ಶಾಸಕರ ರೆಸಾರ್ಟ್ ರಾಜಕೀಯದ ವಿರುದ್ಧ ತುಮಕೂರಿನಲ್ಲಿ ರೈತ ಸಂಘ ಪ್ರತಿಭಟನೆ

Update: 2019-07-15 18:27 GMT

ತುಮಕೂರು,ಜು.15: ರಾಜ್ಯದಲ್ಲಿ ತೀವ್ರ ಬರಗಾಲದ ಪರಿಸ್ಥಿತಿಯನ್ನು ರೈತರು ಎದುರಿಸಲು ಆಗದೇ ಇರುವ ಪರಿಸ್ಥಿತಿಯಲ್ಲಿ ಜನಪ್ರತಿನಿಧಿಗಳು ಸ್ವಾರ್ಥ, ಅಧಿಕಾರದ ಆಸೆಗಾಗಿ ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಟೌನ್‍ಹಾಲ್ ವೃತ್ತದಲ್ಲಿ 'ಪ್ರಜಾ ಪ್ರಭುತ್ವದ ಕಗ್ಗೊಲೆ ಮಾಡಿ ಮಾರಾಟ ಮಾಡಿಕೊಳ್ಳುತ್ತಿರುವ, ರೆಸಾರ್ಟ್ ರಾಜಕೀಯ ಮಾಡುತ್ತಿರುವ ಶಾಸಕರ ವಿರುದ್ಧ ಛೀ..ಥೂ..' ಎಂದು ಉಗಿಯುವ ಚಳವಳಿಯನ್ನು ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ಆನಂದ್ ಪಟೇಲ್, ಬರಗಾಲದಿಂದ ತತ್ತರಿಸಿರುವ ರಾಜ್ಯದಲ್ಲಿ ರೈತರು ಸಕಾಲಕ್ಕೆ ಬೆಳೆಯೂ ಇಲ್ಲದೆ, ಕುಡಿಯುವ ನೀರಿಗೂ ಪರದಾಡುವಂತಹ ಸ್ಥಿತಿಯಲ್ಲಿ ಜನರು ಬಳಲುತ್ತಿರುವಾಗ ನಮ್ಮನ್ನು ಆಳಬೇಕಾದ ರಾಜಕಾರಣಿಗಳು ರೆಸಾರ್ಟ್ ರಾಜಕಾರಣ ಮಾಡುತ್ತಿದ್ದಾರೆ. ಮತ ಪಡೆದು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಶಾಸಕರು ತಮ್ಮನ್ನು ತಾವು ಮಾರಾಟ ಮಾಡಿಕೊಳ್ಳುತ್ತಿರುವುದು ಖಂಡನೀಯ ಎಂದರು.

ಅಧಿಕಾರದ ಆಸೆಗಾಗಿ ರಾಜ್ಯದ ಮರ್ಯಾದೆಯನ್ನು ಮೂರಾಬಟ್ಟೆ ಮಾಡಿರುವ ಶಾಸಕರಿಗೆ ಸಾರ್ವಜನಿಕರು ಛೀ..ಥೂ.. ಎಂದು ಉಗಿಯುವ ಮೂಲಕ ಅವರಿಗೆ ತಕ್ಕ ಪಾಠ ಕಲಿಸಬೇಕಾಗಿದೆ, ಮತದಾರರ ಆಶಯಗಳನ್ನು ನಿರ್ಲಕ್ಷಿಸಿರುವ ರಾಜಕೀಯ ಪಕ್ಷಗಳ ಬಗ್ಗೆ ಮತದಾರರು ಪ್ರಜ್ಞಾವಂತರಾಗಬೇಕಿದ್ದು, ಇಂತಹ ರಾಜಕಾರಣಿಗಳನ್ನು ಅಧಿಕಾರದಿಂದ ದೂರವಿಡಬೇಕಾದ ತೀರ್ಮಾನವನ್ನು ಕೈಗೊಳ್ಳಬೇಕಿದೆ ಎಂದು ಹೇಳಿದರು.

ರಾಜ್ಯವನ್ನು ಆಳುವ ಎಲ್ಲ ರಾಜಕೀಯ ಪಕ್ಷಗಳು ಯಾವುದೇ ಶಿಸ್ತು ಬದ್ಧತೆಗಳಿಲ್ಲದೆ, ಪ್ರಜಾಪ್ರಭುತ್ವದ ಆಶಯಗಳು ಇಲ್ಲದೆ, ರಾಜ್ಯ ರಾಜಕೀಯದಲ್ಲಿ ಗಲಭೆ ಎಬ್ಬಿಸಿರುವುದಕ್ಕೆ ರಾಷ್ಟ್ರದಲ್ಲಿ ಕರ್ನಾಟಕದ ಜನರು ತಲೆ ತಗ್ಗಿಸುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಧನಂಜಯ ಆರಾಧ್ಯ, ಅನಿಲ್‍ಕುಮಾರ್, ಲೋಕೇಶ್, ಸಿದ್ಧರಾಜು, ದ್ಯಾಮೇಗೌಡ್ರು ಸೇರಿದಂತೆ ರೈತ ಸಂಘದ ಕಾರ್ಯಕರ್ತರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News