ಈಚಲ ದಿನ್ನೂರು ಸರಕಾರಿ ಶಾಲೆಗೆ ಶಿಕ್ಷಣಾಧಿಕಾರಿ ದಿಢೀರ್ ಭೇಟಿ, ಅವ್ಯವಸ್ಥೆ ವಿರುದ್ದ ಕಿಡಿ

Update: 2019-07-15 17:53 GMT

ಕೋಲಾರ, ಜು.15: ಮುಂದಿನ ಮೂರು ದಿನಗಳಲ್ಲಿ ಕಲಿಕೆಗೆ ಪೂರಕ ವಾತಾವರಣ, ಸಮರ್ಪಕ ದಾಖಲೆಗಳ ನಿರ್ವಹಣೆ, ಸ್ವಚ್ಚತೆಯಲ್ಲಿ ಸುಧಾರಣೆ ಮಾಡದಿದ್ದಲ್ಲಿ ಶಿಸ್ತು ಕ್ರಮ ಖಚಿತ ಎಂದು ತಾಲೂಕಿನ ಈಚಲ ದಿನ್ನೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಎಂ.ನಾರಾಯಣಸ್ವಾಮಿ ಅವರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ಎಚ್ಚರಿಕೆ ನೀಡಿದರು.

ಗ್ರಾಮಸ್ಥರ ದೂರು ಹಾಗೂ ಜಿಪಂ ಸಿಇಒ ಅವರ ಸೂಚನೆ ಹಿನ್ನಲೆಯಲ್ಲಿ ಸೋಮವಾರ ಶಾಲೆಗೆ ದಿಢೀರ್ ಭೇಟಿ ನೀಡಿದ ಅವರು, ಶಾಲೆಯ ಅವ್ಯವಸ್ಥೆ ಕಂಡು ಆಕ್ರೋಶ ವ್ಯಕ್ತಪಡಿಸಿ, ಶಾಲೆಯಲ್ಲಿ ಇರುವ 4 ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿರುವ ಕುರಿತು ಬೇಸರ ವ್ಯಕ್ತಪಡಿಸಿದರು.

ಬಿಇಒ ಅವರಿಂದ ಶೌಚಾಲಯ ಸ್ಚಚ್ಚತೆ

ಶಾಲೆಯ ಕಟ್ಟಡ ಸಂಪೂರ್ಣ ಹಾಳಾಗಿದ್ದು, ಕಾಂಪೌಂಡ್ ನಿರ್ಮಾಣಕ್ಕೂ ನಿರ್ಲಕ್ಷ್ಯ ತೋರಲಾಗಿತ್ತು. ಶೌಚಾಲಯ ಬಳಸದ ಕಾರಣ ಜೇಡರ ಬಲೆಗಳು ಕಟ್ಟಿ ಹಾಳು ಕೊಂಪೆಯಂತಾಗಿದ್ದು, ಸ್ವತಃ ಬಿಇಒ ಅವರೇ ಶೌಚಾಲಯದಲ್ಲಿನ ಗೂಡುಗಳನ್ನು ಪೊರಕೆ ಸಹಾಯದಿಂದ ಸ್ವಚ್ಚಗೊಳಿಸಿದರು.

ಶಾಲಾ ಕೊಠಡಿಯಲ್ಲಿ ಸ್ವಚ್ಚತೆಯ ಕೊರತೆ ಎದ್ದು ಕಾಣುತ್ತಿತ್ತು, ಮೂಲೆಗಳಲ್ಲಿ ಹಳೆ ಪೇಪರ್ ಚೂರುಗಳು, ಕಸ ರಾಶಿಯಾಗಿ ಬಿದ್ದಿದ್ದು, ಸ್ವಚ್ಚತೆಗೆ ಕ್ರಮವಹಿಸಲು ಸೂಚಿಸಿದರು.

ಶಾಲೆಯ ಎಸ್‍ಡಿಎಂಸಿ ಖಾತೆಯಲ್ಲಿ 52 ಸಾವಿರ ರೂ ಇದೆ ಎಂದು ಮೌಖಿಕವಾಗಿ ಶಿಕ್ಷಕರು ತಿಳಿಸಿದರೂ ಈ ಸಂಬಂಧ ಯಾವುದೇ ದಾಖಲೆಗಳನ್ನು ಇಟ್ಟಿಲ್ಲ, ಮಕ್ಕಳ ಹಾಜರಾತಿ, ಶಿಕ್ಷಕರ ಹಾಜರಾತಿಯೂ ಇಲ್ಲ ಎಂಬ ಮಾಹಿತಿಯಿಂದ ಬಿಇಒ ಸಿಡಿಮಿಡಿಗೊಂಡರು.

ಕಳೆದ 8 ವರ್ಷಗಳಿಂದ ಇದೇ ಶಾಲೆಯಲ್ಲಿರುವ ಶಿಕ್ಷಕ ನಾರಾಯಣಸ್ವಾಮಿ, ಮುರುಕಲು ಟೇಬಲ್, ಕುರ್ಚಿಗಳನ್ನೇ ಬಳಸುತ್ತಿದ್ದು, ಶಾಲೆಯ ಗೋಡೆಗಳು ಬಿರುಕು ಬಿಟ್ಟಿವೆ. ರಸ್ತೆ ಬದಿಯೇ ಶಾಲೆ ಇರುವುದರಿಂದ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಕಾಂಪೌಂಡ್ ಅಗತ್ಯವಿದೆ. ಈ ಸಂಬಂಧ ಬಿಇಒ ಅವರು ಗ್ರಾ.ಪಂ ಸದಸ್ಯ ರವಿ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದಾಗ ಕಾಂಪೌಂಡ್ ಕಟ್ಟಿಸಿಕೊಡುವ ಭರವಸೆ ನೀಡಿದರು.

ಅಂಗನವಾಡಿಯಲ್ಲೂ ಅವ್ಯವಸ್ಥೆ

ಶಾಲಾ ಶಿಥಿಲ ಕಟ್ಟಡದಲ್ಲೇ ಇರುವ ಅಂಗನವಾಡಿಯಲ್ಲೂ ಐದು ಮಕ್ಕಳಿದ್ದು, ಅದು ಬೀಳುವ ಸ್ಥಿತಿಯಲ್ಲಿದೆ, ಅಲ್ಲಿಯೂ ಸ್ವಚ್ಚತೆಯ ಕೊರತೆ ಇದೆ, ಅಡುಗೆಯವರು, ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು ಸೇರಿ ಎಲ್ಲರೂ ಶಾಲೆಯಲ್ಲಿ ಕಲಿಕೆಗೆ ಪೂರಕ ವಾತಾವರಣ ಮತ್ತು ಸ್ವಚ್ಚತೆ ಕಾಪಾಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ದೂರಿದರು.

ಕಾಲಮಿತಿಯಲ್ಲಿ ಮುಂದಿನ ಮೂರು ದಿನದೊಳಗೆ ಸೂಚಿಸಿರುವಂತೆ ಕ್ರಮ ಕೈಗೊಳ್ಳದಿದ್ದಲ್ಲಿ ಕಠಿಣ ಕ್ರಮದ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ರಾಮಕೃಷ್ಣಪ್ಪ, ಇಸಿಒ ಆರ್.ಶ್ರೀನಿವಾಸನ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News