ಅಸಾಮಾನ್ಯ ಮಹನೀಯರ ಸಾಮಾನ್ಯತೆಯನ್ನು ಕಟ್ಟಿಕೊಡುವ ಎಚ್‌ಎಸ್‌ವಿ

Update: 2019-07-15 18:35 GMT

 ಕನ್ನಡದ ಅಪ್ಪಟ ಕವಿಯಾಗಿ ಗುರುತಿಸಿಕೊಂಡಿರುವ ಎಚ್. ಎಸ್. ವೆಂಕಟೇಶಮೂರ್ತಿಯವರು ಇತ್ತೀಚೆಗೆ ತಮ್ಮ ‘ಅನಾತ್ಮ ಕಥನ’ದ ಮೂಲಕ ಕವಿಯ ಅಂತರಂಗದ ಒಳಗಿನ ಗದ್ಯವನ್ನು ಹೃದ್ಯ ರೂಪದಲ್ಲಿ ತೆರೆದಿಟ್ಟಿದ್ದರು. ಕವಿಯೊಬ್ಬ ಗದ್ಯ ಪ್ರಕಾರವನ್ನು ಕೈಗೆತ್ತಿಕೊಂಡರೂ ಅದು ತನ್ನ ಕಾವ್ಯ ಲಕ್ಷಣಗಳಿಂದಲೇ ಗಮನ ಸೆಳೆಯುತ್ತದೆ. ಹಿರಿಯ ಕವಿಯೊಬ್ಬರು ತಮ್ಮ ಕಾವ್ಯ, ಬದುಕಿನ ಮೇಲೆ ಪ್ರಭಾವ ಬೀರಿದ ವ್ಯಕ್ತಿಗಳನ್ನು ಕಟ್ಟಿಕೊಡಲು ಮುಂದಾದಾಗ ಅದರ ಕುರಿತಂತೆ ಸಹೃದಯರು ಸಹಜವಾಗಿಯೇ ಕುತೂಹಲ ತಾಳುತ್ತಾರೆ. ಎಚ್‌ಎಸ್‌ವಿ ಅವರು ಕನ್ನಡ ಸಾಹಿತ್ಯ ಜಗತ್ತು ತಬ್ಬಿಕೊಂಡ ಅಂತಹ 21 ಮಹನೀಯರನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಪುತಿನರಿಂದ ಸುಬ್ರಾಯ ಚೊಕ್ಕಾಡಿಯವರೆಗೆ, ಕವಿ, ಕಥೆಗಾರರು, ಚಿಂತಕರ ಕುರಿತಂತೆ ತಮ್ಮದೇ ಆದ ದೃಷ್ಟಿಕೋನದಿಂದ ನೋಡಿ ಅವರ ವ್ಯಕ್ತಿಚಿತ್ರವನ್ನು ಕಟ್ಟಿಕೊಡುವ ಪ್ರಯತ್ನವನ್ನು ‘ಬೆಳಗಾಗಿ ನಾನೆದ್ದು...’ ಕೃತಿಯಲ್ಲಿ ಮಾಡಿದ್ದಾರೆ. ಬಹುಶಃ ಅವರು ಕಟ್ಟಿಕೊಟ್ಟ ಹಿರಿಯರು ಈ ನಾಡು ಪ್ರತಿದಿನ ಸ್ಮರಿಸಬೇಕಾದ ವ್ಯಕ್ತಿತ್ವ ಎನ್ನುವ ಕಾರಣದಿಂದ ‘ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ...’ ಎನ್ನುವ ಜಾನಪದ ಸಾಲಿನ ತುಣುಕನ್ನು ಕೃತಿಗೆ ತಲೆಬರಹವಾಗಿ ಕೊಟ್ಟಿರಬೇಕು.
ಇಲ್ಲಿರುವುದು ಹಿರಿಯ ಲೇಖಕರ ಕುರಿತ ಪರಿಚಯ ಲೇಖನಗಳಲ್ಲ. ಹಿರಿಯರ ಜೊತೆ ಕಳೆದ ಕೆಲವು ಕ್ಷಣಗಳು, ಘಟನೆಗಳನ್ನು ಇಟ್ಟುಕೊಂಡು ಅವರ ವ್ಯಕ್ತಿತ್ವವನ್ನು ಕಟ್ಟಿಕೊಡುವ ಕುಶಲಕಲೆಯನ್ನು ಈ ಕೃತಿಯಲ್ಲಿ ಕಾಣಬಹುದು. ಪುತಿನ ಅವರು ಬದುಕನ್ನು ಹೇಗೆ ಒಳಗಣ್ಣಿನಿಂದ ನೋಡುತ್ತಿದ್ದರು ಎನ್ನುವುದಕ್ಕೆ ಉದಾಹರಣೆಯಾಗಿ, ಕಣ್ಣು ಮಬ್ಬಾಗಿದ್ದರೂ ಅವರು ಸೂರ್ಯನಿಗೆ ಮುಖಮಾಡಿದ ಘಟನೆಯನ್ನು ವಿವರಿಸುತ್ತಾರೆ. ‘‘ಕವಿಯಾದವನು ಕಾಣುವುದರ ಆಚೆ ಇರುವ ಕಾಣ್ಕೆಯನ್ನು ಪಡೆಯಬೇಕಯ್ಯ....’’ ಎನ್ನುವ ಪುತಿನ ಮಾತುಗಳಿಗೆ ಪೂರಕವಾಗಿ ಆ ಘಟನೆಯನ್ನು ಎಚ್‌ಎಸ್‌ವಿ ನೆನಪಿಸುತ್ತಾರೆ. ‘ಕವಿಗಳ ಕಲ್ಪಕತೆ’ ಬರಹದಲ್ಲಿ ವಿಮರ್ಶಕ ಅಮೂರರು ತಮ್ಮ ಹೃದಯವಂತಿಕೆಯ ಮೂಲಕ ಹೇಗೆ ಪ್ರಭಾವಿಸಿದ್ದರು ಎನ್ನುವುದನ್ನು ಬರೆಯುತ್ತಾರೆ. ಕೆ. ಎಸ್. ನರಸಿಂಹಸ್ವಾಮಿ ಅವರನ್ನು ನೆನೆಯುತ್ತಾ, ಮೈಸೂರು ಮಲ್ಲಿಗೆಯಷ್ಟೇ ಆಪ್ತವಾದ ಅವರ ಮಾತು-ಕತೆಯನ್ನು ತೆರೆದಿಡುತ್ತಾರೆ. ಎಕ್ಕುಂಡಿಯವರ ಸಾಮಾಜಿಕ ಪ್ರಜ್ಞೆ ಮತ್ತು ಜನಮುಖಿ ಕವಿತ್ವದ ಲೌಕಿ-ಅಲೌಕಿಕತೆ, ಅಡಿಗರ ಕಾವ್ಯದ ಗಹನಗಾಂಭೀರ್ಯ, ನಿತ್ಯವ್ಯವಹಾರದ ತಮಾಷೆ, ವ್ಯವಹಾರ ಶೂನ್ಯತೆ, ಎಲ್. ಎಸ್. ಶೇಷಗಿರಿರಾಯರ ಸಾಹಿತ್ಯ ಮತ್ತು ಬದುಕಿನ ನಡುವಿನ ಸಮನ್ವಯತೆ, ರಾಮಚಂದ್ರ ಶರ್ಮರ ಕಾವ್ಯವ್ಯಾಮೋಹ, ಜಿ.ಎಸ್. ಶಿವರುದ್ರಪ್ಪರ ದೋಸೆಕತೆ ಮತ್ತು ಅವರು ಎತ್ತಿದ ಬಿಲ್ಲುಗಳ ಭಾರ, ಕಣವಿಯ ಮನೆಯ ಹೋಳಿಗೆ ಊಟ, ಕುರ್ತಕೋಟಿ ಎನ್ನುವ ವಿದಗ್ಧ ರಸಿಕ....ಹೀಗೆ....ಇಲ್ಲಿ ತೆರೆದುಕೊಳ್ಳುವ ಮಹನೀಯರ ಪರಿಯೇ ಹೊಸತು. ಅಸಾಮಾನ್ಯರೊಳಗಿರುವ ಸಾಮಾನ್ಯತೆಯನ್ನು ಎಚ್‌ಎಸ್‌ವಿ ತೆರೆದುಕೊಟ್ಟ ರೀತಿ ಅತ್ಯಂತ ಆತ್ಮೀಯವಾಗಿದೆ. ಪ್ರತಿ ವ್ಯಕ್ತಿಪರಿಚಯವೂ ಕಥನ ರೂಪದಲ್ಲಿದ್ದು ನವ್ಮುನ್ನು ಓದಿಸಿಕೊಂಡು ಹೋಗುತ್ತದೆ.
ಬಹುರೂಪಿ ಪ್ರಕಾಶನ ಬೆಂಗಳೂರು ಈ ಕೃತಿಯನ್ನು ಹೊರತಂದಿದೆ. ಒಟ್ಟು ಪುಟಗಳು 144. ಮುಖಬೆಲೆ 150 ರೂಪಾಯಿ. ಆಸಕ್ತರು 70191 82729 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News