀಗೆ ರಾಜೀನಾಮೆ ಕೊಟ್ಟಿರುವ ಶಾಸಕರು ತಮ್ಮ ಕ್ಷೇತ್ರದ ಜನರಿಗಾಗಿ, ರೈತರ ಸಂಕಷ್ಟಗಳ ಪರಿಹಾರಕ್ಕಾಗಲಿ, ಕ್ಷೇತ್ರದ ಅಭಿವೃದ್ಧಿಗಾಗಲಿ, ಬರ ನಿರ್ವಹಣೆ ಕೈಗೊಳ್ಳುವಂತಾಗಲೀ ಒತ್ತಾಯಿಸಿ ರಾಜೀನಾಮೆ ನೀಡಿಲ್ಲ. ತಮ್ಮ ಸ್ವಾರ್ಥ ಸಾಧನೆಗಾಗಿ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ದೇಶದ ಮುಂದೆ ರಾಜ್ಯದ ಜನತೆ ತಲೆ ತಗ್ಗಿಸುವಂತಹ ವಾತಾವರಣವನ್ನು ಈ ಶಾಸಕರು ಮಾಡಿದ್ದಾರೆ. ಪ್ರಜಾಪ್ರಭುತ್ವದ ವಿರುದ್ಧವಾಗಿ ನಡೆದುಕೊಂಡ ಇಂತಹ ಶಾಸಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು. 

ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ 15 ಶಾಸಕರ ರಾಜೀನಾಮೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಮಧ್ಯಂತರ ಚುನಾವಣೆಯನ್ನು ಘೋಷಿಸಬೇಕು. ಚುನಾವಣೆಯಲ್ಲಿ ರೈತರ ಪರ ಕೆಲಸ ಮಾಡುವ ಪ್ರಾಮಾಣಿಕ ಬದ್ಧತೆ, ಕಾಳಜಿ ಇರುವಂತಹ ಯೋಗ್ಯರನ್ನು ಶಾಸಕರನ್ನಾಗಿ ಆಯ್ಕೆ ಮಾಡುವತ್ತ ರಾಜ್ಯದ ಜನತೆಗೂ ಗಮನ ಹರಿಸಬೇಕು ಎಂದು ಸಂಘಟನೆ ಮುಖಂಡರು ಮನವಿ ಮಾಡಿದರು. 

ಸಂಘಟನೆ ಮುಖಂಡರಾದ ದೊಡ್ಡೇರಿ ಬಸವರಾಜಪ್ಪ, ಚಿಕ್ಕನಹಳ್ಳಿ ಮಲ್ಲೇಶಪ್ಪ, ಕಲೀಂವುಲ್ಲಾ, ಕಾಳೇಶ, ಗೋಶಾಲೆ ಬಸವರಾಜ, ಅಣ್ಣಪ್ಪ, ಚಂದ್ರಪ್ಪ, ರೇವಣಸಿದ್ದಪ್ಪ, ಮಂಜುನಾಥ, ಹನುಮೇಶ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News