ಶಾಸಕರ ವಿರುದ್ಧ ರೈತ ಸಂಘದಿಂದ ಶಿವಮೊಗ್ಗದಲ್ಲಿ 'ಕ್ಯಾಕರಿಸಿ ಉಗಿಯುವ' ಚಳವಳಿ

Update: 2019-07-15 18:29 GMT

ಶಿವಮೊಗ್ಗ, ಜು. 15: ರಾಜ್ಯದಲ್ಲಿ ತಲೆದೋರಿರುವ ರಾಜಕೀಯ ಅಸ್ಥಿರತೆ ಹಾಗೂ ಶಾಸಕರ ಕಾರ್ಯವೈಖರಿಯ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಗಳು ಸೋಮವಾರ ನಗರದ ಶಿವಪ್ಪನಾಯಕ ವೃತ್ತದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಪ್ರತಿಕೃತಿಗೆ ಕ್ಯಾಕರಿಸಿ ಉಗಿಯುವ ವಿನೂತನ ಚಳವಳಿ ನಡೆಸಿದರು. 

ಪ್ರಸ್ತುತ ರಾಜ್ಯದ ಹಲವೆಡೆ ಮುಂಗಾರು ಮಳೆ ಕೈಕೊಟ್ಟು ಬರಗಾಲ ಸ್ಥಿತಿ ಆವರಿಸಿದೆ. ಮಳೆಗಾಲದ ವೇಳೆಯೂ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡುವಂತಹ ದುಃಸ್ಥಿತಿಯಿದೆ. ಜನ-ಜಾನುವಾರುಗಳ ಸ್ಥಿತಿ ಶೋಚನೀಯವಾಗಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಇಂತಹ ಸನ್ನಿವೇಶದಲ್ಲಿ ಸರ್ಕಾರ ಹಾಗೂ ಶಾಸಕರು ಜನರ ನೆರವಿಗೆ ಧಾವಿಸುವ ಕೆಲಸ ಮಾಡಬೇಕಾಗಿತ್ತು. ಆದರೆ ಅಧಿಕಾರ ದಾಹದಿಂದ ಆಡಳಿತ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ಕೆಲ ಶಾಸಕರು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋಟೆಲ್‍ಗಳಲ್ಲಿ ಬೀಡುಬಿಟ್ಟಿದ್ದಾರೆ. ಇನ್ನೂ ಕೆಲ ಶಾಸಕರು ರೆಸಾರ್ಟ್, ಹೋಟೆಲ್‍ಗಳಲ್ಲಿ ತಂಗಿದ್ದಾರೆ. ಐಷರಾಮಿ ಜೀವನ ನಡೆಸುತ್ತಿದ್ದಾರೆ. ಇದು ನಿಜಕ್ಕೂ ದುರಂತದ ಸಂಗತಿ ಎಂದು ಪ್ರತಿಭಟನಾಕಾರರು ದೂರಿದ್ದಾರೆ. 

ಪ್ರಸ್ತುತ ಶಾಸಕರೆಂದರೆ ಮಾರಾಟದ ವಸ್ತುವಾಗಿ ಪರಿಣಮಿಸಿದ್ದಾರೆ. ಇದು ಪ್ರಜಾಪ್ರಭುತ್ವದ ಅಣಕವಾಗಿದೆ. ಹಾಗೆಯೇ ಇವರನ್ನು ಆಯ್ಕೆ ಮಾಡಿ ಕಳುಹಿಸಿದ ಮತದಾರರಿಗೂ ಅಪಮಾನ ಮಾಡುತ್ತಿದ್ದಾರೆ. ಇವರನ್ನು ಹೇಳುವವರು, ಕೇಳುವವರ್ಯಾರು ಇಲ್ಲದಂತಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿವೆ. ಮುಂದಿನ ದಿನಗಳಲ್ಲಿ ಈ ಮೂರು ಪಕ್ಷಗಳಿಗೆ ರಾಜ್ಯದ ಜನತೆ ತಕ್ಕ ಪಾಠ ಕಲಿಸುವ ಕೆಲಸ ಮಾಡಲಿದ್ದಾರೆ. ಇನ್ನಾದರೂ ಈ ಮೂರು ಪಕ್ಷಗಳ ಶಾಸಕರು ಎಚ್ಚೆತ್ತುಕೊಳ್ಳಬೇಕು. ರಾಜಕೀಯ ಆಟೋಟೋಪ ಬಿಟ್ಟು ಜನರ ಸಮಸ್ಯೆಗೆ ಸ್ಪಂದಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಪಕ್ಷಾಂತರ ನಿಷೇಧ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವವರಿಗೆ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧ ವಿಧಿಸುವ ಕಾನೂನು ಜಾರಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. 

ಪ್ರತಿಭಟನೆಯಲ್ಲಿ ಸಂಘದ ಗೌರವಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ, ಪ್ರಮುಖರಾದ ಕೆ. ರಾಘವೇಂದ್ರ, ಟಿ.ಎಂ.ಚಂದ್ರಪ್ಪ, ಹಿಟ್ಟೂರು ರಾಜು, ಟಿ.ಎಂ.ಚಿಕ್ಕಸ್ವಾಮಿ, ಎಸ್.ಶಿವಮೂರ್ತಿ, ಅರೆಬಿಳಚಿ ಶಿವಣ್ಣ, ರಾಮಚಂದ್ರಪ್ಪ, ಜಗದೀಶ್ ಸೇರಿದಂತೆ ಮೊದಲಾದವರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News