ಅತೃಪ್ತ ಶಾಸಕರ ಅರ್ಜಿ ವಿಚಾರಣೆ ಮಧ್ಯಾಹ್ನ 2 ಗಂಟೆಗೆ ಮುಂದೂಡಿದ ಸುಪ್ರೀಂ

Update: 2019-07-16 07:49 GMT

ಹೊಸದಿಲ್ಲಿ, ಜು.16: ಸುಪ್ರೀಂಕೋರ್ಟ್​ನಲ್ಲಿ ನಡೆಯುತ್ತಿರುವ ಅತೃಪ್ತ ಶಾಸಕರ ಅರ್ಜಿ ವಿಚಾರಣೆ ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿದೆ.

ಅತೃಪ್ತ ಶಾಸಕರ ಪರ  ವಕೀಲರಾದ  ಮುಕುಲ್ ರೋಹ್ಟಗಿ ವಾದದಲ್ಲಿ ಹುರುಳಿಲ್ಲ. ಶಾಸಕರು   ರಾಜೀನಾಮೆ‌ ಸಲ್ಲಿಸಲು ಸಕಾರಣಗಳಿಲ್ಲ. ಸ್ಪೀಕರ್  ತ್ವರಿತವಾಗಿ ಶಾಸಕರ  ರಾಜೀನಾಮೆ ಅಂಗೀಕರಿಸುವುದು ಸರಿಯಾದ ಕ್ರಮವಲ್ಲ  ಎಂದು ಸ್ಪೀಕರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ  ಸುಪ್ರೀಂ ಕೋರ್ಟ್ ನಲ್ಲಿ   ವಾದ ಮಂಡಿಸಿದರು. 

ವಿಚಾರಣೆಯನ್ನು ಮಧ್ಯರಾತ್ರಿಯೊಳಗೆ ಮುಗಿಸಲು ಸಾಧ್ಯವಿಲ್ಲ. ವಿಚಾರಣೆಗೆ ಶಾಸಕರು ಖುದ್ದು ಹಾಜರಾಗಬೇಕು ಎಂದು   ಅಭಿಷೇಕ್ ಮನು ಸಿಂಘ್ವಿ  ಹೇಳಿದರು.

ಶಾಸಕರು ರಾಜೀನಾಮೆ ನೀಡಿದರೂ ಯಾಕೆ ಸ್ಪೀಕರ್  ಸ್ವೀಕರಿಸುತ್ತಿಲ್ಲ   ಎಂದು ಸಿಜೆಐ ಪ್ರಶ್ನಿಸಿದರು.

ರಾಜೀನಾಮೆ ನೀಡುವ ಶಾಸಕರು ಮೊದಲೇ ಸ್ಪೀಕರ್ ಬಳಿ ಕೇಳಬೇಕಿತ್ತು  ಎಂದು ಮನು ಸಿಂಘ್ವಿ ಹೇಳಿದರು. 

ಶಾಸಕರು ಸುಪ್ರೀಂ ಕೋರ್ಟ್ ಬರುವ ತನಕ ಸ್ಪೀಕರ್ ಯಾಕೆ ಮೌನವಾಗಿದ್ದರು ?   ಎಂದು ಸಿಜೆಐ ಪ್ರಶ್ನೆ ಎತ್ತಿದರು. 

ಕಲಂ 190ರಂತೆ ಶಾಸಕರ ವಿಚಾರಣೆ ನಡೆಸದೆ ರಾಜೀನಾಮೆ ಅಂಗೀಕಾರ ಸಾಧ್ಯವಿಲ್ಲ ಎಂದು ಸಿಂಘ್ವಿ ನ್ಯಾಯಾಲಯಕ್ಕೆ ಮನವರಿಕೆ ಮಾಡಿದರು. 

 ಸ್ಪೀಕರ್ ವ್ಯಾಪ್ತಿಯನ್ನು ಪ್ರಶ್ನಿಸಬೇಡಿ ಎಂದು ಸಿಂಘ್ವಿ ಹೇಳಿದಾಗ  ನಮ್ಮ ವ್ಯಾಪ್ತಿಯನ್ನು ನಿಮಗೆ ಬೇಕಾದಂತೆ ವ್ಯಾಖ್ಯಾನಿಸಲು ಸಾಧ್ಯವಿಲ್ಲ. ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವು ಪ್ರಶ್ನಿಸುವಂತಿಲ್ಲ ಎಂದು ಸಿಜೆಐ ಹೇಳಿದರು. 

ಕಾಲಮಿತಿಯೊಳಗೆ ನಿರ್ಧಾರ ಕೈಗೊಳ್ಳುವಂತೆ ಸ್ಪೀಕರ್ ಗೆ ಸುಪ್ರೀಂ ಕೋರ್ಟ್  ನಿರ್ದೇಶನ ನೀಡಲು  ಸಾಧ್ಯವಿಲ್ಲ.ಒಂದು ಸಾಂವಿಧಾನಿಕ ಸಂಸ್ಥೆ ಇನ್ನೊಂದು ಸಾಂವಿಧಾನಿಕ ಸಂಸ್ಥೆಗೆ ನಿರ್ದೇಶನ ನೀಡಬಾರದು. ಅದ್ರಲ್ಲೂ ಸ್ಪೀಕರ್ ಗೆ ನಿರ್ದೇಶನ ನೀಡಬಾರದು ''   ಎಂದು ವಕೀಲ ಮನು ಸಿಂಘ್ವಿ ವಾದ ಮಂಡಿಸಿದರು. 

ಅನರ್ಹತೆ ಮತ್ತು ರಾಜೀನಾಮೆಗೆ ನೇರ ಸಂಬಂಧವಿದೆ. ಹೀಗಾಗಿ, ಈ ಪ್ರಕರಣದ ವಿಚಾರಣೆ ನಡೆಸಲು ಸಮಯಾವಕಾಶ ಬೇಕು. ಯಥಾಸ್ಥಿತಿ ಕಾಯ್ದುಕೊಳ್ಳುವ ಆದೇಶವನ್ನು ತೆರವುಗೊಳಿಸಿ. ನಾಳೆ ಅಥವಾ ನಾಡಿದ್ದು ನಾವು ಈ ಪ್ರಕರಣವನ್ನು ಬಗೆಹರಿಸುತ್ತೇವೆ. ರಾಜೀನಾಮೆ ಮತ್ತು ಅನರ್ಹತೆ ಪ್ರಕರಣವನ್ನು ಇತ್ಯರ್ಥಗೊಳಿಸುತ್ತೇವೆ ಎಂದು  ಸುಪ್ರೀಂಕೋರ್ಟ್​ಗೆ ಅಭಿಷೇಕ್ ಮನು ಸಿಂಘ್ವಿ ಮನವಿ ಮಾಡಿದರು. 

ಭೋಜನ ವಿರಾಮದ ಬಳಿಕ ಮಧ್ಯಾಹ್ನ 2:00 ಗಂಟೆಗೆ ಮತ್ತೆ  ವಿಚಾರಣೆ ನಡೆಯಲಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News