ಶಾಸಕರ ಅರ್ಜಿಯ ಬಗ್ಗೆ ನಾಳೆ ಬೆಳಗ್ಗೆ 10:30ಕ್ಕೆ ತೀರ್ಪು ನೀಡಲಿರುವ ಸುಪ್ರೀಂ ಕೋರ್ಟ್

Update: 2019-07-16 15:08 GMT

ಹೊಸದಿಲ್ಲಿ,ಜು.16: ತಮ್ಮ ರಾಜೀನಾಮೆಗಳ ಕುರಿತು ನಿರ್ಧರಿಸುವಂತೆ ಸ್ಪೀಕರ್‌ಗೆ ನಿರ್ದೇಶವನ್ನು ನೀಡುವಂತೆ ಕೋರಿ ಕರ್ನಾಟಕದ 15 ಬಂಡುಕೋರ ಶಾಸಕರು ಸಲ್ಲಿಸಿರುವ ಅರ್ಜಿಯ ಮೇಲೆ ಮಂಗಳವಾರ ಸುಮಾರು ನಾಲ್ಕು ಗಂಟೆಗಳ ಕಾಲ ವಾದವಿವಾದಗಳನ್ನು ಆಲಿಸಿದ ಸರ್ವೋಚ್ಚ ನ್ಯಾಯಾಲಯವು ತನ್ನ ತೀರ್ಪನ್ನು ಬುಧವಾರ ಬೆಳಿಗ್ಗೆ 10:30ಕ್ಕೆ ಪ್ರಕಟಣೆಗಾಗಿ ಕಾಯ್ದಿರಿಸಿದೆ.

ಅತೃಪ್ತ ಶಾಸಕರು,ಸ್ಪೀಕರ್ ರಮೇಶ್ ಕುಮಾರ ಮತ್ತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಏಕಕಾಲದಲ್ಲಿ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಹಾಗೂ ನ್ಯಾಯಮೂರ್ತಿಗಳಾದ ದೀಪಕ ಗುಪ್ತಾ ಮತ್ತು ಅನಿರುದ್ಧ ಬೋಸ್ ಅವರನ್ನೊಳಗೊಂಡಿದ್ದ ಪೀಠವು,ಸ್ಪೀಕರ್ ಅವರು ಅನರ್ಹತೆ ಕಲಾಪಗಳನ್ನು ಆರಂಭಿಸುವ ಮುನ್ನ ಅತೃಪ್ತ ಶಾಸಕರ ರಾಜೀನಾಮೆಗಳ ಕುರಿತು ನಿರ್ಧಾರವನ್ನು ಕೈಗೊಳ್ಳಬೇಕೇ ಎಂಬಂತಹ ಪ್ರಶ್ನೆಗಳ ಕುರಿತು ವಾದವಿವಾದಗಳ ಆಲಿಕೆಯನ್ನು ಪೂರ್ಣಗೊಳಿಸಿತು.

ಕಳೆದ ವರ್ಷದ ಮೇ ತಿಂಗಳಲ್ಲಿ ಕರ್ನಾಟಕ ವಿಧಾನಸಭೆಗೆ ಹಂಗಾಮಿ ಸ್ಪೀಕರ್ ಅನ್ನು ನೇಮಕಗೊಳಿಸುವಂತೆ ಮತ್ತು 24 ಗಂಟೆಗಳಲ್ಲಿ ಸದನದಲ್ಲಿ ಬಲಾಬಲ ಪರೀಕ್ಷೆ ನಡೆಸುವಂತೆ ತಾನು ಆದೇಶಿಸಬಹುದಾಗಿದ್ದರೆ ಅತೃಪ್ತ ಶಾಸಕರ ರಾಜೀನಾಮೆಗಳ ಬಗ್ಗೆ ನಿರ್ಧರಿಸುವಂತೆ ತಾನೇಕೆ ಸ್ಪೀಕರ್‌ಗೆ ಸೂಚಿಸುವಂತಿಲ್ಲ ಎಂದು ವಿಚಾರಣೆ ಸಂದರ್ಭ ಪೀಠವು ಅಚ್ಚರಿಯನ್ನು ವ್ಯಕ್ತಪಡಿಸಿತು.

ರಾಜೀನಾಮೆಗಳ ಕುರಿತು ನಿರ್ಧಾರವನ್ನು ಕೈಗೊಳ್ಳಲಿಲ್ಲ ಎನ್ನುವುದನ್ನು ಸ್ಪೀಕರ್‌ರಿಂದ ತಿಳಿಯಲೂ ನ್ಯಾಯಾಲಯವು ಬಯಸಿತು.

ಸ್ಪೀಕರ್ ಅಧಿಕಾರವನ್ನು ತಾನು ತಡೆಯುವಂತಿಲ್ಲ ಎಂಬ ಅಭಿಪ್ರಾಯವನ್ನು ನ್ಯಾಯಾಲಯವು ವ್ಯಕ್ತಪಡಿಸಿತಾದರೂ ರಾಜೀನಾಮೆಗೆ ಮುನ್ನ ಅನರ್ಹತೆಯ ಬಗ್ಗೆ ನಿರ್ಧರಿಸುವಂತೆ ಯಾವುದಾದರೂ ಬಾಧ್ಯತೆಯನ್ನು ಅವರು ಹೊಂದಿದ್ದಾರೆಯೇ ಎನ್ನುವುದನ್ನು ತಿಳಿಯಲು ಬಯಸಿತು.

ಅನರ್ಹತೆ ಕಲಾಪ ಬಾಕಿಯುಳಿದಿರುವುದು ರಾಜೀನಾಮೆಗಳನ್ನು ಸ್ವೀಕರಿಸಲು ಅಡ್ಡಿಯಾಗುವುದಿಲ್ಲ ಎಂದು ಹೇಳಿದ ಅತೃಪ್ತ ಶಾಸಕರ ಪರ ಹಿರಿಯ ನ್ಯಾಯವಾದಿ ಮುಕುಲ್ ರೋಹಟ್ಗಿ ಅವರು,10 ಶಾಸಕರು ಜು.6ರಂದೇ ರಾಜೀನಾಮೆಗಳನ್ನು ಸಲ್ಲಿಸಿದ್ದರೂ ಸ್ಪೀಕರ್ ಅವುಗಳ ಬಗ್ಗೆ ನಿರ್ಧಾರವನ್ನು ಕೈಗೊಳ್ಳಲಿಲ್ಲ ಎಂದು ಬೆಟ್ಟು ಮಾಡಿದರು.

ಆಗಿನ ಕಾಂಗ್ರೆಸ್ ಶಾಸಕ ಉಮೇಶ ಜಾಧವ ಅವರ ಉದಾಹರಣೆಯನ್ನು ನೀಡಿದ ರೋಹಟ್ಗಿ,ಅವರ ವಿರುದ್ಧದ ಅನರ್ಹತೆ ಕಲಾಪ ಬಾಕಿಯಿದ್ದರೂ ಅವರ ರಾಜೀನಾಮೆಯನ್ನು ಸ್ಪೀಕರ್ ಸ್ವೀಕರಿಸಿದ್ದರು ಎಂದರು.

ಅನರ್ಹತೆಯು ಮಿನಿ ವಿಚಾರಣೆಯಿದ್ದಂತೆ ಮತ್ತು ಅದು ಸಾಕ್ಷ್ಯಾಧಾರಗಳ ವಿಷಯವಾಗಿದೆ,ಅದು ಪ್ರತಿಕೂಲ ಪ್ರಕರಣವಾಗಿದೆ ಎಂದ ಅವರು,ರಾಜೀನಾಮೆ ಸಲ್ಲಿಕೆಯಾದ ಬಳಿಕ ಅದು ಸ್ವಯಿಚ್ಛೆಯಿಂದ ನೀಡಿದ್ದಾಗಿದೆಯೇ ಮತ್ತು ಪ್ರಾಮಾಣಿಕವಾಗಿದೆಯೇ ಎಂಬ ಅದರದೇ ಮಾನದಂಡಗಳ ಆಧಾರದಲ್ಲಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಒತ್ತಡಕ್ಕೆ ಸಿಲುಕಿದರೆ ಏನಾಗುತ್ತದೆ ಎನ್ನುವುದು ತನಗೆ ಗೊತ್ತು. ಆದರೆ ಇಲ್ಲಿ ಅತೃಪ್ತ ಶಾಸಕರು ಸ್ಪೀಕರ್ ಎದುರು ಎರಡು ಬಾರಿ ಹಾಜರಾಗಿದ್ದಾರೆ ಎಂದು ವಾದಿಸಿದರು. ಸಂವಿಧಾನದ ವಿಧಿ 190ರ ಅಡಿ ವಿಚಾರಣೆಯನ್ನು ದೀರ್ಘಕಾಲದವರೆಗೆ ಎಳೆಯಲು ಅಥವಾ ಅನರ್ಹತೆಯೊಂದಿಗೆ ಸೇರಿಸಲು ಅವಕಾಶವಿಲ್ಲ ಎಂದ ಅವರು,‘ಶಾಸಕನಾಗಿರಲು ನಾನು ಬಯಸದಿದ್ದರೆ ಸದನಕ್ಕೆ ಹಾಜರಾಗುವಂತೆ ನೀವು ನನ್ನನ್ನು ಬಲವಂತಗೊಳಿಸಲು ಸಾಧ್ಯವಿಲ್ಲ. ನಾನು ಪಕ್ಷಾಂತರ ಮಾಡಲು ಬಯಸುವುದಿಲ್ಲ. ನಾನು ಜನರೆದುರು ಹೋಗಲು ಬಯಸುತ್ತೇನೆ. ಸದನದಲ್ಲಿ ಮುಂದುವರಿಯುವಂತೆ ಸ್ಪೀಕರ್ ನನ್ನನ್ನು ಬಲವಂತಗೊಳಿಸುತ್ತಿದ್ದಾರೆ ’ ಎಂದು ಶಾಸಕರ ಪರವಾಗಿ ಹೇಳಿರು. ರಾಜೀನಾಮೆಯ ಕುರಿತು ನಿರ್ಧರಿಸಲೇಬೇಕು ಎಂದರು.

 ಶಾಸಕರು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳದಿದ್ದರೆ ರಾಜೀನಾಮೆಗಳು ಅಂಗೀಕಾರವಾಗಿವೆ ಎಂದೇ ಪರಿಗಣಿಸಬೇಕು. ಸ್ಪೀಕರ್ ಶಾಸಕರ ಹಕ್ಕುಗಳನ್ನು ಅತಿಕ್ರಮಿಸುತ್ತಿದ್ದಾರೆ. ಗುರವಾರ ವಿಶ್ವಾಸಮತ ಕಲಾಪ ನಡೆಯಲಿದೆ ಮತ್ತು ಹೊಸದಾಗಿ ವಿಪ್‌ನ್ನು ಹೊರಡಿಸುವುದು ಈಗಿನ ತಂತ್ರವಾಗಿದೆ. ಈ ಸರಕಾರವು ಅಲ್ಪಮತಕ್ಕಿಳಿದಿದೆ. ಶಾಸಕರ ತಲೆಯ ಮೇಲೆ ಅನರ್ಹತೆಯ ಕತ್ತಿ ತೂಗಾಡುತ್ತಿರಬೇಕು ಎಂದು ಅವರು ಬಯಸಿದ್ದಾರೆ ಎನ್ನುವುದು ಸ್ಪಷ್ಟವಿದೆ ಎಂದರು.

ಅನರ್ಹತೆ ಮತ್ತು ರಾಜೀನಾಮೆಯನ್ನು ಪ್ರತ್ಯೇಕವಾಗಿ ನಿರ್ಧರಿಸಲು ಸಾಧ್ಯವಿಲ್ಲ ಎಂದು ಹೇಳಿದ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ ಪರ ಹಿರಿಯ ನ್ಯಾಯವಾದಿ ಅಭಿಷೇಕ್ ಮನು ಸಿಂಘ್ವಿ ಅವರು,ತನ್ನ ಕಕ್ಷಿದಾರರು ತರಾತುರಿಯಲ್ಲಿ ನಿರ್ಧಾರವನ್ನು ಕೈಗೊಳ್ಳುವಂತಿಲ್ಲ. ಈ ನ್ಯಾಯಾಲಯವು ಅನರ್ಹತೆಯ ಅಸ್ತಿತ್ವ ಅಥವಾ ಅದರ ಗಂಭೀರತೆಯನ್ನು ನಿರ್ಧರಿಸುವಂತಿಲ್ಲ. ಜು.11ರಂದು ಮೊದಲ ಬಾರಿಗೆ ಶಾಸಕರು ಸ್ಪೀಕರ್ ಎದುರು ಹಾಜರಾಗಿದ್ದರು. ನಾಲ್ವರು ಶಾಸಕರು ಈವರೆಗೂ ಹಾಜರಾಗಿಲ್ಲ ಎಂದರು.

ಜು.6ರಂದು ರಾಜೀನಾಮೆಗಳನ್ನು ಸಲ್ಲಿಸಿದ ಶಾಸಕರು ಜು.10ರಂದು ಸ್ಪೀಕರ್ ಎದುರು ಹಾಜರಾದಾಗ ಅವರೇಕೆ ನಿರ್ಧಾರವನ್ನು ತೆಗೆದುಕೊಳ್ಳಲಿಲ್ಲ? ಅನರ್ಹತೆಯನ್ನು ಮೊದಲು ನಿರ್ಧರಿಸಲಾಗುವುದು ಎಂದು ಈಗ ನಮಗೆ ಹೇಳಲಾಗುತ್ತಿದೆ. ನ್ಯಾಯಾಲಯದ ವ್ಯಾಪ್ತಿಯನ್ನು ಬಲೆಯೊಳಗೆ ಸಿಲುಕಿಸುವುದು ಸಂವಿಧಾನದ ಆಶಯಗಳಿಗೆ ಅಸಹ್ಯಕರವಾಗುತ್ತದೆ ಎಂದು ಪೀಠವು ಹೇಳಿತು.

 ಪರಿಣಾಮಗಳನ್ನು ಬದಲಿಸಲಾಗದ ಆಜ್ಞಾಪತ್ರಗಳನ್ನು ಹೊರಡಿಸುವಂತೆ ನಿಮ್ಮನ್ನು ಕೋರಲಾಗಿದೆ ಎಂದು ಪೀಠಕ್ಕೆ ತಿಳಿಸಿದ ಸಿಂಘ್ವಿ,ನೀವು ಕಾಲಮಿತಿಯನ್ನು ಸೂಚಿಸಬಹುದು. ಇದು ನೀವು ಹಸ್ತಕ್ಷೇಪ ಮಾಡುವಂತಹ ಗಂಭೀರ ಪ್ರಕರಣವಲ್ಲ ಎಂದರು. ಸ್ಪೀಕರ್ ಅವರು ಬುಧವಾರ ರಾಜೀನಾಮೆ ಮತ್ತು ಅನರ್ಹತೆ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಎಂಬ ಕೊಡುಗೆಯನ್ನು ಅವರು ಪೀಠದ ಮುಂದಿರಿಸಿದರು.

ಬಹುಮತವನ್ನು ಕಳೆದುಕೊಂಡಿರುವ ಸರಕಾರವನ್ನು ರಕ್ಷಿಸಲು ಸ್ಪೀಕರ್ ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ ರೋಹಟ್ಗಿ,ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವ ಮಧ್ಯಂತರ ಆದೇಶವನ್ನು ಮುಂದುವರಿಸುವಂತೆ ಮತ್ತು 15 ಶಾಸಕರಿಗೆ ವಿಧಾನಸಭೆಗೆ ಹಾಜರಾಗುವುದರಿಂದ ವಿನಾಯಿತಿ ನೀಡುವಂತೆ ನ್ಯಾಯಾಲಯವನ್ನು ಕೋರಿದರು.

ಬಂಡುಕೋರ ಶಾಸಕರು ಸರಕಾರವನ್ನು ಉರುಳಿಸಲು ಬಯಸಿದ್ದಾರೆ. ನ್ಯಾಯಾಲಯವು ಸ್ಪೀಕರ್ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಬೇಕು ಮತ್ತು ರಾಜಕೀಯ ಗೋಜಲಿನಲ್ಲಿ ಸಿಲುಕಬೇಕು ಎಂದು ಅವರು ಇಚ್ಛಿಸಿದ್ದಾರೆ ಎಂದು ಹೇಳಿದ ಕುಮಾರಸ್ವಾಮಿ ಪರ ವಕೀಲ ರಾಜೀವ್ ಧವನ್ ಅವರು,ನ್ಯಾಯಾಲಯವು ತನ್ನ ಯಥಾಸ್ಥಿತಿ ಆದೇಶವನ್ನು ಕಾಯ್ದುಕೊಂಡರೆ ರಾಜಕೀಯ ಕೋಲಾಹಲ ಉಂಟಾಗುತ್ತದೆ ಎಂದು ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News