ಸುಪ್ರೀಂನಲ್ಲಿ ಅತೃಪ್ತ ಶಾಸಕರು ಸಲ್ಲಿಸಿರುವ ಅರ್ಜಿಯ ವಿಚಾರಣೆ

Update: 2019-07-16 06:32 GMT

ಹೊಸದಿಲ್ಲಿ, ಜು.16:  ಸ್ಪೀಕರ್ ರಾಜೀನಾಮೆ ಅಂಗೀಕರಿಸಲು ವಿಳಂಬ ಮಾಡುತ್ತಿದ್ದಾರೆಂದು ಆರೋಪಿಸಿ ಅತೃಪ್ತ ಶಾಸಕರು  ಸಲ್ಲಿಸಿರುವ ತಕರಾರು ಅರ್ಜಿಯ ವಿಚಾರಣೆಯನ್ನು  ಸುಪ್ರೀಂ ಕೋರ್ಟ್ ಇಂದು ಬೆಳಗ್ಗೆ ಕೈಗೆತ್ತಿಕೊಂಡಿದೆ.

ನ್ಯಾಯಮೂರ್ತಿ ರಂಜನ್ ಗೊಗೋಯಿ   ನೇತೃತ್ವದ ನ್ಯಾಯಪೀಠದಲ್ಲಿ ವಿಚಾರಣೆ ಆರಂಭಗೊಂಡಿದೆ. ಮೊದಲು ಅತೃಪ್ತ ಶಾಸಕರ ಪರ ವಕೀಲ ಮುಕುಲ್ ರೋಹ್ಟಗಿ ವಾದ ಮಂಡಿಸಿ" ಸ್ಪೀಕರ್ ನಿರ್ಧಾರ ಕೋರ್ಟ್ ವ್ಯಾಪ್ತಿಯೊಳಗೆ ಇದೆ. ಸ್ಪೀಕರ್ ನಿರ್ಧಾರವನ್ನು ನ್ಯಾಯಾಲಯ ಪ್ರಶ್ನಿಸಬಹುದಾಗಿದೆ. ಇಬ್ಬರು ಶಾಸಕರ ಮೇಲೆ ಇರುವ ಅನರ್ಹತೆಯ ವಿಚಾರಣೆ ಪ್ರಕ್ರಿಯೆ ಬಾಕಿ ಇರುವುದು ಉಳಿದ ಶಾಸಕರ ಅಂಗೀಕಾರಕ್ಕೆ ಅಡ್ಡಿಯಲ್ಲ. 10 ಶಾಸಕರು ತಮ್ಮ ಕೈ ಬರಹದ ಮೂಲಕ ರಾಜೀನಾಮೆ ಪತ್ರ ನೀಡಿದ್ದಾರೆ. ಇದನ್ನು ಅಂಗೀಕರಿಸಬಹುದಾಗಿದೆ. ಉಮೇಶ್ ಜಾಧವ್ ವಿರುದ್ಧ ಅನರ್ಹತೆಯ ದೂರು ಇದ್ದರೂ ರಾಜೀನಾಮೆ ಅಂಗೀಕಾರವಾಗಿದೆ ''ಎಂದು ನ್ಯಾಯಾಲಯದ ಗಮನ ಸೆಳೆದರು.

ಶಾಸಕರು ಸ್ವಇಚ್ಛೆಯಿಂದ ರಾಜೀನಾಮೆ ನೀಡಿರುವುದಾಗಿ   ನ್ಯಾಯಾಲಯದ ಮುಂದೆ  ಸ್ಪಷ್ಟಪಡಿಸಿದ್ದಾರೆ. ರಾಜೀನಾಮೆ ಮತ್ತು ಅನರ್ಹತೆಯನ್ನು ಮಿಶ್ರಣ ಮಾಡುವುದು ಸರಿಯಲ್ಲ. ಶಾಸಕರು ಸದನಕ್ಕೆ ಹಾಜರಾಗಲು ಇಷ್ಟವಿಲ್ಲದಾಗ ಬಲವಂತ ಯಾಕೆ ? ವಿಪ್ ಜಾರಿಗೂ ಮುನ್ನ ಅವರು ರಾಜೀನಾಮೆ ನೀಡಿದ್ದಾರೆ. ಶಾಸಕರ ಹಕ್ಕನ್ನು ಸ್ಪೀಕರ್ ಹರಣ ಮಾಡುತ್ತಿದ್ದಾರೆ. ಗುರುವಾರ ವಿಶ್ವಾಸಮತ ಯಾಚನೆ ಇದೆ. ಸರಕಾರಕ್ಕೆ ಬಹುಮತ ಇಲ್ಲ.  ಕಲಂ191/2 ರ ಪ್ರಕಾರ ಶಾಸಕರ ರಾಜೀನಾಮೆ ಹಕ್ಕನ್ನು ತಡೆಯುವ ಅಧಿಕಾರ ಯಾರಿಗೂ ಇಲ್ಲ. ವಿಧಾನಸಭೆಯ ನಿಯಮಗಳು ನೇರವಾಗಿದೆ. ರಾಜೀನಾಮೆ ಅಂಗೀಕಾರಕ್ಕೆ ಸ್ವಇಚ್ಛೆ ಮತ್ತು ಸತ್ಯ ಮಾನದಂಡವಾಗಿದೆ  ಎಂದು ವಕೀಲ ಮುಕುಲ್ ರೋಹ್ಟಗಿ ವಾದ ಮಂಡಿಸಿದರು.

ಅನರ್ಹತೆಗೆ ಕಾರಣವೇನು . ಯಾವ  ಆಧಾರದಲ್ಲಿ ಅನರ್ಹತೆ ಮಾಡಬಹುದು ? ಎಂದು  ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ  ವಿಚಾರಣೆ ವೇಳೆ ಪ್ರಶ್ನೆ ಎತ್ತಿದರು. "ಅನರ್ಹತೆಯ ಬಗ್ಗೆ ನಾನು ವಾದ ಮಂಡಿಸುತ್ತಿಲ್ಲ. ನಾನು ವಾದ ಮಂಡಿಸುತ್ತಿರುವುದು ರಾಜೀನಾಮೆ ವಿಳಂಬ ಬಗ್ಗೆ. ಆರ್ಟಿಕಲ್ 190ರ ಪ್ರಕಾರ ಕೈಬರಹ ಮೂಲಕ ರಾಜೀನಾಮೆ ನೀಡಬಹುದು. ಹೀಗಾಗಿ ಅವರ ರಾಜೀನಾಮೆ ಅಂಗೀಕರಿಸಬೇಕು. ಕೇರಳ ಶಾಸಕರ ಪ್ರಕರಣದಲ್ಲಿ ಅನರ್ಹತೆಯ ವಿಚಾರಣೆ ಬಾಕಿ ಇದ್ದರೂ ರಾಜೀನಾಮೆ ಅಂಗೀಕಾರವಾಗಿತ್ತು. '' ಎಂದು ವಕೀಲ ಮುಕುಲ್ ರೋಹ್ಟಗಿ  ಉತ್ತರಿಸಿದರು. 

 "ಸ್ಪೀಕರ್ ಹೇಗೆ ತೀರ್ಮಾನ ಕೈಗೊಳ್ಳಬೇಕೆಂದು ನಾವು  ಹೇಳಲು ಸಾಧ್ಯವಿಲ್ಲ. ಅದನ್ನು ಸ್ಪೀಕರ್ ನಿರ್ಧರಿಸಬೇಕು .  ರಾಜೀನಾಮೆ ಅರ್ಜಿಯನ್ನು ಹೆಚ್ಚು ದಿನ ಬಾಕಿ ಇಡುವಂತಿಲ್ಲ. ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅಭಿಪ್ರಾಯಪಟ್ಟರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News